ಆಲೂರು-ಸಿದ್ದಾಪುರ, ಫೆ. 14: ಬೆಸೂರು ಗ್ರಾ.ಪಂ.ಯ ನ್ಯಾಯದಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸಮ್ಮಿಲನ ಗುರುವಂದನಾ ಕಾರ್ಯಕ್ರಮ ನಡೆಯಿತು.
ಅತಿಥಿಗಳಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪಾಲ್ಗೊಂಡಿದ್ದರು. ಪೋಷಕರು ಆಸ್ತಿ ಸಂಪಾದನೆ ಮಾಡದಿದ್ದರೂ ಪರವಾಗಿಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡುವಂತೆ ಪೋಷಕರಿಗೆ ಅವರು ಕಿವಿಮಾತು ಹೇಳಿದರು.
ಪೋಷಕರು ಇಂಗ್ಲೀಷ್ ವ್ಯಾಮೋಹವನ್ನು ಬಿಟ್ಟು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿದಲ್ಲಿ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ ಇದೆ. ಇಂದು ಸರಕಾರ ಮತ್ತು ಶಿಕ್ಷಣ ಇಲಾಖೆ ಯಿಂದ ನಾನಾ ಸೌಲಭ್ಯ ಗಳಿರುವುದ್ದರಿಂದ ಪೋಷಕರು ಮತ್ತು ಮಕ್ಕಳು ಸದುಪಯೋಗಿಸಿಕೊಳ್ಳಿ ಎಂದರು.
ಮಕ್ಕಳು ಸಮಯ ಪಾಲನೆ, ಶಿಸ್ತು ನಿಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಜಾತಿ, ಧರ್ಮ, ಮೇಲು, ಕೀಳು ಮರೆತು ಎಲ್ಲಾರನ್ನೂ ಒಂದೆಡೆ ಬೆರೆಯುವ ಸಮ್ಮಿಲನ ಕಾರ್ಯಕ್ರಮ ಶ್ಲಾಘನಿಯವಾಗಿದೆ ಎಂದರು.
ಜಿ.ಪಂ. ಸದಸ್ಯ ಸಿ.ಪಿ. ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಮ್ಮಿ ಇಲ್ಲ. ಸರಕಾರ ಸರಕಾರಿ ಶಾಲೆ ಮತ್ತು ವಿದ್ಯಾರ್ಥಿಗಳ ಪ್ರಗತಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಬೇಕೆಂದರು. ಪೋಷಕರು ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದು ವಿಪರ್ಯಾಸ ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್. ಚೇತನ್ ಮಾತನಾಡಿ, ಸರಕಾರ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿರುವ ಪರಿಣಾಮದಿಂದ ಇಂದು ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದೆ ಎಂದು ವಿಷಾದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಮಾತನಾಡಿ, ಇಂದು ಸರಕಾರಿ ಶಾಲೆಗಳಲ್ಲಿ ಬದಲಾವಣೆ ಯಾಗುತ್ತಿದ್ದು, ಸಂಸ್ಕಾರ-ಸಂಸ್ಕøತಿ ಸರಕಾರಿ ಶಾಲೆಗಳಲ್ಲಿ ಸಿಗುವಷ್ಟು ಖಾಸಗಿ ಶಾಲೆಗಳಲ್ಲಿ ಸಿಗುತ್ತಿಲ್ಲ ಎಂದರು. ನ್ಯಾಯದಹಳ್ಳ ಶಾಲೆಗೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಹಳೆ ವಿದ್ಯಾರ್ಥಿ ಸಂಘದವರು ಮುಂದೆ ಬಂದಲ್ಲಿ ಎಲ್ಕೆಜಿ, ಯುಕೆಜಿ ತೆರೆಯಲು ಶಿಕ್ಷಣ ಇಲಾಖೆ ಅನುಮತಿ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬೆಸೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಎಸ್.ಡಿ,ಎಂ.ಸಿ. ಅಧ್ಯಕ್ಷ ಗುರುಮೂರ್ತಿ, ಕುಶಾಲನಗರದ ಶಿಕ್ಷಕ ಸದಾಶಿವ ಪಲ್ಲೇದ್, ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಂಜುಳ, ಡಾ. ಪುಷ್ಪವೇಣಿ, ಮಮತ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀಧರ್, ವಿದ್ಯಾ ಗಣೇಶ್, ಸಾವಯವ ಕೃಷಿಕ ರುದ್ರಪ್ಪ, ಬೆಂಗಳೂರು ಚೆಸ್ಕಾಂ ಕಾರ್ಯ ನಿರ್ವಹಣಾಧಿಕಾರಿ ತಿಮ್ಮೇಗೌಡ, ಮೈಸೂರು ಭೂ ನಿಗಮ ಅಧಿಕಾರಿ ತಿರುಮಲೇಶ್, ಬಸವರಾಜ್ ಸಿಆರ್ಪಿ ಜಾನ್ಪಾಲ್ ಡಿಸೋಜ, ಜೆ.ಡಿ. ಸುರೇಶ್, ಶಿಕ್ಷಕಿ ಕವಿತ, ಮೋಹನ್ ಪಾಳೇಗಾರ್ ಬೆಸೂರು ಗ್ರಾಮ ಪಂಚಾಯಿತಿ ಸದಸ್ಯ ವಸಂತ್, ಗೌರಿ ಮುಂತಾದವರು ಇದ್ದರು. ಈ ಸಂದರ್ಭ ಸಾಧಕರನ್ನು ಸನ್ಮಾನಿಸಲಾಯಿತು.