* ಸಿದ್ದಾಪುರ, ಫೆ. 12 : ಗ್ರಾಮಗಳು ಅಭಿವೃದ್ಧಿ ಹೊಂದಲು ರಸ್ತೆ ಬದಿಯಲ್ಲಿರುವ ತೋಟದ ಮಾಲೀಕರು ರಸ್ತೆ ಕಾಮಗಾರಿಗಳಿಗೆ ಜಾಗ ಬಿಟ್ಟುಕೊಡುವ ಮೂಲಕ ಸಹಕಾರ ನೀಡುವಂತಾಗಬೇಕು ಎಂದು ವೀರಾಜಪೇಟೆ ವಿಧಾನಸಭೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಸಮೀಪದ ಅಮ್ಮತ್ತಿಯಿಂದ ಮೂರ್ನಾಡಿಗೆ ಹೋಗುವ ಜಿಲ್ಲಾ ಮುಖ್ಯ ರಸ್ತೆ ಲೋಕೋಪಯೋಗಿ ಇಲಾಖೆ ವತಿಯಿಂದ ಅಗಲೀಕರಣ ಮತ್ತು ಡಾಂಬರಿಕರಣಕ್ಕೆ ರೂ, ಎರಡು ಕೋಟಿ ಅನುದಾನದ ಕಾಮಗಾರಿಗೆ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಂಬಾಡ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ; ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಸ್ವತಃ ಜಾಗ ಬಿಟ್ಟು ಕೊಡುವಂತಾಗಬೇಕು; ಇದಕ್ಕೆ ಸರ್ಕಾರದ ನಿಯಮದಲ್ಲಿ ಯಾವುದೇ ಪರಿಹಾರ ದೊರಕುವುದಿಲ್ಲ. ರಸ್ತೆ ಅಭಿವೃದ್ಧಿಯಾದಲ್ಲಿ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರಲ್ಲದೆ ಗುತ್ತಿಗೆದಾರರು ಸರಿಯಾದ ಸಮಯಕ್ಕೆ ರಸ್ತೆ ಕಾಮಗಾರಿಯನ್ನು ಮುಗಿಸಬೇಕು. ಕಾಮಗಾರಿ ನಡೆಯುವ ಸಂದರ್ಭ ಕಳಪೆಯಾಗದಂತೆ ಸ್ಥಳೀಯರು ಎಚ್ಚರ ವಹಿಸಬೇಕು ಎಂದರು.

ಭೂಮಿ ಪೂಜೆ ಸಂದರ್ಭ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಈ. ಸುರೇಶ್, ಸಹಾಯಕ ಅಭಿಯಂತರ ಯು.ಆರ್. ಯತೀಶ್, ಬಿಜೆಪಿಯ ಇ.ಸಿ. ಜೀವನ್, ಮಲ್ಲಂಡ ಮಧುದೇವಯ್ಯ, ಹಾಲುಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುಕ್ಕಾಟಿರ ನಾಚಪ್ಪ, ಮಂಡೆಪಂಡ ಮೈನಾ, ಗ್ರಾಮಸ್ಥರಾದ ಎಂ. ಮಾದಪ್ಪ, ಬಿ. ಬೆಳ್ಯಪ್ಪ, ಬಿ. ರಂಜಿ ಮಹೇಂದ್ರ, ಬಿ. ಸುಜಿತ್, ಎಂ. ಈಶಾ, ಸಿ.ಭರತ್, ಎಂ. ಸುಬ್ರಮಣಿ ಇತರರು ಉಪಸ್ಥಿತರಿದ್ದರು.