*ಗೋಣಿಕೊಪ್ಪಲು, ಫೆ. 12: ಅರುವತ್ತೊಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಮ್ಮ ನಗರದಿಂದ ಹರಿದು ಬರುವ ಕೊಳಚೆ ನೀರಿನಿಂದ ವೆಂಕಟಪ್ಪ ಬಡಾವಣೆಯ ನಿವಾಸಿಗಳಿಗೆ ರೋಗ ಹರಡುವ ಭೀತಿ ಎದುರಾಗಿದೆ.
ಗೋಣಿಕೊಪ್ಪಲು ಮತ್ತು ಅರುವತ್ತೊಕ್ಲು ಪಂಚಾಯಿತಿ ಈ ವಿಚಾರವಾಗಿ ನಿರ್ಲಕ್ಷ್ಯ ತಾಳಿದ್ದು, ವೆಂಕಟಪ್ಪ ಬಡಾವಣೆಯ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ತಿಂಗಳುಗಳಿಂದ ಮೈಸೂರಮ್ಮ ನಗರದಿಂದ ನೇರವಾಗಿ ವೆಂಕಟಪ್ಪ ಬಡಾವಣೆಗೆ ಹರಿದು ಬರುವ ಕೊಳಚೆ ನೀರು ಇಲ್ಲಿನ ಚರಂಡಿಗಳಲ್ಲಿ ನಿಂತು ಸೊಳ್ಳೆ, ನೊಣಗಳ ಸಂತಾನ ಕ್ರಿಯೆಗಳಿಗೆ ಕಾರಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಕಾವೇರಿ ಒಕ್ಕೂಟ ಗೌರವಾಧ್ಯಕ್ಷ ಸಣ್ಣುವಂಡ ರಜನ್ ತಿಮ್ಮಯ್ಯ ಆರೋಪಿಸಿದ್ದಾರೆ.
ಸಮಸ್ಯೆಗಳ ಬಗ್ಗೆ ಪರಿಹಾರ ನೀಡಬೇಕಾದ ಪಂಚಾಯಿತಿಯ ಸದಸ್ಯರುಗಳು ಈ ವಿಚಾರವಾಗಿ ಗಮನ ಹರಿಸುತ್ತಿಲ್ಲ. ಬಡಾವಣೆ ಸಂಬಂಧಪಟ್ಟಂತೆ ಗೋಣಿಕೊಪ್ಪಲು ಪಂಚಾಯಿತಿಗೆ ಇಬ್ಬರು ಸದಸ್ಯರನ್ನು ಹೊಂದಿದೆ. ಇದರಲ್ಲಿ ಉಪಾಧ್ಯಕ್ಷರಾಗಿರುವ ಕಾವ್ಯ ಅವರು ಇಲ್ಲಿನ ನಿವಾಸಿಗಳ ವಿಚಾರವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಅರುವತೊಕ್ಲು ಮತ್ತು ಗೋಣಿಕೊಪ್ಪಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮತ್ತು ಲಕ್ಷ್ಮಿನಾರಾಯಣ ಅವರನ್ನು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಬಡಾವಣೆಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರು. ಕೊಳಚೆ ಪ್ರದೇಶದಲ್ಲಿ ಜನ ವಾಸಿಸಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಕೆಲ ದಿನಗಳಲ್ಲೇ ಪಂಚಾಯಿತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಲು ವೆಂಕಟಪ್ಪ ಬಡಾವಣೆಯ ನಿವಾಸಿಗಳು ಸಜ್ಜಾಗುತ್ತೇವೆ ಎಂದು ಮಾಜಿ ತಾ.ಪಂ. ಅಧ್ಯಕ್ಷೆ ರಾಣಿ ನಾರಾಯಣ ಅಧಿಕಾರಿಗಳಿಗೆ ಮತ್ತು ಪಂಚಾಯಿತಿ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದರು.
ಕೊಳಚೆ ನೀರು ಹರಿವಿನಿಂದಾಗಿ ಸುಮಾರು 250ಕ್ಕೂ ಹೆಚ್ಚು ಮಂದಿ ವಾಸಿಸುವ ವೆಂಕಟಪ್ಪ ಬಡಾವಣೆ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಲುಷಿತ ನೀರು ಶುದ್ಧ ನೀರಿನೊಂದಿಗೆ ಬೆರೆತ್ತಿರುವುದರಿಂದ ಕುಡಿಯುವ ಗುಣಮಟ್ಟವನ್ನು ಕಳೆದುಕೊಂಡಿದೆ. ಇದರಿಂದ ರೋಗಗಳ ಹರಡುತ್ತಿದೆ ಎಂದು ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಿಕೊಡುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭ ವೆಂಕಟಪ್ಪ ಬಡಾವಣೆಯ ಅಧ್ಯಕ್ಷೆ ಹೇಮಾವತಿ ಜನಾರ್ಧನ, ಮಾಜಿ ಅಧ್ಯಕ್ಷ ಸುಳ್ಳಿಮಾಡ ನಾಚಪ್ಪ, ಉಪಾಧ್ಯಕ್ಷ ಮಧು, ಖಜಾಂಚಿ ಸರಳ, ನೂರೇರ ರಂಜಿ, ವಿವೇಕ್, ಪ್ರೇಮ, ಸಿಂದು ಸೇರಿದಂತೆ ಬಡಾವಣೆ ನಿವಾಸಿಗಳು ಹಾಜರಿದ್ದರು.