ಕೂಡಿಗೆ, ಫೆ. 14 : ಜಿಲ್ಲೆಯ ಗಡಿಭಾಗದ ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಅಳುವಾರದಲ್ಲಿ ಸ್ಥಾಪನೆಯಾಗಿರುವ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರವನ್ನು ಕೊಡಗು ಕಾವೇರಿ ವಿಶ್ವವಿದ್ಯಾನಿಲಯ ಎಂದು ಪ್ರತ್ಯೇಕವಾಗಿ ಸ್ಥಾಪಿಸಲು ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕÀ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಚಿಕ್ಕಅಳುವಾರ ಗ್ರಾಮಕ್ಕೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂದರ್ಭ ಶಾಸಕರು ಕೊಡಗಿಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆಯ ಬಗ್ಗೆ ತಿಳಿಸಿದರು.
ಈ ಕೇಂದ್ರವು ಸಮಾಜಕ್ಕೆ ನೂರಾರು ಪ್ರಜ್ಞಾವಂತ ನಾಗರಿಕರನ್ನು ನೀಡುವಲ್ಲಿ ಯಶಸ್ವಿಯಾಗಿದೆ. 80 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸ್ನಾತಕೋತ್ತರ ಕೇಂದ್ರದಲ್ಲಿ ಇದೀಗ 500ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಸಾರಿಗೆ ವ್ಯವಸ್ಥೆ, ಇದೀಗ ರಸ್ತೆ ಅಗಲೀಕರಣ ಮತ್ತು ನೂತನ ರಸ್ತೆಯು ತೊರೆನೂರು-ಚಿಕ್ಕಅಳುವಾರದಲ್ಲಿ ನಡೆಯುತ್ತಿದೆ. ಸರ್ಕಾರಿ ಬಸ್ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುತ್ತಿದೆ.
ಕೇಂದ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಇದೀಗ ಮಹಿಳಾ ಮತ್ತು ಪುರುಷರ ಪ್ರತ್ಯೇಕ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ ಅಭಿವೃದ್ಧಿ ಕಾರ್ಯ ನಡೆಸಲು ಮುಂದಾಗಿ ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಈ ಎಲ್ಲಾ ಪ್ರಯೋಜನಗಳು ಚಿಕ್ಕಅಳುವಾರದಲ್ಲಿ ಇರುವುದರಿಂದ ಈ ಕೇಂದ್ರವನ್ನು ಕೊಡಗು ಕಾವೇರಿ ವಿಶ್ವವಿದ್ಯಾನಿಲಯವಾಗಿ ಪ್ರತ್ಯೇಕವಾಗಿ ಸ್ಥಾಪಿಸಲು ರಾಜ್ಯ ಸರ್ಕಾರದ ಮುಖ್ಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಅದೇ ರೀತಿ ಜಿಲ್ಲೆಗೆ ಬೇಕಾಗಿರುವ ಮಿನಿ ವಿಮಾನ ನಿಲ್ದಾಣದ ಬಗ್ಗೆಯೂ ಚರ್ಚಿಸಲಾಗುವುದು ಎಂದರು.