ನಾಪೆÇೀಕ್ಲು, ಫೆ. 15: ಇದು ಮೊಬೈಲ್ ಯುಗ. ಬೆರಳ ತುದಿಯಿಂದ ಏನನ್ನೂ ಬೇಕಾದರೂ ಮಾಡಬಹುದು ಎನ್ನುವ ಭ್ರಮೆ ಈಗಿನ ಜನರದ್ದು. ಆದರೆ ಈ ಬೆರಳ ತುದಿಯಿಂದಲೇ ಮೋಸಕ್ಕೆ ಒಳಗಾಗಿ ಕಷ್ಟಪಡುವವರ ಕಥೆ ಯಾರಿಗೂ ಅರಿವಿಲ್ಲ. ಇದಕ್ಕೆ ಸಾಕ್ಷಿ ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕ ಟಿ.ಆರ್. ಸುಬ್ರಮಣಿ.

ಇವರು ನಾಪೆÇೀಕ್ಲು ಕೆನರಾ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದಾರೆ. ಇವರ ಖಾತೆಯಿಂದ ಹಣ ತೆಗೆದರೂ, ಖಾತೆಗೆ ಹಣ ಸಂದಾಯ ಮಾಡಿದರೂ ಇವರ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಆದರೆ ಇದ್ದಕ್ಕಿದ್ದಂತೆ ಇವರ ಖಾತೆಯಲ್ಲಿ ಹಣ ಕಡಿಮೆಯಾಗುತ್ತಿರುವ ಬಗ್ಗೆ ಅನುಮಾನಗೊಂಡ ಇವರು ಪಾಸ್ ಪುಸ್ತಕದ ನೋಂದಾವಣೆ ಮಾಡಿಸಿದರು. ಆಗ ಅವರಿಗೆ ಅರಿವಾಗಿದ್ದು ತಮ್ಮ ಖಾತೆಯಿಂದ ಬರೋಬ್ಬರಿ 43,720 ರೂ. ಕಳ್ಳತನವಾಗಿರುವದು. ಇವರು ಪೆಟಿಎಂ ಖಾತೆ ಹೊಂದಲೇ ಇಲ್ಲ. ಆದರೆ ಪೆಟಿಎಂ ಮೂಲಕ ಇವರ ಖಾತೆಯಿಂದ ಹಣ ಕಳ್ಳತನವಾಗಿರುವದು ಕಂಡು ಬಂದಿದೆ. ಪಾಸ್ ಪುಸ್ತಕದಲ್ಲಿ ‘ಪೆಟಿಎಂ ನೋಡ್ದಾಮ್’ ಎಂದು ನಮೂದಾಗಿದ್ದು, 400, 800, 1600 ರೂ.ಗಳನ್ನು ಒಂದೊಂದು ಬಾರಿಗೆ ಪಡೆಯಲಾಗಿದೆ. ಒಂದೇ ದಿನದಲ್ಲಿ ಮೂರು ಬಾರಿ ಹಣ ವರ್ಗಾಯಿಸಿರುವದು ಕೂಡ ಕಂಡು ಬಂದಿದೆ. ಆದರೆ ಇದೆಲ್ಲವೂ ರಜಾ ದಿನಗಳಲ್ಲಿ ಆಗಿರುವದು ಗಮನಾರ್ಹ ಸಂಗತಿಯಾಗಿದೆ. ಈ ಬಗ್ಗೆ ಶಿಕ್ಷಕ ಸುಬ್ರಮಣಿ ನಾಪೆÇೀಕ್ಲು ಕೆನರಾ ಬ್ಯಾಂಕ್ ವ್ಯವಸ್ಥಾಪಕರಿಗೆ ದೂರು ಸಲ್ಲಿಸಿದ ಸಂದರ್ಭ 10 ದಿನಗಳ ಕಾಲಾವಕಾಶ ಕೋರಿದ ವ್ಯವಸ್ಥಾಪಕರು ನಂತರ ಈ ಬಗ್ಗೆ ಯಾವದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಮ್ಮ ಕೈತೊಳೆದುಕೊಂಡಿದ್ದಾರೆ. ನಂತರ ಇವರು ಮಡಿಕೇರಿ ಕ್ರೈಮ್ ಬ್ರಾಂಚ್‍ನಲ್ಲಿ ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿರಬೇಕೆಂದು ಇವರು ‘ಶಕ್ತಿ’ಯ ಮೂಲಕ ಕೋರಿಕೊಂಡಿದ್ದಾರೆ.

- ಪಿ.ವಿ. ಪ್ರಭಾಕರ್