ಮಡಿಕೇರಿ, ಫೆ. 13: ಭಾರತ ಹಾಕಿ ತಂಡದ ಮಾಜಿ ಆಟಗಾರ, ಹಾಕಿ ಹಾಗೂ ಕ್ರೀಡೆಯ ವಿವಿಧ ಮಜಲುಗಳಲ್ಲಿ ಸಾಧನೆ ಮಾಡಿ ಇದೀಗ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಡಾ. ಮೊಳ್ಳೆರ ಪಿ. ಗಣೇಶ್ ಅವರಿಗೆ ಆರ್ಮಿ ಸಿಗ್ನಲ್ಕೋರ್ನಿಂದ ವಿಶೇಷ ಗೌರವ ನೀಡಲಾಗಿದೆ.
ಭಾರತ ಹಾಕಿ ತಂಡಕ್ಕೆ ಸೇರ್ಪಡೆಗೊಳ್ಳುವ ಮುನ್ನ ಇವರು ಭಾರತೀಯ ಸೇನೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ಆರ್ಮಿ ಸಿಗ್ನಲ್ ಕೋರ್ನಲ್ಲಿ ಇವರು ಕರ್ತವ್ಯ ನಿಭಾಯಿಸಿದ್ದು, ಈ ಮೂಲಕ ಭಾರತೀಯ ತಂಡದಲ್ಲಿ ಸ್ಥಾನ ಪಡೆದು ನಂತರ ವಿವಿಧ ಸಾಧನೆಗಳನ್ನು ಮಾಡಿದ್ದಾರೆ. ಇದೀಗ ‘ಪದ್ಮಶ್ರೀಯಂತಹ ಉನ್ನತ ಬಿರುದು ಗಳಿಸಿರುವ ಇವರಿಗೆ ಗೌರವ ನೀಡಲು ಆರ್ಮಿ ಸಿಗ್ನಲ್ಕೋರ್ ಮುಂದಾಗಿದ್ದು, ಇವರು ಸೇನೆಗೆ ಸೇರ್ಪಡೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದ ಸ್ಥಳವಾದ ಮಧ್ಯಪ್ರದೇಶದ ಭೂಪಾಲ್ನ ಮಾವೊ ಎಂಬಲ್ಲಿ ಸೇನೆಗೆ ಸಂಬಂಧಿಸಿದ ಬಡಾವಣೆಯೊಂದಕ್ಕೆ ‘ಡಾ. ಎಂ.ಪಿ. ಗಣೇಶ್ ಎನ್ಕ್ಲೇವ್’ ಎಂದು ನಾಮಕರಣ ಮಾಡಿದೆ. ಒಂದೆರಡು ದಿನದ ಹಿಂದೆ ನಡೆದ ಸಮಾರಂಭದಲ್ಲಿ ಡಾ. ಎಂ.ಪಿ. ಗಣೇಶ್ ಹಾಗೂ ಪ್ರೇಮಾ ಗಣೇಶ್ ದಂಪತಿಗಳು ಇದನ್ನು ಉದ್ಘಾಟಿಸಿದರು.
ಭಾರತೀಯ ಸೇನೆಯಲ್ಲಿ ಸೇವೆ-ಸಾಧನೆ ಮಾಡಿರುವ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಹೆಸರುಗಳ ಈ ರೀತಿಯ ಬಡಾವಣೆಗಳು, ರಸ್ತೆಗಳು ದೇಶದ ವಿವಿಧೆಡೆಗಳಲ್ಲಿ ಇದೀಗ ಸೇನೆ ಮೂಲಕ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಗಣೇಶ್ ಅವರ ಹೆಸರು ಈ ಸಾಲಿನಲ್ಲಿ ಸೇರ್ಪಡೆಯಾಗಿದ್ದು, ಇವರು ಜಿಲ್ಲೆಯ ಮೂರನೇ ವ್ಯಕ್ತಿಯಾಗಿದ್ದಾರೆ.
ಸೇನೆಯಲ್ಲಿ ಕರ್ತವ್ಯದಲ್ಲಿರುವ ಸೈನಿಕರು, ಅಧಿಕಾರಿಗಳು ವಾಸಿಸಲು ನಿರ್ಮಿಸಲಾಗುವ ವಸತಿಗೃಹ (ಅಪಾರ್ಟ್ಮೆಂಟ್) ನಂತಹ ಸ್ಥಳಕ್ಕೆ ಇವರ ಹೆಸರನ್ನಿಡಲಾಗಿದ್ದು, ಈ ಸ್ಥಳದಲ್ಲಿ ಸುಮಾರು ಎರಡರಿಂದ ಮೂರು ಸಾವಿರ ಮಂದಿ ನೆಲೆಸಲಿದ್ದಾರೆ.
ಇದು ಕೊಡಗಿನ ವ್ಯಕ್ತಿಯಾಗಿರುವ ಗಣೇಶ್ ಅವರ ಮೂಲಕ ಜಿಲ್ಲೆಗೂ ಸಂದ ಗೌರವವಾಗಿದೆ ಎಂದು ಮಾಜಿ ಒಲಿಂಪಿಯನ್ ಬಿ.ಕೆ. ಸುಬ್ರಮಣಿ ಹಾಗೂ ಹಾಕಿ ಆಟಗಾರ, ನಿರೂಪಕ ಚೆಪ್ಪುಡಿರ ಕಾರ್ಯಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
-ಶಶಿ