ಮಡಿಕೇರಿ, ಫೆ. 1: ಕಳೆದ ಜ. 25 ರಂದು ಮಂಗಳೂರು-ಮಡಿಕೇರಿ ಹೆದ್ದಾರಿಯ ದೇವರಕೊಲ್ಲಿ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನೊಬ್ಬ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ಸಾವಿಗೀಡಾಗಿದ್ದಾನೆ.

ಕೇರಳದ ಮಂಜೇಶ್ವರ ಮೂಲದ ನಿರೂಪ್ ಹಾಗೂ ಪ್ರಜ್ವಲ್ ಎಂಬವರು ದ್ವಿಚಕ್ರ ವಾಹನದಲ್ಲಿ (ಕೆಎ 19 ಇಎ 1029) ತೆರಳುವಾಗ, ಎದುರಿನಿಂದ ಮಾರುತಿ ಝೆನ್ ಕಾರು (ಕೆಎ 05 ಎಂಎ 7291) ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ತೀವ್ರ ಗಾಯಗೊಂಡಿದ್ದ ಬೈಕ್ ಸವಾರರು ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ ಬಳಿಕ, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಇಂದು ಬೈಕ್‍ನ ಹಿಂಬದಿ ಸವಾರನಾಗಿದ್ದ ಪ್ರಜ್ವಲ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.