ವೀರಾಜಪೇಟೆ, ಫೆ. 15: ವೀರಾಜಪೇಟೆ ಪಟ್ಟಣ ಪಂಚಾಯಿತಿ ಅವ್ಯವಸ್ಥೆಗಳ ವಿರುದ್ಧ ನಿರಂತರ ಹೋರಾಟಗಳಿಗೆ ನಾಗರಿಕ ಸಮಿತಿ ನಿರ್ಧಾರ ಕೈಗೊಂಡಿದೆ.

ನಾಗರಿಕ ಸಮಿತಿಯ ಸಭೆ ಇತ್ತೀಚೆಗೆ ಸಂಚಾಲಕ ಡಾ. ಐ.ಆರ್. ದುರ್ಗಪ್ರಸಾದ್ ಅವರ ಅಧ್ಯಕ್ಷತೆÉಯಲ್ಲಿ ನಡೆಯಿತು. 9 ಜನ ಸದಸ್ಯರನ್ನು ಹೊಸ ಸಮಿತಿಗೆ ಆಯ್ಕೆ ಮಾಡಲಾಯಿತು. ನಾಲ್ವರು ಹಿರಿಯರನ್ನು ಸಲಹೆಗಾರರನ್ನಾಗಿ ನೇಮಿಸಲಾಯಿತು. ಈ ಸಭೆ ವೀರಾಜಪೇಟೆ ನಗರದಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿತು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ವ್ಯಾಪಕ ಲಂಚದ ಹಾವಳಿ ಇದ್ದು, ಅಲ್ಲಿಗೆ ಕೆಲಸಗಳ ನಿಮಿತ್ತ ಹೋಗುವವರನ್ನು ಅನಗತ್ಯ ಷರತ್ತುಗಳನ್ನು ವಿಧಿಸಿ ತೊಂದರೆಗೀಡುಮಾಡುವುದು ಗಮನಕ್ಕೆ ಬಂದಿದೆ. ಬಹಿರಂಗವಾಗಿಯೇ ಹಣ ಕೇಳುತ್ತಿದ್ದು, ಕೊಡದಿದ್ದರೆ ಕೆಲಸ ಮಾಡಿಕೊಡುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿರುವುದು ಅನುಭವವಾಗುತ್ತಿದೆ. ಪಂಚಾಯಿತಿ ಕಚೇರಿಯಲ್ಲಿ ನಡೆಯುತ್ತಿರುವ ಲಂಚದ ಹಾವಳಿ, ವ್ಯಾಪಕ ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯರನ್ನು ಸಂಘಟಿಸಿ ನಿರಂತರ ಪ್ರತಿಭಟನಾ ಕಾಯಕ್ರಮಗಳನ್ನು ನಡೆಸಬೇಕೆಂದು ತೀರ್ಮಾನಿಸಲಾಗಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳನ್ನು ಪಂಚಾಯಿತಿ ಮುಂದಿಟ್ಟು ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ವೀರಾಜಪೇಟೆಯಲ್ಲಿರುವ ತಹಶೀಲ್ದಾರರ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಅಲ್ಲಿ ಮಧ್ಯವರ್ತಿಗಳÀ ಮೂಲಕ ಮಾತ್ರವೇ ಕೆಲಸವಾಗುವುದೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯವರ್ತಿಗಳಿಗೆ ಭಾರೀ ಮೊತ್ತವನ್ನು ಕೊಟ್ಟರೆ ಮಾತ್ರ ಕೆಲಸವಾಗುತ್ತದೆ.

ಮಧ್ಯವರ್ತಿಗಳÀನ್ನು ಮುಂದಿಟ್ಟುಕೊಂಡು ಅಲ್ಲಿ ನಡೆಸುತ್ತಿರುವ ಶೋಷಣೆಯ ವಿರುದ್ಧ ಧ್ವನಿ ಮೊಳಗಿಸಿ ಮುಂದಿನ ದಿನಗಳಲ್ಲಿ ನಿರಂತರ ಜನಾಂದೋಲನಾ ಕಾರ್ಯಕ್ರಮಗಳನ್ನು ನಡೆಸಲೂ ತೀರ್ಮಾನಿಸಲಾಗಿದೆ.