ಸೋಮವಾರಪೇಟೆ, ಫೆ. 1: ಇಲ್ಲಿನ ಶ್ರೀ ಆಂಜನೇಯ ದೇವಾಲಯ ಸಮಿತಿ ಮತ್ತು ಜೀರ್ಣೋದ್ಧಾರ ಮಂಡಳಿ ವತಿಯಿಂದ ರೂ. 2 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸ ಲಾಗಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಕಾಮಗಾರಿಗೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ್ ಭೂಮಿಪೂಜೆ ನೆರವೇರಿಸಿದರು. ಈ ಭಾಗದ ಸಾರ್ವಜನಿಕ ಭಕ್ತಾದಿಗಳ ಹಲವು ದಶಕಗಳ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ. ದೇವಾಲಯ ಸಮಿತಿಯ ಸಹಕಾರದೊಂದಿಗೆ ಶಾಸಕರ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದೆ. ಅದರಂತೆ ರೂ. 2 ಕೋಟಿ ವೆಚ್ಚದಲ್ಲಿ ನೂತನವಾಗಿ ದೇವಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಶಾಸಕ ರಂಜನ್ ಸಹಕಾರದಿಂದ ರಾಜ್ಯಸರ್ಕಾರದ ಮುಜರಾಯಿ ಇಲಾಖೆಯು ಈಗಾಗಲೇ ರೂ. 5 ಲಕ್ಷ ಅನುದಾನ ಒದಗಿಸಿದೆ ಎಂದರು.

ಕಾರ್ಕಳದ ನುರಿತ ಶಿಲ್ಪಿ ಎಂ. ಮಣಿ ಮತ್ತು ತಂಡದವರು ದೇವಾಲಯ ನಿರ್ಮಾಣ ಕಾರ್ಯ ಮಾಡಲಿದ್ದು, ಆರಂಭದಲ್ಲಿ ರೂ. 36ಲಕ್ಷ ವೆಚ್ಚದಲ್ಲಿ ಗರ್ಭಗುಡಿ ನಿರ್ಮಿಸಿ, ಈಗಿರುವ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗು ವದು. ನಂತರ ದೇವಾಲಯ ಮತ್ತು ಪ್ರಾಂಗಣ ನಿರ್ಮಿಸಲಾಗುವದು. ಪರಿವಾರ ದೇವರುಗಳನ್ನು ಪ್ರತಿಷ್ಠಾಪಿಸ ಲಾಗುವದು ಎಂದು ಮಾಹಿತಿ ನೀಡಿದರು. 1949ರಲ್ಲಿ ಡಿ. ಸಿದ್ದಣ್ಣ ಅವರು 3.13 ಎಕರೆ ಜಾಗವನ್ನು ದಾನ ನೀಡಿದ್ದಾರೆ. ಅಲ್ಲಿಯೇ ದೇವಾಲಯ ನಿರ್ಮಿಸಲಾಗುವದು. ಶ್ರೀ ಆಂಜನೇಯ ಸ್ವಾಮಿ ದೇವಾಲಯ ಸಮಿತಿ, ಖಾತೆ ಸಂಖ್ಯೆ 115601011000871, ಐಎಫ್‍ಎಸ್‍ಸಿ-ವಿಐಜೆಬಿ 00011561 ಈ ಖಾತೆಗೆ ಧನಸಹಾಯ ಮಾಡಬಹುದು ಎಂದು ಮನವಿ ಮಾಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮ ಗೋಪಾಲ್, ತಾ.ಪಂ. ಸದಸ್ಯೆ ತಂಗಮ್ಮ, ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ. ಗೋಪಾಲ್, ಕಾರ್ಯದರ್ಶಿ ಜಿ.ಎ. ಉದಯ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಕಾರ್ಯದರ್ಶಿ ಬಿ.ಪಿ. ಶೆಟ್ಟಿ, ದೇವಾಲಯ ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಮುಖರುಗಳಾದ ನಂದಕುಮಾರ್, ಯಶ್ವಂತ್, ಸಿ.ಸಿ. ನಂದ, ಬಿ.ಎಸ್. ಸುಂದರ್, ಬಿ.ಎಸ್. ಶ್ರೀಧರ್, ನಾಗರಾಜು, ಅರ್ಚಕ ನಂಜುಂಡೇಶ್ವರ, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.