ಕೋಳಿ ಮಾಂಸದಲ್ಲಿ ಕೊರೊನಾ ವೈರಸ್ ಇಲ್ಲ ಬೆಂಗಳೂರು, ಫೆ. 15: ಕೋಳಿ ಮಾಂಸದಲ್ಲಿ ಕೋವಿಡ್ - 19 ಅಂದರೆ ಕೊರೊನಾ ವೈರಸ್ ಸೋಂಕು ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಚೀನಾದಲ್ಲಿ ಕಾಣಿಸಿಕೊಂಡಿರುವ ಕೋವಿಡ್ - 19 ವೈರಸ್ ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿ ಹಾಗೂ ತಪ್ಪು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ವದಂತಿಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ನಮ್ಮ ದೇಶದಲ್ಲಿ ಕೋಳಿಗಳಿಗೆ ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡ ಬಗ್ಗೆ ಇದುವರೆಗೆ ಯಾವುದೇ ವರದಿಗಳಿಲ್ಲ. ಈ ವೈರಾಣು ಸೋಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವೇನೂ ಇಲ್ಲ. ಸೋಂಕು-ಪೀಡಿತ ಮನುಷ್ಯರ ಸಂಪರ್ಕದಿಂದ ಮಾತ್ರ ಈ ಸೋಂಕು ಇತರರಿಗೆ ಹರಡುತ್ತದೆ ಎಂದು ಹೇಳಿದೆ. ಪಾಕ್ ಪರ ಘೋಷಣೆ : ವಿದ್ಯಾರ್ಥಿಗಳು ಅಮಾನತು ಹುಬ್ಬಳ್ಳಿ, ಫೆ. 15: ನಗರದ ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜಿನ ಕಾಶ್ಮಿರ ಮೂಲದ ಮೂವರು ವಿದ್ಯಾರ್ಥಿಗಳು 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ. ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಓದುತ್ತಿರುವ ಅಮೀರ್, ಬಾಸೀತ್ ಮತ್ತು ತಾಲೀಬ್ ಎಂಬ ವಿದ್ಯಾರ್ಥಿಗಳು ಪುಲ್ವಾಮಾ ದಾಳಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಪ್ರಾಚಾರ್ಯ ಡಾ. ಬಸವರಾಜ ಆನಾಮಿ, ‘ಸರ್ಕಾರಿ ಕೋಟಾದ ಅಡಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಸೀಟು ಪಡೆದಿದ್ದರು. ವಿದ್ಯಾರ್ಥಿಗಳ ವೀಡಿಯೋ ಗಮನಿಸಿ ಪೆÇಲೀಸರಿಗೆ ನಾವೇ ಮಾಹಿತಿ ನೀಡಿದ್ದೇವೆ. ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಗೋಕುಲ ಠಾಣೆ ಪೆÇಲೀಸರು ಆಗಮಿಸಿ, ವಿದ್ಯಾರ್ಥಿಗಳಿಂದ ಹಾಗೂ ಪ್ರಾಚಾರ್ಯ ರಿಂದ ಮಾಹಿತಿ ಪಡೆಯುತ್ತಿದ್ದಾರೆ. ಬಜರಂಗ ದಳದ ಕಾರ್ಯಕರ್ತರು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನಾಲ್ವರು ಮಕ್ಕಳು ಸಜೀವ ದಹನ

ಚಂಡೀಘರ್, ಫೆ. 15: ಖಾಸಗಿ ಶಾಲಾ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ನಾಲ್ವರು ಮಕ್ಕಳು ಸಜೀವ ದಹನವಾಗಿರುವ ಭೀಭತ್ಸ ಘಟನೆ ಪಂಜಾಬಿನಲ್ಲಿ ನಡೆದಿದೆ. ಸಂಗ್ರೂರ್ ಜಿಲ್ಲೆಯ ಲಾಂಗೋವಾಲ್ ಬಳಿ ಶನಿವಾರ ನಡೆದ ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಸೇರಿದಂತೆ ನಾಲ್ವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದ ವೇಳೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಹನ್ನೆರಡು ವಿದ್ಯಾರ್ಥಿಗಳನ್ನು ಶಾಲಾ ವ್ಯಾನ್ ಸಾಗಿಸುತ್ತಿತ್ತು. ನಗರದ ಲಾಂಗೋವಲ್-ಸಿಡ್ಸಮಾಚಾರ್ ರಸ್ತೆಯಲ್ಲಿ ಚಲಿಸುವಾಗ ವ್ಯಾನಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ವೇಳೆ ಹತ್ತಿರದ ಹೊಲಗಳಲ್ಲಿ ಕೆಲಸ ಮಾಡುವ ಜನರು ಎಂಟು ಮಕ್ಕಳನ್ನು ಸುರಕ್ಷಿತವಾಗಿ ವ್ಯಾನ್‍ನಿಂದ ಹೊರಗೆ ತಂದಿದ್ದಾರೆ. ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ವ್ಯಾನ್ ಸಂಗ್ರೂರಿನ ಸಿಮ್ರಾನ್ ಪಬ್ಲಿಕ್ ಶಾಲೆಗೆ ಸೇರಿತ್ತು. ಚಾಲಕನಿಗೆ ಬೆಂಕಿಯ ಬಗ್ಗೆ ತಿಳಿದಿರಲಿಲ್ಲ, ನಾವು ವ್ಯಾನನ್ನು ಹಿಂಬಾಲಿಸಿ ವಾಹನದ ಹಿಂಭಾಗದಲ್ಲಿ ಬೆಂಕಿಯ ಬಗ್ಗೆ ಮಾಹಿತಿ ನೀಡಿದೆವು.ಆಗ ಚಾಲಕ ವಾಹನವನ್ನು ತಕ್ಷಣ ನಿಲ್ಲಿಸಿದ್ದಾನೆ. ಸ್ಥಳದಲ್ಲಿ ಜನರು ಜಮಾಯಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಅವರು ವಾಹನದ ಕಿಟಕಿ ಗಾಜನ್ನು ಒಡೆದು ಮಕ್ಕಳನ್ನು ಹೊರಗೆಳೆದರು. ಆದರೆ. ನಾಲ್ಕು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಉಳಿದವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.