ಸೋಮವಾರಪೇಟೆ, ಫೆ. 16: ಸಮೀಪದ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಪಾರ್ವತಿ ಗ್ಯಾಸ್ ಏಜೆನ್ಸಿ ವತಿಯಿಂದ ಸುರಕ್ಷಿತವಾಗಿ ಅಡುಗೆ ಅನಿಲ ಬಳಸುವ ಬಗ್ಗೆ ಹಾಗೂ 5 ಕೆ.ಜಿ. ಗ್ಯಾಸ್ ಸಂಪರ್ಕ ವಿತರಣಾ ಕಾರ್ಯಕ್ರಮ ನಡೆಯಿತು.

ಫಲಾನುಭವಿಗಳಿಗೆ ತಾಲೂಕು ಪಂಚಾಯಿತಿ ಸದಸ್ಯೆ ಸಬಿತಾ ಚೆನ್ನಕೇಶವ ಅವರು ಅಡುಗೆ ಅನಿಲ ಸಂಪರ್ಕ ವಿತರಿಸಿದರು. ನಂತರ ಮಾತನಾಡಿ, ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಿಂದಾಗಿ ಸಾಕಷ್ಟು ಬಡ ಕುಟುಂಬಗಳು ಉಚಿತವಾಗಿ ಅಡುಗೆ ಅನಿಲ ಪಡೆಯುವಂತಾಗಿದೆ. ಫಲಾನುಭವಿ ಗಳು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದರು.

ಅಗ್ನಿಶಾಮಕ ಠಾಣೆಯ ಅಧಿಕಾರಿ ಎನ್.ಎ. ಲವ ಅವರು ಸುರಕ್ಷಿತವಾಗಿ ಅಡುಗೆ ಅನಿಲ ಬಳಸುವ ಬಗ್ಗೆ ಮಾಹಿತಿ ನೀಡಿದರು. ಗ್ಯಾಸ್ ಪೆಟ್ರೋಲ್‍ಗಿಂತಲೂ ಹೆಚ್ಚು ದಹನಾ ಶಕ್ತಿ ಹೊಂದಿದ್ದು, ಬಳಕೆದಾರರು ಸುರಕ್ಷತೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಹೆಚ್ಚಿನ ಅನಾಹುತ ನಡೆಯುವ ಸಂದರ್ಭ ಕಂಡುಬಂದರೆ, ಕೂಡಲೇ ಸಮೀಪದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಬೇಕೆಂದರು.

ಅಗ್ನಿಶಾಮಕ ಠಾಣೆಯ ಫೈರ್‍ಮೆನ್ ಹೆಚ್.ಎನ್. ಲಕ್ಷ್ಮಿಕುಮಾರ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು. ಈ ಸಂದರ್ಭ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ಶಾಲಾ ಮುಖ್ಯ ಶಿಕ್ಷಕಿ ಇಂದಿರ, ದೈಹಿಕ ಶಿಕ್ಷಣ ಶಿಕ್ಷಕ ಅಜಿತ್, ಸಂಸ್ಥೆಯ ವ್ಯವಸ್ಥಾಪಕ ಎಂ.ಎಸ್. ಸತೀಶ್ ಉಪಸ್ಥಿತರಿದ್ದರು.