ಕೂಡಿಗೆ, ಫೆ. 14: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಹಾಗೂ ಅರ್ಜಿಗಳನ್ನು ನೀಡುವ ಬಗ್ಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆಯು ತಾ. 15ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಶಿರಂಗಾಲದ ನಾಮಧಾರಿ ಸಮುದಾಯ ಭವನದಲ್ಲಿ ನಡೆಯಲಿದೆ.

ಹಳ್ಳಿಗಳ ಕಡೆಗೆ ಅಧಿಕಾರಿಗಳ ನಡಿಗೆ ಎಂಬ ಕಾರ್ಯಕ್ರಮದಡಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಗ್ರಾಮಲೆಕ್ಕಾಧಿಕಾರಿಗಳು ಭಾಗವಹಿಸುವರು.

ಗ್ರಾಮಸ್ಥರು ವಿವಿಧ ಮಾಸಾಸನ, ಪೌತಿಖಾತೆ ಮತ್ತು ಇತರೆ ಖಾತೆ ವರ್ಗಾವಣೆ, ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ, ಪಹಣಿಗಳಲ್ಲಿ ತಿದ್ದುಪಡಿ, ಸರ್ವೆ ಇಲಾಖೆಗೆ ಸಂಬಂಧಿಸಿದ ಪೋಡಿ, ದಾರಿ ವಿವಾದ ಹದ್ದುಬಸ್ತು, ಪ್ರಕೃತಿ ವಿಕೋಪ ಪರಿಹಾರ ಕಾರ್ಯದ, ಪಹಣಿ ಕಲಂ3 ಮತ್ತು 9ಕ್ಕೆ ಸಂಬಂಧಿಸಿದ ತಿದ್ದುಪಡಿ, ಕಂದಾಯ ನಿಗದಿಗೆ ಸಂಬಂಧಿಸಿದ ಅರ್ಜಿಗಳು ಸೇರಿದಂತೆ ಇನ್ನಿತರ ಅರ್ಜಿಗಳನ್ನು ಸಭೆಯಲ್ಲಿ ಸಲ್ಲಿಸಬಹುದು. ಹಾಗೂ ಗ್ರಾಮ ವ್ಯಾಪ್ತಿಯಲ್ಲಿನ ಅಶುಚಿತ್ವ, ಮತ್ತಿತರ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆಯಬಹುದು.

ತಹಶೀಲ್ದಾರ್ ಭೇಟಿ

ಶಿರಂಗಾಲ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ಆಯೋಜಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ವೇದಿಕೆ ಸಿದ್ಧತೆ, ಸಾರ್ವಜನಿಕರಿಗೆ ಅಸನ ವ್ಯವಸ್ಥೆ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳ ಕುರಿತು ಗ್ರಾ.ಪಂ. ಅಧ್ಯಕ್ಷ ಮಂಜುನಾಥ್, ಸದಸ್ಯರು ಹಾಗೂ ಗ್ರಾಮದ ಮುಖಂಡರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭ ಕಂದಾಯ ನಿರೀಕ್ಷಕ ಮಧುಕುಮಾರ್,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಎಚ್.ಡಿ.ಹರೀಶ್ ಹಾಗೂ ಊರಿನ ಪ್ರಮುಖರು ಇದ್ದರು.