ಶ್ರೀಮಂಗಲ, ಫೆ. 14: ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲೆಯ ರೈತ ಸಂಘದ (ಪ್ರೊ.ನಂಜುಂಡಸ್ವಾಮಿ ಬಣ) ಪದಾಧಿಕಾರಿಗಳು ಬೆಂಗಳೂರಿನ ಅರಮನೆ ರಸ್ತೆಯ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಕೊಡಗಿನ ರೈತರ ಹಾಗೂ ಬೆಳೆಗಾರರ ಸಮಸ್ಯೆ ಬಗ್ಗೆ ಗಮನ ಸೆಳೆದರು.ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿದ ರೈತ ಸಂಘದ ಕಾರ್ಯಕರ್ತರು ಸಚಿವ ಬಿ.ಸಿ.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಜಿಲ್ಲೆಯ ರೈತ ಸಂಘದ ನಿಯೋಗ ಮುಖ್ಯವಾಗಿ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ರೈತರು ಹಾಗೂ ಬೆಳೆಗಾರರು ಬೆಳೆ ಹಾಗೂ ಭೂಮಿ ನಾಶವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ, ಜಿಲ್ಲೆಯ ಈ ಸಮುದಾಯಕ್ಕೆ ಪುನಶ್ಚೇತನಕ್ಕೆ ಅಗತ್ಯ ಪ್ಯಾಕೇಜ್ ಪ್ರಕಟಿಸಲು ಮನವಿ ಮಾಡಿದರು.ಕಾಫಿ ಬೆಳೆಯನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಬೆಳೆಗಳಿಗೆ 10 ಹೆಚ್‍ಪಿವರೆಗಿನ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಈ ಸೌಲಭ್ಯವನ್ನುಕಾಫಿ ಬೆಳೆಗಾರರಿಗೂ ನೀಡುವಂತೆ ಮನವಿ ಮಾಡಿದರು.ಕಾಳುಮೆಣಸು ಅಕ್ರಮ ಆಮದಿನಿಂದ

(ಮೊದಲ ಪುಟದಿಂದ) ಕಾಳು ಮೆಣಸು ದರ ಕುಸಿತವಾಗಿದ್ದು, ಆಮದು ತಡೆಗಟ್ಟಬೇಕು. ಕಾಫಿ ಹಾಗೂ ಕಾಳುಮೆಣಸು ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸುವಂತೆ ಹಾಗೂ ಭತ್ತದ ಬೆಳೆಗೂ ಸೂಕ್ತ ಬೆಂಬಲ ಬೆಲೆ ನೀಡಬೇಕು. ಈಗ ನೀಡುತ್ತಿರುವ ಬೆಂಬಲ ಬೆಲೆಯಿಂದ ರೈತನಿಗೆ ಉತ್ಪಾದನಾ ವೆಚ್ಚ ದಕ್ಕುತ್ತಿಲ್ಲ. ಕೊಡಗಿನಲ್ಲಿ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಪಾಳುಬಿಟ್ಟಿರುವ ಭತ್ತದ ಗದ್ದೆಗಳಲ್ಲಿ ಕೃಷಿ ಮಾಡಲು ಸರಕಾರ ಪ್ರೋತ್ಸಾಹದನ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಕೊಡಗಿನಲ್ಲಿ ಕಾಡಾನೆ ಮತ್ತು ಹುಲಿ ಹಾವಳಿ ಮಿತಿಮೀರಿದ್ದು ಇದರಿಂದ ಮಾನವ ಜೀವ ಹಾನಿ ಮತ್ತು ಜಾನುವಾರುಗಳು ಬಲಿಯಾಗುತ್ತಿವೆ. ಇದಲ್ಲದೆ, ಭಾರೀ ಪ್ರಮಾಣದಲ್ಲಿ ಬೆಳೆ ನಾಶವಾಗುತ್ತಿದೆ ಇದಕ್ಕೆ ಶಾಶ್ವತ ಪರಿಹಾರ ಕ್ರಮ ಕಲ್ಪಿಸಬೇಕೆಂದು ಮನವಿ ಮಾಡಿದರು. ಮನವಿ ಆಲಿಸಿದ ಸಚಿವ ಬಿ.ಸಿ.ಪಾಟೀಲ್ ಅವರು ತಾನು ಸಹ ರೈತನಾಗಿದ್ದು, ರೈತರ ಸಮಸ್ಯೆಯನ್ನು ಸರಕಾರದ ಮಟ್ಟದಲ್ಲಿ ಸಮಾಲೋಚನೆ ಮಾಡಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದುಜಿಲ್ಲಾರೈತ ಸಂಘದ ಮುಖಂಡರು ತಿಳಿಸಿದ್ದಾರೆ.

ಕೊಡಗು ಜಿಲ್ಲಾರೈತ ಸಂಘದ ಮುಖಂಡರಾದ ಚಂಗುಲಂಡ ರಾಜಪ್ಪ, ಬಾದುಮಂಡ ಮಹೇಶ್, ಬಿದ್ದಪ್ಪ, ಚೊಟ್ಟೆಯಂಡಮಾಡ ಮಂಜುದೇವಯ್ಯ, ಕಿರಣ್‍ಮಾಚಯ್ಯ, ಪ್ರವೀಣ್ ಪೊನ್ನಪ್ಪ, ಡಿ.ಎಸ್.ಲೋಕೇಶ್, ಚೇಮಿರ ಮಿಥುನ್, ಮಾಯಣಮಾಡ ಮೋಹನ್, ಚೆಪ್ಪುಡೀರ ಮಹೇಶ್, ಗುಡಿಯಂಗಡ ಪೂವಪ್ಪ, ಕಳ್ಳಿಚಂಡ ರೇಖಾ, ನಟೇಶ, ನೆಲ್ಲೀರ ವಿಶು ಮುಂತಾದವರು ಹಾಜರಿದ್ದರು.