ಕೂಡಿಗೆ, ಫೆ. 1: ಯಲಕನೂರು ಕಲ್ಲು ಕೋರೆಯಿಂದ ಕುಶಾಲನಗರ ಕಡೆಗೆ ಕಲ್ಲು ಸಾಗಾಟ ಮಾಡುವ ಲಾರಿಗಳನ್ನು ಸ್ಥಳೀಯ ಗ್ರಾಮಸ್ಥರು, ರೈತರು ತಡೆದು ಸೀಗೆಹೊಸೂರು-ಭುವನಗಿರಿ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ ಘಟನೆ ನಡೆಯಿತು.

ಸೀಗೆಹೊಸೂರು-ಭುವನಗಿರಿ ರಸ್ತೆ ತೀರಾ ಹಾಳಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ನೂರಾರು ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ರಸ್ತೆಯ ಅವ್ಯವಸ್ಥೆಯಿಂದ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆಯು ನಡೆದಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದೆ. ಈ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಮಾಡಬೇಕಾಗಿದೆ. ರಸ್ತೆ ಅವ್ಯವಸ್ಥೆಯಿಂದ ತೊಂದರೆ ಆಗುತ್ತಿರುವದರಿಂದ ಗ್ರಾಮಸ್ಥರು ಲಾರಿ ತಡೆದು 4 ಗಂಟೆಗಳ ಕಾಲ ಪ್ರತಿಭಟನೆ ಮಾಡಿದರು.

ಪ್ರತಿಭಟನೆ ಸಂದರ್ಭ ಗ್ರಾಮದ ಪ್ರಮುಖರಾದ ನಂಜುಂಡಸ್ವಾಮಿ, ಗಿರಿಯಪ್ಪ ಮೋಹನ್, ಗಿರೀಶ ಕಿರಣ್, ದೇವರಾಜು, ನಾಗೇಶ್, ದಿನೇಶ್, ಮಹೇಶ್, ಪ್ರವೀಣ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದರು. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಮತ್ತು ಕಲ್ಲು ಕೋರೆ ಮಾಲೀಕರನ್ನು ಸ್ಥಳಕ್ಕೆ ಕರೆಸಿ, ಚರ್ಚಿಸಿದರು. ಪರ್ಯಾಯ ವ್ಯವಸ್ಥೆಯ ಭರವಸೆಯೊಂದಿಗೆ ಗ್ರಾಮಸ್ಥರ ಮನವೊಲಿಸಿದರು.

ಸೀಗೆಹೊಸೂರು ಗ್ರಾಮದಲ್ಲಿ ನಡೆದ ಪ್ರತಿಭಟನೆ ಸ್ಥಳಕ್ಕೆ ಸೋಮವಾರಪೇಟೆ ತಾಲೂಕಿನ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಮೋಹನ್ ಕುಮಾರ್ ಹಾಗೂ ಕುಶಾಲನಗರ ವಲಯ ಇಂಜಿನಿಯರ್ ಪೀಟರ್ ಭೇಟಿ ನೀಡಿ ಕಾಂಕ್ರಿಟ್ ರಸ್ತೆಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಭರವಸೆ ನೀಡಿದ್ದಾರೆ.