ವೀರಾಜಪೇಟೆ, ಫೆ. 15: ತಂಬಾಕು ಇತರ ಮಾದಕ ಸೇವನೆಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಈ ಜಾಗೃತ ಸಮಿತಿಯ ಕಾರ್ಯಾಚರಣೆಯಿಂದ ತಂಬಾಕು ಸೇವನೆಯ ನಿಯಂತ್ರಣ ಯಶಸ್ಸಿನ ಹಾದಿಯತ್ತ ಸಾಗಿದೆ ಎಂದು ಭಾರತ ಸರಕಾರದ ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಹಾಗೂ ತಂಬಾಕು ನಿಯಂತ್ರಣ ಮಂಡಳಿ ನಿರ್ದೇಶಕ ದೇವೇಶ್ ದೇವಲ್ ಹೇಳಿದರು.
ವೀರಾಜಪೇಟೆಯ ಮಗ್ಗುಲದಲ್ಲಿರುವ ಕೊಡಗು ದಂತ ವೈದ್ಯಕೀಯ ಮಹಾ ವಿದ್ಯಾಲಯದ ನೇತೃತ್ವದಲ್ಲಿ ಅಂತರರಾಷ್ಟ್ರೀಯ ದಂತ ಶಿಕ್ಷಣ ಸಂಘದ ವತಿಯಿಂದ ನಾಲ್ಕನೇ ಪ್ಯಾನ್ ಗ್ಲೋಬಲ್ ಪದವೀಧರರ ದಂತ ವಿಜ್ಞಾನ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ದೇವೇಶ್ ದೇವಲ್ ಅವರು, ಶಿಕ್ಷಣ ಮತ್ತು ಸಂಶೋಧನೆಯನ್ನು ನಿಯಂತ್ರಿಸುವ ರಾಷ್ಟ್ರೀಯ ನೀತಿಗಳು ಇಂದು ಅಸ್ತಿತ್ವದಲ್ಲಿಲ್ಲದ ಕಾರಣ ಭಾರತದಲ್ಲಿ ಸಂಶೋಧನೆಗಳು ವಿಫಲಗೊಂಡಿದೆ. ಏಳು ದಶಕಗಳ ಅಸಮರ್ಥತೆಯನ್ನು ಸರಿಪಡಿಸಲು ಮೂಲಭೂತ ಸುಧಾರಣೆಯ ಅಗತ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಡೀನ್ ಡಾ. ಸುನಿಲ್ ಮುದ್ದಯ್ಯ ವಹಿಸಿದ್ದರು. ವಿಚಾರ ಸಂಕೀರಣದಲ್ಲಿ ಅತಿಥಿಗಳಾಗಿ ಶ್ರೀಲಂಕಾ ಪೆರಾಡೆನಿಐ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಡಾ. ಅನಿಲ್ ಕುಮಾರ್, ವಿಯೆಟ್ನಾಂನ ಡಾ. ದೇವಿ ಫರಿಡಾ ಪ್ರೊ. ಆಬು ಹಸನ್, ಮಲೇಷ್ಯಾದ ಡಾ. ಅರುಣಿ ತಿಲಕರತ್ನ ಮತ್ತಿತರರು ಭಾಗವಹಿಸಿದ್ದರು. ವಿಚಾರ ಸಂಕಿರಣದಲ್ಲಿ 20 ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಮತ್ತು ಭಾರತ ದೇಶದ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲ ಡಾ. ಕೆ.ಪಿ. ಪೊನ್ನಪ್ಪ, ಡಾ. ಜಿತೇಶ್ ಜೈನ್ ಉಪಸ್ಥಿತರಿದ್ದರು.