ಮಡಿಕೇರಿ, ಫೆ. 12: ಸ್ವಚ್ಛತೆ, ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಆ ನಿಟ್ಟಿನಲ್ಲಿ ಹಸಿ ಕಸ ಮತ್ತು ಒಣ ಕಸ, ಬೇಡವಾದ ಕಸವನ್ನು ಬೇರ್ಪಡಿಸಿ ನೀಡಿದಲ್ಲಿ ಇನ್ನೂ ಹೆಚ್ಚಿನ ಸ್ವಚ್ಛತೆ ಕಾಪಾಡಬಹುದಾಗಿದೆ ಎಂದು ನಗರಸಭೆ ಪೌರಯುಕ್ತ ರಮೇಶ್ ಕೋರಿದ್ದಾರೆ.
ಸ್ವಚ್ಛ ಭಾರತದ ಅಭಿಯಾನವು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಸ ವಿಲೇವಾರಿಯನ್ನು ವ್ಯವಸ್ಥಿತವಾಗಿ ಮಾಡುವ ಉದ್ದೇಶದಿಂದ ಕೆಲವು ಕಸ ಬೇರ್ಪಡಿಸುವ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಸವನ್ನು ಮೂರು ರೀತಿಯಾಗಿ ವಿಂಗಡಣೆ ಮಾಡಿಕೊಂಡು, ಹಸಿ ಕಸ. ಒಣ ಕಸ ಹಾಗೂ ಬೇಡದ ಕಸ ಈ ರೀತಿ ವಿಂಗಡಿಸಲಾಗಿದೆ. ಕಸವನ್ನು ಬೇರ್ಪಡಿಸಲು ಕೆಲವು ಮಾರ್ಗಸೂಚಿಗಳನ್ನು ತಿಳಿಸಲಾಗಿದೆ.
ಹಸಿ ಕಸ: ಅಡುಗೆ ಮನೆ ಕಸಗಳಾದ ತರಕಾರಿ, ಹಣ್ಣು ಸಿಪ್ಪೆಗಳು, ಅಳಿದುಳಿದ ಅನ್ನ ಪದಾರ್ಥಗಳು, ಮೂಟ್ಟೆಯ ಚಿಪ್ಪುಗಳು, ಚಿಕನ್, ಮೀನು, ಮಾಂಸ ಮೂಳೆಗಳು, ಕೊಳೆತ ಹಣ್ಣುಗಳು, ತರಕಾರಿಗಳು, ಖಾದ್ಯ ಪದಾರ್ಥಗಳಿಗೆ ಅಂಟಿದ ಟಿಶ್ಯೂ ಪೇಪರ್‍ಗಳು, ಚಹಾ, ಕಾಫಿ ಪುಡಿ, ಟೀ ಬ್ಯಾಗ್‍ಗಳು, ಬಾಳೆ ಎಲೆ, ಮತ್ತಿತರ ಮನೆಯ ಕಸಗಳಾಗಿದ್ದು ಹಾಗೂ ತೋಟದ ಕಸದಲ್ಲಿ ಮರದಿಂದ ಬಿದ್ದಂತಹ ಎಲೆಗಳು ಮತ್ತು ಕೊಂಬೆಗಳು ಮೊದಲಾದವುಗಳು ಹಸಿ ಕಸಗಳಾಗಿರುತ್ತದೆ. ಈ ರೀತಿ ಹಸಿ ಕಸಗಳನ್ನು ವಿಂಗಡಿಸುವುದರಿಂದ ಇದನ್ನು ಗೊಬ್ಬರವನ್ನಾಗಿ ಉಪಯೋಗಿಸ ಬಹುದಾಗಿದೆ.
ಒಣ ಕಸ: ಒಣ ಕಸಗಳು ಯಾವುವೆಂದರೆ, ಪ್ಲಾಸ್ಟಿಕ್ (ಮಣ್ಣಾಗಿದ್ದರೆ ತೊಳೆಯಬೇಕು) ಪ್ಲಾಸ್ಟಿಕ್ ಕವರ್, ಬಾಟಲ್‍ಗಳು, ಡಬ್ಬಿಗಳು, ಮಿಠಾಯಿ ಹೊದಿಕೆಗಳು, ಹಾಲು, ಮೊಸರು ಪ್ಯಾಕೇಟ್‍ಗಳು, ಇವು ಪ್ಲಾಸ್ಟಿಕ್ ವಸ್ತುಗಳಾದರೆ, ಕಾಗದ ವಸ್ತುಗಳು, ರಟ್ಟಿನ ಡಬ್ಬಿಗಳು, ಟೆಟ್ರಾಪ್ಯಾಕ್, ಪೇಪರ್ ಬಟ್ಟಲುಗಳು ಮತ್ತು ಪ್ಲೇಟುಗಳು, ಲೋಹದ ವಸ್ತುಗಳಾದ ಹಳೆಯ ಪಾತ್ರೆಗಳು, ತಗಡಿನ ಕ್ಯಾನುಗಳು ಹಾಗೂ ಗಾಜಿನ ವಸ್ತುಗಳಾದ ಒಡೆದ ಗಾಜಿನ ಬಾಟಲಿಗಳು. ಇತರ ಒಣಕಸಗಳಾದ ಹಳೆಯ ಒರೆಸುವ ಬಟ್ಟೆ, ಸ್ಪಂಜುಗಳು, ಸೌಂದರ್ಯ ಪ್ರಸಾದನಗಳು, ಸೆರಾಮಿಕ್ಸ್ ಕಟ್ಟಿಗೆ ತುಣುಕುಗಳು, ತೆಂಗಿನ ಚಿಪ್ಪುಗಳು ಮತ್ತು ಕೆಲವು ತ್ಯಾಜ್ಯಗಳನ್ನು ಬೇರ್ಪಡಿಸುವಾಗ ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ ಅವು, ಬ್ಯಾಟರಿಗಳು, ಸಿಡಿ, ಟೇಪ್ಸ್, ಥರ್ಮಾಮೀಟರ್, ಬಲ್ಬ್ಸ್, ಟ್ಯೂಬ್ ದೀಪಗಳು, ಸಿಎಫ್‍ಎಲ್ ಇವುಗಳನ್ನು ಪ್ರತ್ಯೇಕವಾಗಿ ಒಪ್ಪಿಸಬೇಕಾಗುತ್ತದೆ.
ಬೇಡದ ಕಸದಲ್ಲಿ ನೈರ್ಮಲ್ಯ ಕಸಕ್ಕೆ ಸಂಬಂಧಿಸಿದಂತೆ ಇದನ್ನು ಬೇರ್ಪಡಿಸುವಾಗ ಒಂದು ಪತ್ರಿಕೆಗೆ ಸುತ್ತಿ ಬಳಸಬೇಕಾಗುತ್ತದೆ. ಅಂತಹ ಕಸಗಳೆಂದರೆ ಡೈಪರ್ಗಳು, ಸ್ಯಾನಿಟರಿ ನ್ಯಾಪ್‍ಕಿನ್ಸ್, ಬ್ಯಾಡೆಂಜ್‍ಗಳು, ಕಾಂಡೋಮ್‍ಗಳು, ಉಪಯೋಗಿಸಿದ ಟಿಶ್ಯುಗಳು, ಔಷಧಿಗಳು ಮತ್ತು ಗುಡಿಸಿದ ಧೂಳು, ಇವು ಬೇಡವಾದ ಕಸಗಳಾಗಿದ್ದು, ಇದರಲ್ಲಿ ತೀಕ್ಷ್ಣವಾದ ವಸ್ತುಗಳಾದ ಬ್ಲೇಡ್ಸ್, ಉಪಯೋಗಿಸಿದ ಸಿರಿಂಜುಗಳು, ಇಂಜೆಕ್ಷನ್ ಟ್ಯೂಬ್‍ಗಳು, ಇಂತಹ ವಸ್ತುಗಳನ್ನು ಸಣ್ಣ ಪ್ರಮಾಣದಲ್ಲಿ ಸುತ್ತಿ ಅದನ್ನು ಪ್ರತ್ಯೇಕವಾಗಿ ಒಪ್ಪಿಸಬೇಕು ಮತ್ತು ನಿರ್ಮಾಣ ಅವಶೇಷಗಳಾದ, ರಬ್ಬರ್, ಪೇಂಟ್ಸ್, ಸಿಮೆಂಟ್ ಪುಡಿ, ಇಟ್ಟಿಗೆಗಳು, ಹೂವಿನ ಮಡಿಕೆಗಳು ಮತ್ತು ಒಡೆದ ಗಾಜು ಇವುಗಳನ್ನು ಸುತ್ತಿ ನೀಡಬೇಕಾಗುತ್ತದೆ.