ಗೋಣಿಕೊಪ್ಪಲು, ಜ, 10: ವಿವೇಕಾನಂದರು ವಿಜ್ಞಾನ ಮತ್ತು ಆಧ್ಯಾತ್ಮಿಕವನ್ನು ಒಟ್ಟಾಗಿ ತೆಗೆದು ಕೊಂಡು ಮೂಢನಂಬಿಕೆಯನ್ನು ವಿರೋಧಿಸಿದವರು. ಆ ಕಾಲದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವೈಜ್ಞಾನಿಕ ಬೆಳವಣಿಗೆ ಆಗುತಿತ್ತು, ನಮ್ಮ ದೇಶ ಆಧ್ಯಾತ್ಮಿಕ ವಿಚಾರದಲ್ಲಿ ಮುಂದು ವರೆದಿತ್ತು.
ಮೂಢನಂಬಿಕೆಯನ್ನು ಬಿಟ್ಟು ವೈಜ್ಞಾನಿಕವಾಗಿ ಚಿಂತನೆ ನಡೆಸಬೇಕು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ಎಲ್ಲರನ್ನು ವಿದ್ಯಾವಂತರಾಗಿಸಬೇಕು ಎಂಬುದನ್ನು ಅವರು ಪ್ರತಿಪಾದಿಸಿ ದ್ದರು. ಅವರು ಧರ್ಮವನ್ನು ಎರಡನೇ ಸ್ಥಾನದಲ್ಲಿಟ್ಟವರು ಎಂದು ವೀರಾಜಪೇಟೆಯ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯ ಅಧ್ಯಕ್ಷರು, ವೈದ್ಯರೂ ಆದ ಡಾ. ಎಂ.ಸಿ. ಕಾರ್ಯಪ್ಪ ಹೇಳಿದರು. ಸಮರ್ಥ ಕನ್ನಡಿಗರು ಕೊಡಗು ಜಿಲ್ಲಾ ಘಟಕದ ವತಿಯಿಂದ ವೀರಾಜಪೇಟೆಯಲ್ಲಿ ಏರ್ಪಡಿಸಿದ್ದ ‘ವಿವೇಕ ಸ್ಮರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ವಿವೇಕಾನಂದರು ಭಕ್ತಿಯೋಗ ಮತ್ತು ಜ್ಞಾನ ಯೋಗ ಇವುಗಳ ಸಮನ್ವಯದಿಂದ ಜೀವನ ನಡೆಸಿ ನಮಗೆಲ್ಲ ಮಾದರಿಯಾಗಿದ್ದಾರೆ.
ಸರ್ವಸಂಗ ಪರಿತ್ಯಾಗಿಯಾಗಿ ಚಿಕಾಗೊದಲ್ಲಿ ಅವರು ನೀಡಿದ ಭಾಷಣ ವಿಶ್ವಮಾನ್ಯವಾಗಿದೆ. ಭಗವಂತ ಎಲ್ಲರಲ್ಲಿಯೂ ಇದ್ದಾನೆ ಎಂದು ದಲಿತ ನಾರಾಯಣ ಸೇವೆಯನ್ನು ಪ್ರಾರಂಭಿಸಿದರು ಎಂದರು.
ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ವಿವೇಕಾನಂದರು ತಮ್ಮ 39 ವರ್ಷಗಳ ಬದುಕಿನಲ್ಲಿ ಸಾಧಿಸಿದ್ದು ನಮಗೆ ಮೂರು ಜನ್ಮದಲ್ಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ವಿಚಾರ ಎಂದರು. ಸಮರ್ಥ ಕನ್ನಡಿಗ ಗೌರವ ಪುರಸ್ಕøತರಾದ ಟೋಮಿ ಥೋಮಸ್ ಮಾತನಾಡಿದರು.
ಸಂಸ್ಥೆಯ ಸಂಚಾಲಕಿ ಜಯಲಕ್ಷ್ಮಿ ಕೆ., ಪ್ರಧಾನ ಸಂಚಾಲಕ ಬಸವರಾಜು ಕಲ್ಲುಸಕ್ಕರೆ ಉಪಸ್ಥಿತರಿದ್ದರು. ಡಾ. ಲಿಂಗೇಶ್ ಹುಣಸೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ದಿವ್ಯ ಸ್ವಾಗತ ನೃತ್ಯ ಮಾಡಿದರೆ, ಬ್ರೈಟ್ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಲವಿನ್ ಲೋಪೆಸ್ ಸ್ವಾಗತಿಸಿ, ದಿಲೀಶ್ ಬಿ. ನಾಯರ್ ವಂದಿಸಿದರು.
ಉಪನ್ಯಾಸಕಿ ಗೌರಿ ಕೆ.ಬಿ. ನಿರೂಪಿಸಿದರು. ಇದೇ ಸಂದರ್ಭ 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಛದ್ಮವೇಷ ಸ್ಪರ್ಧೆ, 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ, 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಸ್ವೀಕರಿಸಿದ ಬಗೆ ಹೇಗೆ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ, ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಭಾವಗೀತಾ ಸ್ಪರ್ಧೆ, ಪ್ರಾರ್ಥನಾ ಹಾಗೂ ನಿಶಿತ ಶೆಟ್ಟಿ ಅವರಿಂದ ಭರತನಾಟ್ಯ, ನಾಪೋಕ್ಲು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕೊಡವ ಜಾನಪದ ನೃತ್ಯ, ಕವಿಗೋಷ್ಠಿ ಮತ್ತು ನಿವೃತ್ತ ಯೋಧ, ಅಶೋಕ ಚಕ್ರ ಪುರಸ್ಕøತ ಕ್ಯಾಪ್ಟನ್ ಭವಾನಿ ಶಂಕರ್ ಅವರಿಂದ ನಿತ್ಯ ಜೀವನದಲ್ಲಿ ಧರ್ಮದ ಅನುಷ್ಠಾನ ಎಂಬ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು.