ಮಡಿಕೇರಿ, ಫೆ. 10: ಮಡಿಕೇರಿಯ ಗೌಡ ಸಮಾಜದ ಬಳಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಗುರುತಿಸಲಾಗಿರುವ ಸ್ಥಳವನ್ನು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಗೌಡ ಸಮುದಾಯದ ಪ್ರಮುಖರು ಕಿಷ್ಕಿಂಧೆಯಾಗಿರುವ ಜಾಗದಲ್ಲಿ ಕಾಲೇಜು ನಿರ್ಮಾಣದಿಂದಾಗುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.ಗೌಡ ಸಮಾಜದ ಹಿಂಭಾಗದಲ್ಲಿ ಈ ಹಿಂದೆ ಇದ್ದ ಶಿಕ್ಷಣ ಇಲಾಖಾಧಿಕಾರಿಗಳ ವಸತಿಗೃಹವಿದ್ದ ಪಾಳುಬಿದ್ದ ಜಾಗವನ್ನು ಶಾಸಕ ಅಪ್ಪಚ್ಚುರಂಜನ್ ಅವರ ನೇತೃತ್ವದಲ್ಲಿ ಮಹಿಳಾ ಕಾಲೇಜಿಗೆಂದು ಗುರುತಿಸಿ, ಅಲ್ಲಿದ್ದ ವಸತಿಗೃಹಗಳನ್ನು ಕೆಡವಿ, ಮರ, ಗಿಡ, ಕಾಡುಗಳನ್ನು ಕಡಿದು ಜಾಗ ಸಮತಟ್ಟು ಮಾಡಲಾಗಿದೆ. ಇಲ್ಲಿ ಕಾಲೇಜು ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ಗೌಡ ಸಮುದಾಯದವರು ಆಕ್ಷೇಪಣೆ ಸಲ್ಲಿಸಿದ್ದರೂ ಕಾಲೇಜು ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು.

ಈ ನಿಟ್ಟಿನಲ್ಲಿ ಜಾಗದ ಪರಿಶೀಲನೆಗೆಂದು ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ಡಾ. ಅಪ್ಪಾಜಿ ಗೌಡ, ವಿಶೇಷಾಧಿಕಾರಿ ಶ್ರೀನಿವಾಸಯ್ಯ, ಹಿರಿಯ ವ್ಯವಸ್ಥಾಪಕ ಸುಮುಖ್ ಆರ್ಯ ಹಾಗೂ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜವರಪ್ಪ ಅವರುಗಳು ಆಗಮಿಸಿದ್ದರು. ವಿಷಯ ತಿಳಿದ ವಿವಿಧ ಗೌಡ ಸಮಾಜಗಳ, ಸಂಘಟನೆಗಳ ಪ್ರಮುಖರು ಸ್ಥಳದಲ್ಲಿ ಜಮಾಯಿಸಿ ಸಾಧಕ - ಬಾಧಕಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಗುರುತಿಸಲಾಗಿರುವ ಜಾಗದ ಮೂರು ಕಡೆಯಿಂದಲೂ ರಸ್ತೆಗಳಿದ್ದು; ಮತ್ತೊಂದು ಬದಿಯಲ್ಲಿ ಮನೆಗಳಿವೆ. ಗುರುತಿಸಲಾದ ಜಾಗ ಕೂಡ ಚೌಕಾಕಾರವಾಗಿರದೆ ತ್ರಿಕೋನಾಕಾರ ದಲ್ಲಿದೆ ಎಂದು ಟೇಪ್ ಹಿಡಿದು ಅಳತೆ ಮಾಡಿ ತೋರಿಸಿದರು. ಈ ಸಂದರ್ಭ ರಸ್ತೆ, ಆವರಣಗೋಡೆ ಮುಂತಾದವು ಗಳಿಗೆ ಸ್ಥಳ ಬಿಟ್ಟು ಒಟ್ಟು 16 ರಿಂದ 17 ಸೆಂಟ್ ಜಾಗ ಮಾತ್ರ ಲಭ್ಯವಾಗುವದು ಖಾತರಿಯಾಯಿತು. ಇಷ್ಟೊಂದು ಸಣ್ಣ ಪ್ರಮಾಣದ ಜಾಗದಲ್ಲಿ ಕಾಲೇಜು ಕಟ್ಟಡ ಕಷ್ಟಸಾಧ್ಯವೆಂದು ಪ್ರಮುಖರು ಅಭಿಪ್ರಾಯಪಟ್ಟರು.

ಈ ಜಾಗದ ಒತ್ತಿನಲ್ಲೇ ಗೌಡ ವಿದ್ಯಾಸಂಘ ಹಾಗೂ ಗೌಡ ಸಮಾಜಗಳಿವೆ. ಇಲ್ಲಿ ನಿರಂತರವಾಗಿ ಗೌಡ ಸಮುದಾಯದವರು ಸೇರಿದಂತೆ ಎಲ್ಲಾ ಸಮುದಾಯದವರ ಸಂಸ್ಕøತಿಗೆ ಸಂಬಂಧಿಸಿದ

(ಮೊದಲ ಪುಟದಿಂದ) ಕಾರ್ಯ ಕ್ರಮಗಳು, ಶೈಕ್ಷಣಿಕ ಚಟುವಟಿಕೆಗಳು, ವಿವಾಹ ಸಮಾರಂಭಗಳು ಜರುಗುತ್ತಲಿರುತ್ತವೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗಲಿದೆ. ಅಲ್ಲದೆ ಕಾರ್ಯಕ್ರಮಗಳು ನಡೆಯುವ ಸಂದರ್ಭ ವಾಹನಗಳ ಓಡಾಟ ಕೂಡ ಹೆಚ್ಚಿರಲಿದ್ದು; ವಿದ್ಯಾರ್ಥಿಗಳಿಗೆ ಸಂಚರಿಸಲು ಕೂಡ ಸಮಸ್ಯೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಕಾಲೇಜು ನಿರ್ಮಾಣಕ್ಕೆ ವಿಶಾಲವಾದ ಜಾಗ ಸೂಕ್ತವಾಗಿರುತ್ತದೆ. ನಗರದ ಐಟಿಐ ಬಳಿ 10 ಎಕರೆಯಷ್ಟು ಉತ್ತಮವಾದ ಜಾಗವಿದೆ, ಅಲ್ಲದೆ, ವಿದ್ಯಾನಗರದಲ್ಲಿರುವ ನ್ಯಾಯಾಲಯ ಸಂಕೀರ್ಣದ ಬಳಿಯೂ ಜಾಗವಿದೆ. ಈ ಜಾಗ ಪರಿಶೀಲಿಸಿ ಇಲ್ಲಿಂದ ಅಲ್ಲಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡರು.

ವಿದ್ಯಾಸಂಸ್ಥೆ ನಿರ್ಮಾಣಕ್ಕೆ ಸಮುದಾಯದ ವತಿಯಿಂದ ಯಾವದೇ ಅಭ್ಯಂತರವಿಲ್ಲ; ವಿರೋಧವೂ ಇಲ್ಲ, ಆದರೆ ಈ ಜಾಗ ಸೂಕ್ತವಾದುದಲ್ಲ; ಇದರಿಂದ ಕಾಲೇಜಿಗೂ; ಗೌಡ ಸಮುದಾಯದ ಸಂಸ್ಕøತಿಗೂ ತೊಂದರೆ ಯಾಗಬಾರ ದೆಂಬ ಕಾಳಜಿಯಿಂದ ಬೇಡಿಕೆ ಸಲ್ಲಿಸುತ್ತಿರುವದಾಗಿ ಪ್ರಮುಖರು ಹೇಳಿದರು.

ಜಿಲ್ಲಾಧಿಕಾರಿಗಳ ಗಮನಕ್ಕೆ

ಗೌಡ ಸಮುದಾಯ ಪ್ರಮುಖರ ಅಹವಾಲುಗಳನ್ನು ಆಲಿಸಿ ಪ್ರತಿಕ್ರಿಯಿ ಸಿದ ಡಾ. ಅಪ್ಪಾಜಿಗೌಡ ಅವರು, ತಾವು ಸ್ಥಳ ಪರಿಶೀಲನೆಗೆ ಆಗಮಿ ಸಿದ್ದು; ಈ ಸ್ಥಳ ಸೂಕ್ತವಾದುದಲ್ಲ ಎಂಬ ಅಭಿಪ್ರಾಯ ಸ್ಥಳೀಯರಿಂದ ಕೇಳಿ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಳ ಗಮನಕ್ಕೆ ತರಲಾಗುವದು. ಅಲ್ಲದೆ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವದೆಂದು ಹೇಳಿದರು.

ಮಾಹಿತಿ ನೀಡದಕ್ಕೆ ಆಕ್ಷೇಪ

ಸ್ಥಳದ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದರೂ ಜಂಟಿ ನಿರ್ದೇಶಕರು ಭೇಟಿ ನೀಡುವ ವಿಚಾರದ ಬಗ್ಗೆ ಮಾಹಿತಿ ನೀಡದಿರುವ ಬಗ್ಗೆ ಗೌಡ ಸಮುದಾಯ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲರು ಉದ್ದೇಶ ಪೂರ್ವಕವಾಗಿ ಮಾಹಿತಿ ನೀಡಿಲ್ಲವೆಂದೂ; ಸ್ಥಳದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಜಂಟಿ ನಿರ್ದೇಶಕರ ಗಮನಕ್ಕೆ ತಂದರು. ಮಾಹಿತಿ ನೀಡದ ಬಗ್ಗೆ ಸ್ಥಳದಲ್ಲಿದ್ದ ಪ್ರಾಂಶುಪಾಲರನ್ನು ವಿಚಾರಿಸಿದ ಸಂದರ್ಭ ಸಮಾಜಗಳ ಇಮೇಲ್ ವಿಳಾಸ ಸಿಕ್ಕಿಲ್ಲವೆಂದು ಪ್ರಾಂಶುಪಾಲರು ಹಾರಿಕೆಯ ಉತ್ತರ ನೀಡಿದರು.

ಈ ಸಂದರ್ಭದಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸೂರ್ತಲೆ ಸೋಮಣ್ಣ ಗೌಡ, ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಗೌಡ ಮಹಿಳಾ ಒಕ್ಕೂಟದ ಗೌರವ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್, ವಿವಿಧ ಸಮಾಜ, ಸಂಘಟನೆಗಳ ಪ್ರಮುಖರುಗಳಾದ ಕೋಳುಮುಡಿಯನ ಅನಂತ್ ಕುಮಾರ್, ಅಂಬೆಕಲ್ ನವೀನ್ ಕುಶಾಲಪ್ಪ, ಕೋಡಿ ಚಂದ್ರಶೇಖರ್, ಆನಂದ್ ಕರಂದ್ಲಾಜೆ, ಪೊನ್ನಚ್ಚನ ಮೋಹನ್, ಚಿಲ್ಲನ ಗಣಿಪ್ರಸಾದ್, ಬೈತಡ್ಕ ಜಾನಕಿ ಬೆಳ್ಯಪ್ಪ, ಬೈತಡ್ಕ ಬೆಳ್ಯಪ್ಪ, ಕುರಿಕಡ ಆನಂದ, ಕುದುಪಜೆ ಆನಂದ , ಬೈಚನ ಸೋಮಣ್ಣ, ಹುದೇರಿ ನಾಗೇಶ್, ದಂಬೆಕೋಡಿ ಹರೀಶ್, ಕೊಟ್ಟಕೇರಿಯನ ದಯಾನಂದ್, ಕಟ್ಟೆಮನೆ ಸೋನಾಜಿತ್, ಹುದೇರಿ ಜಗದೀಶ್, ತಳೂರು ದಿನೇಶ್, ಪೊಕ್ಕುಳಂಡ್ರ ಮನೋಜ್, ಪರಿಚನ ಸತೀಶ್, ಪುದಿಯನೆರವನ ರಿಶಿತ್, ಪೂಜಾರೀರ ಸುಮನ್, ಬೊಳ್ತಜ್ಜೆ ಅಶೋಕ್, ಮತ್ತರಿ ರಮೇಶ್ ಸೇರಿದಂತೆ ಇತರ ಪ್ರಮಮುಖರು ಹಾಜರಿದ್ದರು.