ಕುಶಾಲನಗರ, ಫೆ. 13: ತಲಕಾವೇರಿ-ಭಾಗಮಂಡಲ ವ್ಯಾಪ್ತಿಯ ನದಿಯ ನಿರ್ವಹಣೆಯನ್ನು ಮಾರ್ಚ್ 20ರ ಒಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ರಾಜ್ಯ ಹೈಕೋರ್ಟ್ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಆದೇಶ ನೀಡಿದೆ. ಕಾವೇರಿ ನದಿ ಶುದ್ದೀಕರಣಕ್ಕೆ ಯೋಜನೆ ರೂಪಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಭಾಗಮಂಡಲದ ಉದ್ಯಮಿ ಎಸ್.ಇ. ಜಯಂತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆದು ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ.

ಈ ಹಿನ್ನಲೆಯಲ್ಲಿ ಸರಕಾರ ನದಿಯ ನಿರ್ವಹಣೆಗಾಗಿ ರೂ 95 ಲಕ್ಷ ಹಣ ಬಿಡುಗಡೆ ಮಾಡಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ನಿಗಮದ ಕಾರ್ಯಪಾಲಕ ಅಭಿಯಂತರ ರಾಜೇಗೌಡ ತಿಳಿಸಿದ್ದಾರೆ.

ತಲಕಾವೇರಿಯಿಂದ ಅಯ್ಯಂಗೇರಿ ನಡುವೆ 11.5 ಕಿಮೀ ವ್ಯಾಪ್ತಿಯ ನದಿಯಲ್ಲಿರುವ ಗಿಡಗಂಟಿಗಳನ್ನು ತಕ್ಷಣ ತೆರವುಗೊಳಿಸಬೇಕು. ಆ ಮೂಲಕ ಕಾವೇರಿ ನದಿ ಶುದ್ದೀಕರಣ ಮತ್ತು ಪುನಶ್ಚೇತನ ಕಾಮಗಾರಿ ಕೂಡಲೆ ನಿರ್ವಹಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಈ ಹಿನ್ನಲೆಯಲ್ಲಿ ತಾ. 25 ರೊಳಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು ತಕ್ಷಣ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ರಾಜೇಗೌಡ ತಿಳಿಸಿದ್ದಾರೆ.

ಭಾಗಮಂಡಲ ಸಂಗಮ ಬಳಿ ಕನ್ನಿಕೆ, ಕಾವೇರಿ ನದಿಯ ವ್ಯಾಪ್ತಿಯಲ್ಲಿ ನದಿಯನ್ನು ವಿಸ್ತರಿಸುವುದು ಆ ಮೂಲಕ ನದಿಯ ಅಸ್ತಿತ್ವವನ್ನು ಉಳಿಸುವಂತೆ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಹೈಕೋರ್ಟ್ ಮೊರೆಹೋಗಿದ್ದು ಹೈಕೋರ್ಟ್ ವಕೀಲರಾದ ಮೊಟ್ಟನ ರವಿಕುಮಾರ್ ಅವರು ವಾದ ಮಂಡಿಸಿ ನದಿಯ ವಾಸ್ತವಾಂಶದ ದಾಖಲೆಯನ್ನು ಒದಗಿಸಿದ್ದರು. ಈ ಬಗ್ಗೆ ಸರಕಾರದಿಂದ ಕೊಡಗು ಜಿಲ್ಲಾಧಿಕಾರಿಗಳ ಮೂಲಕ ಕ್ರಿಯಾಯೋಜನೆ ರೂಪಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದ್ದು ಕಾವೇರಿ ನೀರಾವರಿ ನಿಗಮ ಸಧ್ಯದಲ್ಲಿಯೇ ಕಾಮಗಾರಿ ಪ್ರಾರಂಭಿಸಲಿದೆ.

-ಚಂದ್ರಮೋಹನ್