*ಸಿದ್ದಾಪುರ, ಫೆ. 13: ಕಳೆದ ಮಳೆಗಾಲದಲ್ಲಿ ಉಂಟಾದ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ವಾಲ್ನೂರು ಹೊಳೆಕರೆಯ ಸುಮಾರು 35 ಕುಟುಂಬಗಳ ಬದುಕು ಈಗ ಡೋಲಾಯಮಾನವಾಗಿದೆ.

ಮನೆಗಳು ಹಾನಿಗೀಡಾಗಿರುವ ಪ್ರದೇಶದಲ್ಲಿ ವಾಸಿಸಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಹೊಳೆ ಬದಿಯ ಸುಮಾರು 100 ಮೀ. ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸಬಾರದೆಂದು ಈಗಾಗಲೇ ವಾಲ್ನೂರು ಗ್ರಾ.ಪಂ ನಿರ್ಣಯ ತೆಗೆದುಕೊಂಡಿದೆ. ಸರ್ಕಾರ ನಿವೇಶನ ಮತ್ತು ವಸತಿ ನೀಡುವುದಾಗಿ ಭರವಸೆ ನೀಡಿತ್ತಾದರು ಇಲ್ಲಿಯವರೆಗೆ ಭರವಸೆ ಈಡೇರಿಲ್ಲ. ಬಾಡಿಗೆ ಮನೆಯಲ್ಲಿ ವಾಸವಿರಲು ಸರ್ಕಾರದಿಂದ ಬಾಡಿಗೆ ಹಣವು ಬಾರದೆ, ತಾವಿದ್ದ ಮೊದಲಿನ ಜಾಗಕ್ಕೂ ತೆರಳಲಾಗದೆ ಬಡ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿವೆ. ಸರ್ವೆ ಸಂಖ್ಯೆ 88/1 ರ ಪೈಸಾರಿ ಜಾಗದ ಕುರಿತು ಮಾಹಿತಿ ನೀಡಿ ಈ ಜಾಗದಲ್ಲಿ ತಮಗೆ ನಿವೇಶನವನ್ನು ಗುರುತಿಸುವಂತೆ ಮನವಿ ಮಾಡಿಕೊಂಡಿದ್ದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಾರೆ.

ಮಳೆಯಿಂದ ಹಾನಿಗೀಡಾದ ಮನೆಗಳನ್ನು ದುರಸ್ತಿ ಪಡಿಸಿಕೊಳ್ಳುತ್ತೇವೆಂದರೆ ಅದಕ್ಕೂ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಪ್ರವಾಹದ ಸಂದರ್ಭ ಮನೆಗಳನ್ನು ಕಳೆದುಕೊಂಡಾಗ ತುರ್ತಾಗಿ ಆರಂಭದಲ್ಲಿ 10 ಸಾವಿರ ರೂ. ಮತ್ತು ನಂತರದ ದಿನಗಳಲ್ಲಿ ಹಾನಿಗೀಡಾದ ಮನೆಗಳ ದುರಸ್ತಿಗೆಂದು ತಲಾ ಒಂದು ಲಕ್ಷ ರೂ. ಗಳಂತೆ ಪರಿಹಾರವನ್ನು ನೀಡಲಾಯಿತು. ಸಂದಿಗ್ಧ ಪರಿಸ್ಥಿತಿಯಲ್ಲಿ ಸುಧಾರಿಸಿಕೊಳ್ಳಲು ಪರಿಹಾರ ಕೇಂದ್ರದ ನಂತರ ಬಾಡಿಗೆ ಮನೆಗಳಲ್ಲಿದ್ದ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ.

ಪರಿಹಾರವೇ ಇಲ್ಲ: ಈ 35 ಸಂತ್ರಸ್ತ ಕುಟುಂಬಗಳಲ್ಲಿ ವಾಲ್ನೂರು ಹೊಳೆ ಕರೆ ನಿವಾಸಿ ರಾಜೇಶ್ ಎಂಬವರ ಕುಟುಂಬ ಕೂಡ ಮನೆ ಕಳೆದುಕೊಂಡಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ರೂಪದ ಪರಿಹಾರ ಒಂದು ರೂಪಾಯಿ ಕೂಡ ಇವರಿಗೆ ಸಿಕ್ಕಿಲ್ಲ. ಅಧಿಕಾರಿಗಳಿಗೆ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ನೀಡಿದ್ದರೂ, ಸೋಮವಾರಪೇಟೆ ತಾಲೂಕು ಕಚೇರಿ ಹಾಗೂ ಕುಶಾಲನಗರ ನಾಡಕಚೇರಿಗೆ ಅಲೆದರೂ ಪರಿಹಾರ ದೊರಕದೆ ಇರುವುದಕ್ಕೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂದು ರಾಜೇಶ್ ಕುಟುಂಬ ಅಳಲು ತೋಡಿಕೊಂಡಿದೆ.

ಕೂಲಿ ಕಾರ್ಮಿಕರಾಗಿರುವ ರಾಜೇಶ್ ಇದೀಗ ತೋಟದ ಲೈನ್ ಮನೆಗಳಲ್ಲಿ ವಾಸಿಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ತಕ್ಷಣ ಎಲ್ಲಾ 35 ಸಂತ್ರಸ್ತ ಕುಟುಂಬಗಳಿಗೂ ಸುರಕ್ಷಿತ ಪ್ರದೇಶದಲ್ಲಿ ಜಾಗ ಮತ್ತು ವಸತಿಯನ್ನು ಕಲ್ಪಿಸಿಕೊಡಬೇಕೆಂದು ಶಾಸಕ ಅಪ್ಪಚ್ಚುರಂಜನ್ ಅವರಲ್ಲಿ ವಾಲ್ನೂರು ಹೊಳೆ ಕರೆ ಸಂತ್ರಸ್ತರು ಮನವಿ ಮಾಡಿದ್ದಾರೆ.

ಮತ್ತೊಂದು ಮಳೆಗಾಲ ಸಮೀಪಿಸುವ ಹಂತದಲ್ಲಿದ್ದರೂ ಅಧಿಕಾರಿಗಳು ಸಂಕಷ್ಟದಲ್ಲಿರುವ ಕುಟುಂಬಗಳ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲವೆಂದು ಆರೋಪಿಸಿದ್ದಾರೆ.

-ಅಂಚೆಮನೆ ಸುಧಿ