ಮಡಿಕೇರಿ ಫೆ. 10 : ಭಾಗಮಂಡಲದ ಚೆಟ್ಟಿಮಾನಿ ಗ್ರಾಮದಲ್ಲಿ ಶ್ರೀ ಕೃಷ್ಣ ಗೋ ಶಾಲೆಯ ಕಾಮಗಾರಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದು, ಇದೇ ತಾ. 13 ರಿಂದ ಗೋವುಗಳನ್ನು ಗೋ ಶಾಲೆಗೆ ಬಿಡಬಹುದಾಗಿದೆ ಎಂದು ಗೋ ಶಾಲೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ನಗರದಲ್ಲಿರುವ ಬೀಡಾಡಿ ಹಸುಗಳನ್ನು ಗೋ ಶಾಲೆಗೆ ತಂದು ಬಿಡುವುದಾಗಿ ಮಡಿಕೇರಿ ರಕ್ಷಣಾ ವೇದಿಕೆಯ ಮುಖ್ಯಸ್ಥರು ಈಗಾಗಲೇ ತಿಳಿಸಿದ್ದು, ಇತರ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೂಡ ಸಾಕಲು ಕಷ್ಟವಾಗುವ ಎಮ್ಮೆ, ಕೋಣ, ಎತ್ತು, ಹಸುಗಳನ್ನು ಗೋ ಶಾಲೆಗೆ ಬಿಡಬಹುದಾಗಿದೆ. ಅಲ್ಲದೇ ಬೀದಿ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತಿಂದು ಬಳಲುತ್ತಿರುವ ಗೋವುಗಳಿಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಗುವುದೆಂದು ತಿಳಿಸಿದ್ದಾರೆ