ಮಡಿಕೇರಿ, ಫೆ. 2: ಮಡಿಕೇರಿಯ ವಿದ್ಯಾನಗರ ಬಳಿ ವಿಶಾಲ ನಿವೇಶನದಲ್ಲಿ ಐದು ವರ್ಷದ ಹಿಂದೆ, ನೂತನ ಜಿಲ್ಲಾ ನ್ಯಾಯಾಲಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಟ್ಟಡಕ್ಕಾಗಿ ಈಗಾಗಲೇ ರೂ. 36 ಕೋಟಿಯಷ್ಟು ಹಣವನ್ನು ವ್ಯಯಿಸಲಾಗಿದೆ. ಆದರೂ ಕಾಮಗಾರಿ ಮಾತ್ರ ಐದು ವರ್ಷ ಪೂರ್ಣ ಗೊಂಡರೂ ಇನ್ನೂ ಮುಗಿದಿಲ್ಲ.ವಿಚಿತ್ರವೆಂದರೆ 2013-2014ನೇ ಸಾಲಿನಲ್ಲಿ ಕರ್ನಾಟಕ ನ್ಯಾಯಾಂಗ ಇಲಾಖೆಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಸುಸಜ್ಜಿತ ನ್ಯಾಯಾಲಯ ಕಟ್ಟಡ ಕಾಮಗಾರಿಗೆ ಚಾಲನೆ ಲಭಿಸಿತ್ತು. ಲೋಕೋಪಯೋಗಿ ಇಲಾಖೆಯಿಂದ ಕ್ರಿಯಾಯೋಜನೆ ಹಾಗೂ ಕಟ್ಟಡದ ನೀಲಿನಕಾಶೆ ಸಿದ್ಧಗೊಳಿಸಿ ಟೆಂಡರ್ ಪ್ರಕ್ರಿಯೆ ಮುಖಾಂತರ ಬೆಂಗಳೂರಿನ ಕೆ. ಬಾಬುರಾಜ್ ಉದ್ದಿಮೆಗೆ ಕೆಲಸ ನೀಡಲಾಗಿದೆ.2013-2014ರಲ್ಲಿ ಕಾಮಗಾರಿ ಪ್ರಾರಂಭಿಸಿ ಈ ಕಟ್ಟಡವನ್ನು 2016ರಲ್ಲಿ ನ್ಯಾಯಾಂಗ ಇಲಾಖೆಗೆ ವಹಿಸಬೇಕಿತ್ತು. ಕೊಡಗಿನ ಮಳೆಗಾಲ ಹಾಗೂ ಇನ್ನಿತರ ಕಾರಣದಿಂದ ಅದು ಈ ಅವಧಿಗೆ ಪೂರ್ಣಗೊಂಡಿಲ್ಲ. ಹೀಗಾಗಿ 2017ರ ಮೇ ಹೊತ್ತಿಗೆ ಕಟ್ಟಡ ಕೆಲಸ ಪೂರೈಸಲು ಗಡುವು ನೀಡಲಾಗಿತ್ತು. ಅದೂ ಕೈಗೂಡದೆ 2018ರ ಡಿಸೆಂಬರ್‍ಗೆ ಕಾಲಾವಕಾಶ ನೀಡಲಾಗಿತ್ತು. ಆ ವರ್ಷದ ಭಾರೀ ಮಳೆಯಿಂದ 2019ರ ಏಪ್ರಿಲ್‍ನಲ್ಲಿ ಉದ್ಘಾಟನೆಯ ತಯಾರಿ ನಡೆಸಲಾಗಿತ್ತು. ಈ ಅವಧಿಗೂ ಕೆಲಸ ಮುಗಿಯದೆ ಕರ್ನಾಟಕ ನ್ಯಾಯಾಂಗ ಆಡಳಿತ ಮುಖ್ಯ ನ್ಯಾಯಾಧೀಶರು ಖುದ್ದು ಜಿಲ್ಲೆಗೆ ಭೇಟಿ ನೀಡಿ ಡಿಸೆಂಬರ್ ಅಂತ್ಯದೊಳಗೆ ಕಟ್ಟಡ ಕೆಲಸ ಪೂರ್ಣಗೊಳಿಸಿ, ನ್ಯಾಯಾಂಗ ಇಲಾಖೆಗೆ ಬಿಟ್ಟುಕೊಡಬೇಕೆಂದು ಅಂತಿಮ ಗಡುವು ವಿಧಿಸಿದ್ದರು. ಪ್ರಸ್ತುತ ಡಿಸೆಂಬರ್ ಕಳೆದು 2020ರ ಜನವರಿ ತಿಂಗಳು ಮುಗಿದರೂ ಈ ನ್ಯಾಯಾಲಯ ಕಟ್ಟಡ ಕಾಮಗಾರಿ ಮುಗಿಯುವ ಲಕ್ಷಣ ಕಂಡುಬಂದಿಲ್ಲ.

ಹೊರಗೆ ಮಾತ್ರ ಬಣ್ಣ

ನ್ಯಾಯಾಲಯದ ನೂತನ ಈ ಕಟ್ಟಡ ಹೊರಗಿನಿಂದ ಬಣ್ಣ ಬಳಿದುಕೊಂಡು; ಒಂದು ರೀತಿ ಕೆಲಸ ಮುಗಿದಿರುವಂತೆ ಗೋಚರಿಸಲಿದೆ. ಒಳ ಹೊಕ್ಕರೆ ಯಾವುದೇ ಕೆಲಸವೂ ಮುಗಿದಿಲ್ಲ. ಬದಲಾಗಿ ಅಳವಡಿಸಿ ರುವ ಬಾಗಿಲು - ಕಿಟಕಿಗಳ ಚಿಲಕಗಳು ಕಳ್ಳರ ಪಾಲಾಗಿ, ಪುಂಡರಿಗೆ ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಸ್ಥಳ ಕಲ್ಪಿಸಿದಂತಿದೆ. ಬೀದಿ ನಾಯಿಗಳು, ಅಡ್ಡಾಡಿ ದನಗಳಿಗೆ ಆಸರೆಯ ತಾಣದಂತಿದೆ.

ಪರಿಣಾಮ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಒಂದು ರೀತಿ ಮುಜುಗರ ಅನುಭವಿಸುತ್ತಿದ್ದು, ನ್ಯಾಯಾಲಯಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ರೂ.36 ಕೋಟಿ ಯಿಂದ ಸಾಧ್ಯವಿಲ್ಲ ಎಂದಿರುವ ಗುತ್ತಿಗೆ ಸಂಸ್ಥೆ ಹಾಗೂ ಲೋಕೋಪ ಯೋಗಿ ಇಲಾಖೆ, ಹೆಚ್ಚುವರಿ 3 ಕೋಟಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಯಂತೆ. ಹೀಗಾಗಿ ನೂತನ ನ್ಯಾಯಾಲಯಕ್ಕೆ ನೂರೆಂಟು ವಿಘ್ನಗಳೊಂದಿಗೆ, ಅದು ಈ ವರ್ಷದಲ್ಲೂ ಕಾರ್ಯಾರಂಭಿಸುವ ಕನಸು ನನಸಾಗುವ ಲಕ್ಷಣ ಗೋಚರಿಸದಾಗಿದೆ.