ವೀರಾಜಪೇಟೆ, ಫೆ. 1: ಸಮೂಹ ಮಕ್ಕಳ ಅಂತರ್ ಶಾಲಾ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವೀರಾಜಪೇಟೆ ವಿಭಾಗದ ವಿದ್ಯಾರ್ಥಿಗಳು ಸಾಧನೆಗೈದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ ಭವನ ವಿಜಯನಗರ ಮೈಸೂರುವಿನಲ್ಲಿ ನಡೆದ ಅಂತರ್ ಶಾಲೆಗಳ ಕರಾಟೆ ಚಾಂಪಿಯನ್ ಕ್ರೀಡಾಕೂಟದಲ್ಲಿ ವೀರಾಜ ಪೇಟೆಯ ಎಸ್.ಎಸ್. ಶೀಟೋರಿಯೊ ಕರಾಟೆ ಅಕಾಡೆಮಿ ಇಂಡಿಯಾ ಸಂಸ್ಥೆಯ ವಿದ್ಯಾರ್ಥಿಗಳು, ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ವಿಭಾಗಗಳಲ್ಲಿ ಭಾಗವಹಿಸಿ ಪರಿತೋಷಕಗಳನ್ನು ಪಡೆದುಕೊಂಡಿದ್ದಾರೆ. ವೀರಾಜಪೇಟೆ ಚಿಕ್ಕಪೇಟೆ ಕರಾಟೆ ಶಾಲೆಯ ತರಬೇತುದಾರ ಕರ್ಣಂಡ ಪಿ. ಸೋಮಣ್ಣ ಅವರ ವಿದ್ಯಾರ್ಥಿಗಳಾದ ಅಯ್ಯಪ್ಪ ಚಿನ್ನದ ಪದಕ ಮತ್ತು ಬೆಳ್ಳಿಯ ಪದಕ, ಲಿಥನ್ ಮುತ್ತಪ್ಪ, ಕಲ್ಲಪ್ಪ ಮತ್ತು ನರೇನ್ ಮೊಣ್ಣಪ್ಪ, ಅವರುಗಳು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಸೋಮಣ್ಣ ಮತ್ತು ರಾಹುಲ್ ಪೂವಣ್ಣ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. 30 ಕೆ.ಜಿ. ಒಳಗಿನ ವಿಭಾಗದಲ್ಲಿ ವಿ.ಎಂ. ಪ್ರಜ್ವಲ್, ಶ್ರೇಯ ಚೌಹಾನ್, ಕೃತಿಕ ಅಕ್ಕಮ್ಮ, ಅದೀತ್ ಚೌಹಾನ್ ಮತ್ತು ಡ್ರಾವಿಡ್ ಅವರುಗಳು ಕಂಚಿನ ಪದಕ ಮತ್ತು ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕರಾಟೆ ಮತ್ತು ಕ್ರೀಡಾ ಅಸೋಸಿಯೇಶನ್‍ನ ಪ್ರಧಾನರಾದ ಶಿಹಾನ್ ಎಂ. ಅಲ್ತಫ್ ಪಾಶ, ಅಂತರರಾಷ್ಟ್ರೀಯ ಶಿಟೊರಿಯೊ ಕರಾಟೆ-ಡೂ ಅಸೋಸಿಯೇಶನ್ ಕರ್ನಾಟಕದ ಮುಖ್ಯ ತರಬೇತುದಾರ ಹಾಗೂ ಕ್ರೀಡಾಕೂಟದ ಅಯೋಜಕ ಶಿಹಾನ್ ಸುಧಾಕರ್ ಜಿ. ಮತ್ತು ಕ್ರೀಡಾ ಕೂಟದ ತೀರ್ಪುಗಾರ ಪಿ. ಸೋಮಣ್ಣ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 100ಕ್ಕೂ ಅಧಿಕ ಮಂದಿ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.