ಮಡಿಕೇರಿ, ಜ. 27: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಮಡಿಕೇರಿಗೆ ಬಂದಿದ್ದ ಸಂದರ್ಭದ ಒಂದಿಷ್ಟು ವಿಶೇಷತೆಗಳು ‘ಶಕ್ತಿ’ ಕಂಡಂತೆ...
* ಮಧ್ಯಾಹ್ನ 1.15ಕ್ಕೆ ಮುಖ್ಯಮಂತ್ರಿಗಳ ಆಗಮನವೆಂದು ಸಮಯ ನಿಗದಿಯಾಗಿತ್ತು. ಸಮಯಕ್ಕೆ ಸರಿಯಾಗಿ ಮುಖ್ಯಮಂತ್ರಿಗಳು ಹೆಲಿಕಾಪ್ಟರ್‍ನಲ್ಲಿ ಬಂದಿಳಿದರು.
* ಶಂಕುಸ್ಥಾಪನೆ ಹಾಗೂ ಸಭಾಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ನಡೆದು ನಿಗದಿತ ಮೂರು ಗಂಟೆಗೆ ಮುಖ್ಯಮಂತ್ರಿಗಳು ಹಿಂದಿರುಗಿದರು.
* ಜಿಲ್ಲೆಯ ಸಮಸ್ಯೆಗಳ ಬಗ್ಗೆ ಶಾಸಕದ್ವಯರುಗಳಾದ ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರುಗಳು ಮುಖ್ಯಮಂತ್ರಿಗಳ ಗಮನ ಸೆಳೆದರು.
* ಕೊಡವ ಹಾಕಿ, ದಸರಾಗೆ ಅನುದಾನ, ಅರೆಭಾಷೆ ಅಕಾಡೆಮಿ ಸ್ಥಾಪನೆ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ಎಂದು ಸಂಸದ ಪ್ರತಾಪ್ ಸಿಂಹ ಹೊಗಳಿದರು.
* ಆಸ್ಪತ್ರೆಯ ಡಿ ದರ್ಜೆ ನೌಕರರನ್ನೇ ಆಸ್ಪತ್ರೆ ಒಳಗಡೆ ಬಿಡಲಿಲ್ಲ ಎಂದು ನೌಕರರು ಗೇಟ್ ಮುಂಭಾಗ ಪ್ರತಿಭಟಿಸಿ, ಪೊಲೀಸರ ವಿರುದ್ಧ ಹರಿ ಹಾಯ್ದರು.
* ವಾರ್ತಾ ಇಲಾಖೆಯ ಎಡವಟ್ಟಿನಿಂದಾಗಿ ಕೆಲವು ಪತ್ರಕರ್ತರನ್ನು ಪಾಸ್ ಇಲ್ಲದೆ ಬಿಡುವುದಿಲ್ಲ ಎಂದು ಪೊಲೀಸರು ಗೇಟ್ ಬಳಿ ತಡೆದು ನಿಲ್ಲಿಸುವಂತಾಯಿತು.
* ಮಾಧ್ಯಮದವರೆಂದು ತಿಳಿದಿದ್ದರೂ ಒಳ ಬಿಡದ ಪೊಲೀಸರ ವಿರುದ್ಧ ಮಾಧ್ಯಮದವರೂ, ಕೆ.ಪಿ. ಚಂದ್ರಕಲಾ, ವೀಣಾ ಅಚ್ಚಯ್ಯ ಅವರುಗಳು ಆಕ್ಷೇಪ ವ್ಯಕ್ತಪಡಿಸುವಂತಾಯಿತು.
* ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರ ಭಾಷಣದ ನಂತರ ಕಾರ್ಯಕ್ರಮ ಉದ್ಘಾಟನೆ ಮಾಡಿದ ಮುಖ್ಯಮಂತ್ರಿಗಳಿಗೆ ಕೊನೆಯಲ್ಲಿ ಭಾಷಣಕ್ಕೆ ಅವಕಾಶ ನೀಡಲಾಯಿತು.
* ನಾಡಗೀತೆಯನ್ನು ಇಂತಿಷ್ಟೇ ಸಮಯದ ಮಿತಿಯಲ್ಲಿ ಹಾಡಬೇಕೆಂಬ ನಿಯಮವಿದ್ದರೂ ಸರಕಾರೀ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಆಯ್ಕೆ ಮಾಡಿದ್ದ ಗಾಯಕರ ತಂಡ ಪದೇ ಪದೇ ರಿಪೀಟ್ ಮಾಡುತ್ತಾ ಗೀತೆಯನ್ನು ಎಳೆದಾಡಿದ್ದು ಕಂಡುಬಂದಿತು.
* ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಬಂದಿದ್ದ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಸಭಾಂಗಣದ ಎದುರು ವ್ಯವಸ್ಥೆ ಮಾಡಲಾಗಿದ್ದ ಜಾಗದಲ್ಲಿ ಕಾಯುತ್ತಿದ್ದರಾದರೂ ಸಮಯವಿಲ್ಲದ ಕಾರಣ ಮುಖ್ಯಮಂತ್ರಿಗಳು ನೇರವಾಗಿ ಕಾರನ್ನೇರಿದರು. ಹಲವು ಮಂದಿ ಮನವಿ ಸಲ್ಲಿಸಲಾಗದೇ ಪೆಚ್ಚು ಮೋರೆಯೊಂದಿಗೆ ವಾಪಸ್ ಮರಳುವಂತಾಯಿತು.
* ಹೊಸ ಭೋದಕ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ಸಂದರ್ಭ ಮುಖ್ಯಮಂತ್ರಿಗಳು ಜಿಲ್ಲೆಯ ಮಹಿಳಾ ಅಧಿಕಾರಿಗಳಾದ ಡಿಸಿ, ಎಸ್‍ಪಿ, ಸಿಇಓ ಹಾಗೂ ಎಡಿಸಿ ಅವರುಗಳನ್ನು ಕರೆಸಿ ಶಂಕುಸ್ಥಾಪನೆ ನೆರವೇರಿಸಿದ್ದು ವಿಶೇಷವಾಗಿತ್ತು.