ವೀರಾಜಪೇಟೆ, ಫೆ. 12: ಕಳೆದ 38 ದಿನಗಳಿಂದ ವೀರಾಜಪೇಟೆ ಬಳಿಯ ಬಾಳುಗೋಡು ಪೈಸಾರಿಯಲ್ಲಿ ನಿವೇಶನದ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡಸುತ್ತಿರುವ ನಿವೇಶನ ರಹಿತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಕಂದಾಯ ಇಲಾಖೆಯವರು ಗುಡಿಸಲುಗಳನ್ನು ನೆಲಸಮ ಮಾಡಿ ಜಾಗ ತೆರವುಗೊಳಿಸಿದರೂ ಪ್ರತಿಭಟನೆ ನಿರತರಿಗಾಗಿ ಹಾಕಿದ್ದ ಟೆಂಟ್‍ನಲ್ಲಿ ಅಂಬೇಡ್ಕರ್ ಭಾವ ಚಿತ್ರದೊಂದಿಗೆ ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನೆಯ ಸಂಘಟನೆಯ ನಾಯಕರುಗಳಿಂದ ಸುಮಾರು 71 ನಿರಾಶ್ರಿತರ ನಿವೇಶನದ ಫಲಾನುಭವಿಗಳ ಪಟ್ಟಿಯನ್ನು ತಹಶೀಲ್ದಾರ್ ಅವರ ಬೇಡಿಕೆಯಂತೆ ಅಗತ್ಯ ದಾಖಲೆಗಳ ಸಮೇತ ತಹಶೀಲ್ದಾರ್ ಅವರಿಗೆ ಇಂದು ಸಲ್ಲಿಸಲಾಗಿದೆ. ಅದೇ ರೀತಿ ಈ ಹಿಂದೆ ನೀಡಿರುವ ಗಡುವಿನಂತೆ ಇಪ್ಪತ್ತು ದಿನಗಳ ಅವಧಿಯಲ್ಲಿ ಎಲ್ಲ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು. ಇಲ್ಲದಿದ್ದರೆ ಈಗಿನ ಬಾಳುಗೋಡು ಪೈಸಾರಿಯಲ್ಲಿ ಮತ್ತೆ ಗುಡಿಸಲುಗಳನ್ನು ಕಟ್ಟಿಕೊಂಡು ಪ್ರತಿಭಟನೆ ಮುಂದುವರೆಸುವುದಾಗಿ ಸಿ.ಐ.ಟಿ.ಯು. ಜಿಲ್ಲಾ ಸಮಿತಿ ಅಧ್ಯಕ್ಷ ಮಹದೇವ್ ತಿಳಿಸಿದ್ದಾರೆ.
ಕಂದಾಯ ಇಲಾಖೆಯವರು ಪ್ರತಿಭಟನೆಕಾರರ ಗುಡಿಸಲುಗಳನ್ನು ನೆಲಸಮ ಮಾಡಿ ಏಳು ದಿನಗಳು ಕಳೆದಿವೆ. ಇನ್ನು 13ದಿನಗಳ ಅವಧಿಯೊಳಗೆ ಕಂದಾಯ ಅಧಿಕಾರಿಗಳು
ಹಕ್ಕು ಪತ್ರ ನೀಡಲೇಬೇಕು. ಇಲ್ಲದಿದ್ದರೆ ಗಡುವಿನ ಅವಧಿಯ ನಂತರ ತಾಲೂಕು ಕಚೇರಿ ಮುಂದೆ ಅರೆ ಬೆತ್ತಲೆ ಪ್ರದರ್ಶನದೊಂದಿಗೆ ಅನಿರ್ದಿಷ್ಟ ಕಾಲದವರೆಗೆ ಪ್ರತಿಭಟನೆ ಮುಂದುವರೆಸಲಾಗುವುದು. ಈಗ ಪ್ರತಿಭಟನೆ ನಿರತರು ಬಾಳುಗೋಡು ಪೈಸಾರಿ ಜಾಗದಿಂದ ಬೆಳಿಗ್ಗೆ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗಿ ರಾತ್ರಿ ಅಲ್ಲಿರುವ ಶೆಡ್‍ನಲ್ಲಿ ತಂಗುತ್ತಿದ್ದಾರೆ. ವಿವಿಧ ಸಂಘಟನೆಗಳ ನಾಯಕರು ಪ್ರತಿಭಟನೆಯ ಸ್ಥಳದಲ್ಲಿಯೇ ಶಿಬಿರ ಹೂಡಿರುವುದಾಗಿ ಮಹದೇವ್ ತಿಳಿಸಿದರು.