ವೀರಾಜಪೇಟೆ, ಫೆ. 1: ಅಮ್ಮತ್ತಿಯ ಜನ ಜಾಗೃತಿ ಸಮಿತಿ ವತಿಯಿಂದ ತಾ. 2 ರಂದು (ಇಂದು) ಹಮ್ಮಿಕೊಂಡಿರುವ ಜನ ಜಾಗೃತಿ ಸಭೆಗೆ ಅಮ್ಮತ್ತಿಯ ಛೇಂಬರ್ ಆಫ್ ಕಾಮರ್ಸ್‍ನ ಸ್ಥಾನೀಯ ಸಮಿತಿ ಪೂರ್ಣ ಬೆಂಬಲ ನೀಡಲಿದ್ದು ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂಜೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿರುವುದಾಗಿ ಕಾರ್ಯದರ್ಶಿ ಪ್ರಜೀತ್ ತಿಳಿಸಿದ್ದಾರೆ.
ಅಮ್ಮತ್ತಿಯ ಛೇಂಬರ್ ಆಫ್ ಕಾಮರ್ಸ್ ವತಿಯಿಂದ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಜೀತ್ ಅವರು ಸಾಮರಸ್ಯ ಸಹಬಾಳ್ವೆ ಹಾಗೂ ಶಿಸ್ತಿನ ಸಮಾಜ ಜೀವನದಿಂದಾಗಿ ಕೊಡಗು ತನ್ನ ನೆಲದಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಬಂದಿದೆ.ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮ ಸಾಮಾಜಿಕ ಜಾಲ ತಾಣಗಳಲ್ಲಿ ಬಂದ ವರದಿಯಂತೆ ಕೊಡಗು ಭಯೋತ್ಪಾದಕರ ಅಡಗು ತಾಣವಾಗಿರುವುದು ಹಾಗೂ ದೇಶ ದ್ರೋಹಿ ಚುಟುವಟಿಕೆಗಳಿಗೆ ತರಬೇತಿ ಕೇಂದ್ರವನ್ನಾಗಿ ಬಳಸಿಕೊಂಡಿರುವುದು ತಿಳಿದು ಬಂದಿದೆ. ಭವಿಷ್ಯದಲ್ಲಿ ಕೊಡಗಿನ ಜನತೆಗೆ ಮಾರಕವಾಗುವ ಇಂತಹ ಕೃತ್ಯಗಳನ್ನು ತಡೆಯಲು ಅಮ್ಮತ್ತಿಯ ಜನ ಜಾಗೃತಿ ಆಂದೋಲನ ಸಹಾಯಕಾರಿ ಯಾಗಲಿದೆ ಎಂದರು.
ಚೇಂಬರ್‍ನ ಸ್ಥಾನೀಯ ಸಮಿತಿ ಅಧ್ಯಕ್ಷ ಸುವಿನ್ ಗಣಪತಿ ಮಾತನಾಡಿ ದೇಶ ದ್ರೋಹಿ ಚಟುವಟಿಕೆಗಳನ್ನು ಹತ್ತಿಕ್ಕಲು ಜಾತಿ, ಮತ ಬೇಧವಿಲ್ಲದೆ ರಾಜಕೀಯ ರಹಿತವಾಗಿ ಎಲ್ಲರೂ ಸಹಕಾರದೊಂದಿಗೆ ಹೋರಾಟ ನಡೆಸೋಣ, ಈ ಜನ ಜಾಗೃತಿ ಸಭೆಗೆ ಅಮ್ಮತ್ತಿಯ ರೈತ ಸಂಘ, ಸ್ಪೋಟ್ರ್ಸ್ ಕ್ಲಬ್, ರಾಯಲ್ ಕ್ಲಬ್, ಮಿಲನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಛೇಂಬರ್‍ನ ಉಪಾಧ್ಯಕ್ಷ ಕೆ.ಜೆ. ಜಾರ್ಜ್, ಪದಾಧಿಕಾರಿಗಳಾದ ಪ್ರಹ್ಲಾದ್, ಅಬೂಬಕರ್ ಇತರರು ಹಾಜರಿದ್ದರು.
ಯುವಕ ಸಂಘದ ಬೆಂಬಲ
ಅಮ್ಮತ್ತಿಯಲ್ಲಿ ಜನ ಜಾಗೃತಿ ಸಮಿತಿಯಿಂದ ಏರ್ಪಡಿಸಿರುವ ಸಭೆಗೆ ಅಮ್ಮತ್ತಿ ಕಾರ್ಮಾಡು ಗ್ರಾಮದ ಚೌಡೇಶ್ವರಿ ನಗರದ ಅಂಬೇಡ್ಕರ್ ಯುವಕ ಸಂಘ ಬೆಂಬಲ ವ್ಯಕ್ತಪಡಿಸಿದೆ ಎಂದು ಅಧ್ಯಕ್ಷ ಅಭಿಜಿತ್ ತಿಳಿಸಿದ್ದಾರೆ.
ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಭಿಜಿತ್ ಕೆಲವರು ಕೊಡಗಿನಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಕೈ ಹಾಕಿದ್ದು ಅಮ್ಮತ್ತಿಯ ಜನ ಜಾಗೃತಿ ಸಭೆಯನ್ನು ಎಲ್ಲರೂ ಒಮ್ಮತದಿಂದ ಬೆಂಬಲಿಸೋಣ ಎಂದರು.
ಅಮ್ಮತ್ತಿ ಮುತ್ತಪ್ಪ ದೇವಾಲಯದ ಎಂ.ಎಂ.ಲಿಜೇಶ್ ಮಾತನಾಡಿ ಹೊರ ರಾಜ್ಯದಿಂದ ಬಂದಿರುವ ಕಾರ್ಮಿಕರು ಸಮಾಜಘಾತುಕ ಕೃತ್ಯದಲ್ಲಿ ತೊಡಗುತ್ತಿದ್ದಾರೆ. ಅಸ್ಸಾಂ. ಬಿಹಾರ್, ಜಾರ್ಖಂಡ್ ಮೊದಲಾದೆಡೆಗಳಿಂದ ಬಂದಿರುವ ಕೂಲಿ ಕಾರ್ಮಿಕರ ಮೇಲೂ ನಿಗಾ ಇರಿಸಬೇಕು. ಇವರುಗಳ ದಿನಚರಿಯನ್ನು ತೋಟದ ಮಾಲೀಕರು ದಾಖಲಿಸಬೇಕು. ಆದಷ್ಟು ಹೊರ ರಾಜ್ಯದ ಕಾರ್ಮಿಕರನ್ನು ಕೊಡಗಿಗೆ ಬಾರದಂತೆ ನಿರ್ಬಂಧಿಸುವ ಪ್ರಯತ್ನವಾಗಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಯುವಕ ಸಂಘದ ನಿರ್ದೇಶಕ ಎಚ್.ಕೆ. ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.