ನಿಡ್ತ-ಸೋಮವಾರಪೇಟೆ, ಫೆ. 1: ತಾಲೂಕಿನ ನಿಡ್ತ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂಡಿಬಂದ ಕವಿಗೋಷ್ಠಿ, ಕೇಳುಗರನ್ನು ಚಿಂತನಾಲೋಕಕ್ಕೆ ಕೊಂಡೊಯ್ಯಿತು.

ಹಲವಷ್ಟು ಕವಿಗಳು ತಮ್ಮ ಕವನದಲ್ಲಿ ಕನ್ನಡ ಸಾಹಿತ್ಯ, ರೈತರ ಕಷ್ಟನಷ್ಟ, ಜೀವನದ ಜಂಜಾಟ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ತಮ್ಮ ಕವನದ ಸಾಲುಗಳಲ್ಲಿ ಹಿಡಿದಿಟ್ಟರು. ಬಹಳಷ್ಟು ಕವಿಗಳು ಸಮಾಜದ ಆಗುಹೋಗು, ಅನಿಷ್ಟ, ಸಾಮಾಜಿಕ ಅನ್ಯಾಯಗಳ ವಿರುದ್ಧ ದÀನಿ ಎತ್ತಿದರು.

ಚೇರಂಬಾಣೆಯ ಕಲ್ಲುಮುಟ್ಲು ಜಶ್ಮಿ ಚಿಂತು ‘ಕನ್ನಡ ಸಾಹಿತ್ಯ ಪ್ರೇಮ’ ಕವನದಲ್ಲಿ ಭಾಷಾ ಸಾಹಿತ್ಯ, ಕನ್ನಡ ಶಾಲೆಗಳ ಉಳಿವಿನ ಬಗ್ಗೆ ತನ್ನ ಕಾಳಜಿ ವ್ಯಕ್ತಪಡಿಸಿದರು. ಸೋಮವಾರ ಪೇಟೆಯ ನ.ಲ. ವಿಜಯ ‘ಕಡು ಭ್ರಷ್ಟಾಚಾರಿಗಳ ಕೈಗೆ ಬಿದಿರಿನ ಬುಟ್ಟಿ ಕೊಡಿ’ ಎಂಬ ಕವನದಲ್ಲಿ ತಮ್ಮ ಕೋಪವನ್ನು ಹೊರಹಾಕಿದರು.

ಜಯಲಕ್ಷ್ಮೀ ಎಂ.ಬಿ. ‘ನಾಡಹಬ್ಬ’ ಕವನದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಬೆಳಕು ಚೆಲ್ಲಿದರು. ಮೂರ್ನಾಡಿನ ರಮ್ಯ ‘ಬಣ್ಣದ ಬಕೀಟು’ ಕವನದಲ್ಲಿ ಜೀವನದ ಮಜಲುಗಳ ಬಗ್ಗೆ ಚಿಂತನೆ ಹರಿಸಿದರು. ನಿರ್ಮಲ ಪೂವಯ್ಯ ತಮ್ಮ ‘ಶಿಕ್ಷಣ’ ಕವನದಲ್ಲಿ ಜೀವನ ಮೌಲ್ಯಗಳನ್ನು ಕಲಿಸುವದೇ ನಿಜವಾದ ಶಿಕ್ಷಣ ಎಂದು ಪ್ರತಿಪಾದಿಸಿದರು.

‘ನನ್ನೊಳಗಿನ ತಲ್ಲಣ’ ಕವನದಲ್ಲಿ ಅನಿತಾ ಶುಭಾಕರ್ ರೈತನ ಸಂಕಷ್ಟವನ್ನು ಬಿಚ್ಚಿಡುತ್ತಲೇ ಯುವ ಜನಾಂಗ ಮಾದಕ ವ್ಯಸನಗಳಿಗೆ ದಾಸರಾಗದಂತೆ ಮನವಿ ಮಾಡಿದರು. ‘ಬಾಡಿಗೆದಾರ’ಕವನದಲ್ಲಿ ವೀಣಾ ಎನ್. ರಾವ್ ಜೀವನದ ವಿವಿಧ ಮಜಲುಗಳ ಬಗ್ಗೆ ಬೆಳಕು ಚೆಲ್ಲಿದರು. ಕವಯತ್ರಿ ಹೆಚ್.ಬಿ. ಜಯಮ್ಮ ‘ಬದುಕ ಬಯಸುವವರು’ ಕವನದಲ್ಲಿ ದೌರ್ಜನ್ಯಕ್ಕೆ ಒಳಗಾದ ಅಬಲೆಯರಿಗೆ ದನಿಯಾದರು. ಕುಶಾಲನಗರದ ಕೇಡನ ಪ್ರಗತಿ ‘ಉಗ್ರರ ಅಟ್ಟಹಾಸ’ ಕವನದಲ್ಲಿ ಭಯೋತ್ಪದನೆಯ ವಿರುದ್ಧ ಕೋಪ ವ್ಯಕ್ತಪಡಿಸುತ್ತಲೇ, ದ್ವೇಷ ಅಳಿಸಿ; ಪ್ರೀತಿಯ ದೀವಿಗೆ ಬೆಳಗಿಸಿ ಎಂದು ಸಂದೇಶ ನೀಡಿದರು.

ವಿಶ್ವನಾಥ್ ‘ಸ್ವಾರ್ಥ ನಿಸ್ವಾರ್ಥ’ ಕವನದಲ್ಲಿ ಬುದ್ದನಾಗುವಲ್ಲಿನ ಗೊಂದಲಗಳನ್ನು ತೆರೆದಿಟ್ಟರು. ಅಬ್ದುಲ್ಲ ‘ಈ ಶಿಕ್ಷೆ ಎಷ್ಟು ಸರಿ’ ಎಂಬ ಕವನದಲ್ಲಿ ಸಿಎಎ ಮತ್ತು ಎನ್‍ಆರ್‍ಸಿ ಬಗ್ಗೆ ಅಸಮಾಧಾನ ಹೊರಹಾಕಿದರು. ಇಂದಿರಾ ‘ಸ್ವಾರ್ಥ ಬಿಡು’ ಕವನದಲ್ಲಿ ಜಾತಿ-ಧರ್ಮಗಳ ನಡುವಿನ ವೈರತ್ವ ಮರೆಯಾಗಲಿ ಎಂದು ಆಶಿಸಿದರು.

ಇಂದುಮತಿ ರವೀಂದ್ರ ತಮ್ಮ ಕವನದಲ್ಲಿ ದೇಶವನ್ನು ವರ್ಣಿಸಿದರು. ಆಶಾ ಪುಟ್ಟರಾಜು ‘ಆಸರೆ’ ಕವನದಲ್ಲಿ ಸಂಗಾತಿಯ ಬಗ್ಗೆ ಕಾಳಜಿ ತೋರಿದರು. ವಸಂತಿ ರವೀಂದ್ರ ‘ಭಾವೈಕ್ಯತೆ ಇನ್ನಿಲ್ಲ’ ಎಂಬ ಕವನ ವಾಚಿಸಿದರು. ರಾಚು ಶ್ಯಾಂ ‘ಎತ್ತಸಾಗಬೇಕಿದೆ ನಾವು’ ಕವನದಲ್ಲಿ ಸಮಾಜ ಸಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕೆ.ಪಿ. ಸುದರ್ಶನ್ ಕವನ ‘ಕಟು ವಾಸ್ತವ’ದಲ್ಲಿ ತಂದೆ ತಾಯಿಯ ಮಹತ್ವವನ್ನು ತಿಳಿಸಿಕೊಡುತ್ತಲೇ, ಯುವ ಜನಾಂಗ ಅಡ್ಡದಾರಿ ಹಿಡಿಯಬಾರದು ಎಂಬ ಸಂದೇಶ ರವಾನಿಸಿದರು. ಪುಟ್ಟಣ್ಣ ಆಚಾರ್ಯ ಅವರು ‘ವೇಗದ ಜಗತ್ತು ಮನುಕುಲಕ್ಕೆ ಆಪತ್ತು’ ಕವನದಲ್ಲಿ ಬದುಕಿನ ತಲ್ಲಣಗಳನ್ನು ತೆರೆದಿಟ್ಟರು.

ಚೇರಂಬಾಣೆಯ ಎ.ಎಸ್. ಸತೀಶ್‍ಕುಮಾರ್ ‘ನಾ ಹೇಗೆ ಮಾತ ನಾಡಲಿ’ ಕವನದಲ್ಲಿ ಅಹಂಕಾರದ ಮನಸ್ಸುಗಳ ಬಗ್ಗೆ ತಾತ್ಸಾರ ತೋರಿದರು. ವತ್ಸಲ ಶ್ರೀಶಾ ‘ಎಲ್ಲರಂತಿಲ್ಲ ನನ್ನ ಮನದೊಡೆಯ’ ಕವನದಲ್ಲಿ ಮಹಿಳೆಯ ತಲ್ಲಣಗಳನ್ನು ಬಿಚ್ಚಿಟ್ಟರು. ಚಿಕ್ಕಕೊಳತ್ತೂರಿನ ವಿದ್ಯಾರ್ಥಿನಿ ಗಾಯತ್ರಿ ‘ಮೂರು ಮುತ್ತುಗಳು’ ಕವನದಲ್ಲಿ ಸಕಲ ಜೀವ ರಾಶಿಗಳನ್ನೂ ಪ್ರೀತಿಸಿ; ಸರ್ವ ಧರ್ಮಗಳ ಸಂದೇಶ ರವಾನಿಸಿದರು.

ರಾಜೇಶ್ ತಮ್ಮ ಕವನದಲ್ಲಿ ಕನ್ನಡ ಹೆಮ್ಮೆಯ ಮರವಾಗಬೇಕು ಎಂದು ಆಶಿಸಿದರು. ಚುಟುಕು ಕವಿ ಹಾ.ತಿ. ಜಯಪ್ರಕಾಶ್ ‘ಕವಿಯ ಜೋಳಿಗೆ ಯೊಳಗೆ ಏನಿದೆ?’ ಎಂದು ಪ್ರಶ್ನಿಸುತ್ತಲೇ ವೀಳ್ಯದೆಲೆಯ ಮೇಲೆ ಬರೆದಿದ್ದ ಸುಮಾರು 15ಕ್ಕೂ ಅಧಿಕ ಚುಟುಕಗಳನ್ನು ವಾಚಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.

ಕವಿಗೋಷ್ಠಿಯಲ್ಲಿ ಅತಿಥಿಯಾಗಿ ಭಾಗಿಯಾಗಿದ್ದ ಸಾಹಿತಿ ನಯನತಾರಾ, ಕವಿಯ ಹೃದಯ ವೀಣೆಯಂತೆ, ಜಗತ್ತಿನ ಬೆಳವಣಿಗೆಗಳು ಇದನ್ನು ನುಡಿಸುತ್ತವೆ. ಕಾವ್ಯ ಹೃದಯದ ಭಾಷೆ, ಸಾಮಾಜಿಕ ಬದಲಾವಣೆಗಳಿಗೆ ಕವನಗಳು ಕಾರಣವಾಗಬೇಕು. ಕವಿಗಳಿಗೆ ಸಾಮಾಜಿಕ ಬದ್ಧತೆ ಬೇಕು ಎಂದರು.

ಮತ್ತೋರ್ವ ಅತಿಥಿ ಮೂಡಗದ್ದೆ ವಿನೋದ್ ಮಾತನಾಡಿ, ಸಾಹಿತ್ಯ ರಚನೆಗೆ ಕೀಳರಿಮೆ, ಮುಜುಗರ ದೂರ ಮಾಡಬೇಕು. ನಮ್ಮ ಸಾಹಿತ್ಯವನ್ನು ಇತರರೊಂದಿಗೆ ತುಲನೆ ಮಾಡ ಬಾರದು ಎಂದು ಕಿವಿಮಾತು ಹೇಳಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೀಲಾ ದಯಾನಂದ್ ಮಾತನಾಡಿ, ಮನದೊಳಗಿನ ಮೌನಕ್ಕೆ ಅಕ್ಷರದ ರೂಪ ನೀಡುವದೇ ಸಾಹಿತ್ಯ. ಸಾಹಿತ್ಯಕ್ಕೆ ವಿಷಯಗಳ ಕೊರತೆಯಿಲ್ಲ. ಜನರಲ್ಲಿ ಬದಲಾವಣೆ ತಂದರೆ ಮಾತ್ರ ಕಾವ್ಯ ರಚನೆ ಸಾರ್ಥಕ ಎಂದರು.

ವೇದಿಕೆಯಲ್ಲಿ ಹಿರಿಯ ಸಾಹಿತಿ ಗಳಾದ ಪಿ.ಎಸ್. ವೈಲೇಶ್, ಶರ್ಮಿಳಾ ರಮೇಶ್, ರಾಣಿ ರವೀಂದ್ರ, ಕಡ್ಲೇರ ತುಳಸಿ, ತೀರ್ಥಕುಮಾರ್, ಶಿಕ್ಷಕ ವಿಶ್ವನಾಥ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗ ಆಯ್ಕೆ ಶ್ಲಾಘನೀಯ

ಯಾವ ಜಾಗದಲ್ಲಿ ಸಾಹಿತ್ಯ, ಸಂಸ್ಕøತಿ, ರಂಗಭೂಮಿ ಇದೆಯೋ ಅದೇ ನಾಗರಿಕ ಸಮಾಜ; ಬಾರ್, ರೆಸ್ಟೋರೆಂಟ್, ಮರಕಡಿಯುವ ಮಿಲ್‍ಗಳ ಮೇಲೆ ನಾಗರಿಕ ಸಮಾಜ ನಿರ್ಧಾರವಾಗುವದಿಲ್ಲ. ಗ್ರಾಮೀಣ ಭಾಗದಲ್ಲಿ ಇಂತಹ ಸಮ್ಮೇಳನ ನಡೆಸುತ್ತಿರುವದು ಶ್ಲಾಘನೀಯ. ಸಾಹಿತಿಗಳಾಗದವರಿಗೂ ಕವಿ ಮನಸ್ಸುಗಳಾಗಲು ಸಾಧ್ಯವಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅಭಿಪ್ರಾಯಿಸಿದರು.

ರಂಗಾಯಣದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಅಡ್ಡಂಡ ಕಾರ್ಯಪ್ಪ ಮತ್ತು ಅನಿತಾ ಕಾರ್ಯಪ್ಪ ಅವರುಗಳನ್ನು ಸಮ್ಮೇಳನದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಜನಪದ ಕ್ರೀಡೋತ್ಸವ: ಕನ್ನಡ ಸಾಹಿತ್ಯ ಸಮ್ಮೇಳನದ ಜನಪದ ಕ್ರೀಡೋತ್ಸವ ಸ್ಥಳೀಯರ ಸಂಭ್ರಮಕ್ಕೆ ಕಾರಣವಾಯಿತು.

ಜಾನಪದ ಕ್ರೀಡೋತ್ಸವ ಅಂಗವಾಗಿ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ 5 ಕಿ.ಮೀ.ದೂರದ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತು. ನಿಡ್ತ ಸರಕಾರಿ ಶಾಲೆಯಿಂದ ಹಾರೆಹೊಸೂರು, ಚೌಡೇನಹಳ್ಳಿ ಗ್ರಾಮದವರೆಗೆ ಸ್ಪರ್ಧೆ ನಡೆಯಿತು. ಸರಕಾರಿ ಪ್ರೌಢಶಾಲಾ ಆವರಣದಲ್ಲಿ ವಿವಿಧ ಗ್ರಾಮದ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿವಿಧ ಸಂಸ್ಕøತಿಯ ಸಂಕೇತ ಸಾರುವ ರಂಗೋಲಿಗಳು ನೋಡುಗರನ್ನು ಆಕರ್ಷಿಸಿತು.

ಇದರೊಂದಿಗೆ ಮಹಿಳೆಯರಿಗೆ ಬಸ್ಸು ಹುಡುಕಾಟ, ವಿದ್ಯಾರ್ಥಿಗಳಿಗೆ ಬಲೂನ್ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೇವಲ ಕಾರ್ಯಕ್ರಮಗಳಿಗಷ್ಟೇ ಸಮ್ಮೇಳನ ಮೀಸಲಾಗದೇ, ಸ್ಥಳೀಯರಿಗೆ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಂಭ್ರಮದ ವಾತಾವರಣ ನಿರ್ಮಿಸುವಲ್ಲಿ ಕಸಾಪ ಯಶಸ್ವಿಯಾಯಿತು.

ಕ್ರೀಡೋತ್ಸವವನ್ನು ಜಿ.ಪಂ. ಸದಸ್ಯೆ ಕುಮುದ ಧರ್ಮಪ್ಪ ಉದ್ಘಾಟಿಸಿ, ಗ್ರಾಮೀಣ ಕ್ರೀಡೆಯನ್ನು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್‍ಸಾಗರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಮತ್ತಿತರರು ಹಾಜರಿದ್ದರು.