ಮಡಿಕೇರಿ, ಫೆ. 1: ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ನೆಹರು ಯುವ ಕೇಂದ್ರ ಕೊಡಗು ಜಿಲ್ಲೆ,ಮಡಿಕೇರಿ (ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ) ಮತ್ತು ಪಯಸ್ವಿನಿ ಯುವಕ ಮಂಡಲ, ಸಂಪಾಜೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಹುತಾತ್ಮ ದಿನಾಚರಣೆ ಮತ್ತು ಕುಷ್ಟ ರೋಗ ಅರಿವು ಆಂದೋಲನ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಪಾಜೆಯಲ್ಲಿ ನಡೆಯಿತು. ಪಯಸ್ವಿನಿ ಯುವಕ ಮಂಡಲದ ಉಪಾಧ್ಯಕ್ಷ ತೀರ್ಥ ಪ್ರಸಾದ್ ದುಗ್ಗಳ ಅವರ ಅಧ್ಯಕ್ಷತೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್ ನೆರವೇರಿಸಿದರು.

ರಾಷ್ಟ್ರೀಯ ಯುವ ಕಾರ್ಯಕರ್ತ ಸಂತೋಷ್ ಕುಮಾರ್ ಮಡಿಕೇರಿ ತಾಲೂಕು ಇವರು ಸಮಾರಂಭದಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳ ನ್ನಾಡಿದರು, ಮುಖ್ಯ ಅತಿಥಿಗಳಾಗಿ ಶ್ರೀಧರ್ ಪಡ್ಪು, ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಸಂಪಾಜೆ, ಸಾವಿತ್ರಿ, ಮುಖ್ಯೋಪಾಧ್ಯಾಯರು ಸಂಪಾಜೆ ಶಾಲೆ, ರಮಾದೇವಿ ಕಳಗಿ, ಸದಸ್ಯರು ಗ್ರಾಮ ಪಂಚಾಯಿತಿ ಸಂಪಾಜೆ, ಕೆ.ಆರ್. ವಿಠಲ್, ನಿವೃತ್ತ ಮುಖ್ಯೋಪಾಧ್ಯಾಯರು ಸಂಪಾಜೆ, ಪಿ. ಮಲ್ಲಿಕಾರ್ಜುನ್, ಅಡಳಿ ತಾಧಿಕಾರಿಗಳು (ಉದ್ಭವ ಟ್ರಸ್ಟ್) ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಇವರೆಲ್ಲರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮಾಯಿಲಪ್ಪ ಮೂಲ್ಯ, ನಿವೃತ ಯೋಧರು ಭಾರತೀಯ ಸೇನೆ ಇವರು ಭಾಗವಹಿಸಿದ್ದರು. ಸಭೆಯಲ್ಲಿ ಸಂಪಾಜೆ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಅನಂತ್ ಕುಮಾರ್ ಅವರು ಹುತಾತ್ಮರ ದಿನಾಚರಣೆಯನ್ನು ಸ್ಮರಿಸುತ್ತಾ ಸ್ಪರ್ಶ್ ಕುಷ್ಠ ರೋಗ ಅರಿವು ಜಾಗೃತಿ ಆಂದೋಲನದ ಬಗ್ಗೆ ವಿವರಣೆ ನೀಡಿದರು, ಆರೋಗ್ಯ ಕೇಂದ್ರ ಅಡಳಿತಾಧಿಕಾರಿಗಳಾದ ಮಲ್ಲಿಕಾರ್ಜುನ್ ಮಾತನಾಡಿ ಕುಷ್ಠರೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಮತ್ತು ಜನವರಿ 30 ರಿಂದ ಫೆಬ್ರವರಿ 13ನೇ ದಿನಾಂಕದವರೆಗೆ ನಡೆಯುವ ಜಾಗೃತಿ ಆಂದೋಲನದ ಬಗ್ಗೆ ಅರಿವು ಮೂಡಿಸಿದರು. ಪಯಸ್ವಿನಿ ಯುವಕ ಮಂಡಲ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ನಿವೃತ ಯೋಧರಾದ ಮಾಯಿಲಪ್ಪ ಮೂಲ್ಯ ಅವರು ಭಾರತೀಯ ಸೇನೆಯಲ್ಲಿ ತನ್ನ ಸೇವಾ ಸಂದರ್ಭದಲ್ಲಿ ಆದಂತಹ ಘಟನೆಗಳನ್ನು ವಿವರಿಸುತ್ತಾ ಯುವಕರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಚರಣ್ ಬಿ ಜೆ ಮತ್ತು ಮಿಥುನ್ ಎಂ.ಬಿ, ರಾಷ್ಟ್ರೀಯ ಯುವ ಕಾರ್ಯಕರ್ತರು, ಮಡಿಕೇರಿ ತಾಲೂಕು ಹಾಗೂ ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ, ಪಯಸ್ವಿನಿ ಯುವಕ ಮಂಡಲದ ಸರ್ವ ಸದಸ್ಯರುಗಳು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಾಲಾ ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು. ಶಿಕ್ಷಕರಾದ ಚೇತನ್ ಸ್ವಾಗತಿಸಿ, ವಂದಿಸಿದರು. ನಂತರ ಪಯಸ್ವಿನಿ ಯುವಕ ಮಂಡಲ ಸಂಪಾಜೆ ಇದರ ಸದಸ್ಯರು ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಿಹಿ ತಿಂಡಿ ಹಂಚಿದರು.