ವೀರಾಜಪೇಟೆ, ಫೆ. 13: ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ಲೂರ್ದು ಮಾತೆ ಹಾಗೂ ಸಂತ ಅನ್ನಮ್ಮನವರ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಾಲ್ಕು ದಿನಗಳ ಕಾಲ ಆಚರಿಸಲಾಯಿತು.
ತಾ. 8 ರಂದು ಧ್ವಜಾರೋಹಣ ನಡೆದು ಬಳಿಕ ತಾ. 9 ಮತ್ತು 10 ರಂದು ಜಪಸರ ಹಾಗೂ ದಿವ್ಯ ಬಲಿಪೂಜೆಯೊಂದಿಗೆ ಮಕ್ಕಳಿಗೆ ಪರಮ ಪ್ರಸಾದ-ಸಂಸ್ಕಾರ ದಿವ್ಯ ಬಲಿಪೂಜೆ ನಡೆಯಿತು. ತಾ. 11 ರ ಮಹೋತ್ಸವದಂದು ಮೈಸೂರು ಧರ್ಮ ಪ್ರಾಂತ್ಯದ ಗುರುಗಳಾದ ಸಿ. ರಾಯಪ್ಪ ಅವರಿಂದ ದೇವಾಲಯದಲ್ಲಿ ಆಡಂಬರ ಗಾಯನ ಬಲಿಪೂಜೆ ನಡೆಯಿತು. ಈ ವೇಳೆ ಸಿ. ರಾಯಪ್ಪ ತಮ್ಮ ಆಶಿರ್ವಚನದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸುಸಂಸ್ಕøತ ಜೀವನದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು. ಉತ್ತಮ ಶಿಕ್ಷಣ ನೀಡುವುದರೊಂದಿಗೆ ಅವರನ್ನು ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರು ಗುರು ಹಿರಿಯರನ್ನು ಗೌರವದಿಂದ ಕಾಣುವಂತೆ ನುಡಿದರು.
ಬಳಿಕ ಸಂಜೆ ಲೂರ್ದು ಮಾತೆ ಹಾಗೂ ಸಂತ ಅನ್ನಮ್ಮನ ವಿದ್ಯುತ್ ದೀಪಾಲಂಕೃತವಾದ ಮಂಟಪಗಳು ವಾದ್ಯಗೋಷ್ಠಿಯೊಂದಿಗೆ ಕ್ರೈಸ್ತಬಾಂಧವರು ಅಪಾರ ಸಂಖ್ಯೆಯಲ್ಲಿ ಮೇಣದ ಬತ್ತಿ ಹಿಡಿದು ಸಂತ ಅನ್ನಮ್ಮ ದೇವಾಲಯದಿಂದ ಹೊರಟು ದಖ್ಖನಿ ಮೊಹಲ್ಲಾ, ತೆಲುಗರ ಬೀದಿಯಿಂದ ದೊಡ್ಡಟ್ಟಿ ಚೌಕಿಗಾಗಿ ಗಡಿಯಾರ ಕಂಬದ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ, ಗೋಣಿಕೊಪ್ಪ ರಸ್ತೆಯಿಂದ ಹಿಂದಿರುಗಿ ದೇವಾಲಯಕ್ಕೆ ಬಂದ ನಂತರ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ವೀರಾಜಪೇಟೆ ಧರ್ಮಗುರು ಮದುಲೈಮುತ್ತು, ಸಹಾಯಕ ಗುರು ರೋಷನ್ ಬಾಬು ಇತರರು ಹಾಜರಿದ್ದರು.
ಮಹೋತ್ಸವದಲ್ಲಿ ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಧರ್ಮಕ್ಷೇತ್ರದ ಗುರುಗಳು ಹಾಗೂ ಕೊಡಗಿನ ಧರ್ಮಕೇಂದ್ರದ ಮಡಿಕೇರಿ, ಕುಶಾಲನಗರ, ವೀರಾಜಪೇಟೆ, ಕೆದಮುಳ್ಳೂರು, ಕುಟ್ಟ, ಗೋಣಿಕೋಪ್ಪಲು, ಪಾಲಿಬೆಟ್ಟ, ಸಿದ್ದಾಪುರ, ಸೋಮವಾರಪೇಟೆ, ಸುಂಟಿಕೊಪ್ಪ ಹಾಗೂ ಇತರೆಡೆಗಳಿಂದಲೂ ಧರ್ಮಗುರುಗಳು ಆಗಮಿಸಿದ್ದರು. ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.