ಮಡಿಕೇರಿ, ಫೆ. 1: ಇಂದು ರಥಸಪ್ತಮಿ ಪ್ರಯುಕ್ತ ಸೂರ್ಯೋಪಾಸನೆಯೊಂದಿಗೆ, ನಗರದ ಕೋಟೆ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಜರುಗಿತು. ಇಲ್ಲಿನ ಯೋಗ ಭಾರತೀಯ ಪುರುಷ ಹಾಗೂ ಮಹಿಳಾ ತಂಡದೊಂದಿಗೆ ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯರ ಸಹಿತ ಸುಮಾರು 150 ಮಂದಿ ಪಾಲ್ಗೊಂಡಿದ್ದರು.
ಯೋಗ ಶಿಕ್ಷಕರಾದ ಕೆ.ಕೆ. ಮಹೇಶ್ ಕುಮಾರ್, ಸುಧಾಕರ್, ಸೂರ್ಯ ನಮಸ್ಕಾರದೊಂದಿಗೆ ರಥಸಪ್ತಮಿ ಪರ್ವದಲ್ಲಿ ಸೂರ್ಯೋಪಾಸನೆಯಿಂದ ಆರೋಗ್ಯ ವೃದ್ಧಿಯ ಕುರಿತು ಮಾರ್ಗದರ್ಶನ ನೀಡಿದರು.
ಪ್ರಾಚ್ಯವಸ್ತು ಇಲಾಖೆಯ ಸಹಕಾರದೊಂದಿಗೆ ಮುಂಜಾನೆಯ 5.30 ರಿಂದ 7.30ರ ತನಕ ಎರಡು ಗಂಟೆಗಳ ಸಮಯ 108 ಸೂರ್ಯ ನಮಸ್ಕಾರದೊಂದಿಗೆ ಯೋಗ ಪಟುಗಳು ಧ್ಯಾನದಲ್ಲಿ ತೊಡಗಿಸಿ ಕೊಂಡಿದ್ದರು. ಈ ವೇಳೆ ಶಿಲ್ಪ ರವೀಂದ್ರ, ರವಿಶಂಕರ್, ಅರುಣ್‍ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಸೋಮವಾರಪೇಟೆ : ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಸಮೀಪದ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆ ದಡದಲ್ಲಿ ರಥಸಪ್ತಮಿ ಆಚರಿಸಲಾಯಿತು.
ಸಂಸ್ಥೆಯ ಸ್ವಯಂಸೇವಕರು ಹಾಗೂ ಸಾರ್ವಜನಿಕರು ರಥಸಪ್ತಮಿ ಅಂಗವಾಗಿ ಕೆರೆಯ ದಡದಲ್ಲಿ 108 ಸೂರ್ಯ ನಮಸ್ಕಾರ ಮಾಡಿದರು. ಸಂಸ್ಥೆಯ ಶಿಕ್ಷಕಿ ರಾಗಿಣಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಸೂರ್ಯದೇವನಿಗೆ ನಮಸ್ಕಾರ ಮಾಡುವದರಿಂದ ಜೀವನ ಹಾಗೂ ಆರೋಗ್ಯದಲ್ಲೂ ಸುಧಾರಣೆ ಕಾಣಬಹುದಾಗಿದೆ ಎಂದರು.
ನಂತರ ಶ್ರೀ ಹೊನ್ನಮ್ಮ ಹಾಗೂ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಸಂಸ್ಥೆಯ ಸ್ವಯಂಸೇವಕರಾದ ಮೃತ್ಯುಂಜಯ, ದಿವ್ಯ, ಸೇರಿದಂತೆ ಇತರರು ಉಪಸ್ಥಿತರಿದ್ದರು.