ಮಡಿಕೇರಿ, ಫೆ.1: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸೋಮವಾರಪೇಟೆ ತಾಲೂಕು ಪಂಚಾಯಿತಿಯಲ್ಲಿ ಕೋಟ್ಪಾ 2003 ಕಾಯ್ದೆಯ ಅನುಷ್ಠಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಸೋಮವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಪುನೀತ ರಾಣಿ ಪರಿಣಾಮಕಾರಿಯಾಗಿ ಕೋಟ್ಪಾ 2003 ಕಾಯ್ದೆ ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.
ಜಿಲ್ಲೆಯಲ್ಲಿ ಸೋಮವಾರಪೇಟೆಯನ್ನು ಕೋಟ್ಪಾ ಉನ್ನತ್ತ ಅನುಷ್ಠಾನ ತಾಲೂಕು ಎಂದು ಘೋಷಣೆ ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಇದ್ದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ಮಂಜುನಾಥ್ ಆರ್. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಗಣಕ ಯಂತ್ರ ನಿರ್ವಾಹಕರಾದ ವರ್ಷ ವಂದಿಸಿದರು. ಈ ಕಾರ್ಯಾಗಾರದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು ಮತ್ತು ಇತರರು ಉಪಸ್ಥಿತರಿದ್ದರು.