ಮಡಿಕೇರಿ, ಜ. 25: ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊಳ್ತೋಡು-ಬೈಗೋಡುವಿನ ತೋಟವೊಂದರಲ್ಲಿ ಕಾರ್ಮಿಕ ಮಹಿಳೆ ಹಾಗೂ ಅಪ್ರಾಪ್ತೆಯ ಕೊಲೆಗೈದು; ಶವಗಳನ್ನು ಬಾವಿಗೆ ಎಸೆದಿದ್ದ ಆರೊಪಿ ಅಸ್ಸಾಂ ಮೂಲದ ಗಫೂರ್ ಆಲಿಯನ್ನು; ವೀರಾಜಪೇಟೆಯ ಪ್ರಧಾನ ಸಿವಿಲ್ ನ್ಯಾಯಾಲಯ ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.ಆರೋಪಿ ಎಸಗಿರುವ ದುಷ್ಕøತ್ಯ ಸಂಬಂಧ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದಿರುವ ಪೊಲೀಸರು; ಇಂದು ಆರೋಫಿ ಗಫೂರ್ ಆಲಿ ಕೊಲೆಗೈದಿದ್ದ ಸ್ಥಳ ಮಹಜರು ನಡೆಸಿದ ವೇಳೆ; ಆತ ಕಾಫಿ ಗಿಡದ ದೊಣ್ಣೆಯಿಂದ ಜೋಡಿ ಕೊಲೆ ಗೈದಿರುವುದು ದೃಢಪಟ್ಟಿದೆ.ಅಸ್ಸಾಂನ ದಲೇಗಾಂ ನಿವಾಸಿ ಅಲ್ತಫ್ ಖಾನ್ ಎಂಬವರ ಪತ್ನಿಯಾಗಿದ್ದ ಮುರ್ಷಿದಾ ಕತೂನ್ (40) ಎಂಬಾಕೆಯ ಬಳಿ ದುಡಿದ ಹಣವಿದ್ದು; ಅದನ್ನು ತನಗೆ ಕೊಡುವಂತೆ ಪೀಡಿಸಿದ್ದಾನೆ. ಆಕೆ ನಿರಾಕರಿಸಿದಾಗ ದೊಣ್ಣೆಯಿಂದ ಹೊಡೆದು ಅಮಾನುಷವಾಗಿ ಸಾಯಿಸಿದ್ದಾನೆ. ಅಲ್ಲಿಂದ ನೇರವಾಗಿ ತೋಟದ ಲೈನ್ ಮನೆಗೆ ತೆರಳಿ ಮೃತೆಯ ಮಗಳು ಹದಿನಾರರ ಹರೆಯದ ಅಪ್ರಾಪ್ತೆಗೆ ಥಳಿಸಿ, ತಾಯಿ ಹಣ ಇಟ್ಟಿರುವ ಸ್ಥಳ ತೋರಿಸುವಂತೆ ಹಿಂಸಿಸಿದ್ದಾಗಿ ಗೊತ್ತಾಗಿದೆ.

ಈ ದುರ್ದೈವಿ ಯುವತಿ ನಿರಾಕಸಿದ್ದಲ್ಲದೆ; ತನ್ನನ್ನು ಕೊಂದರೂ ‘ಅಮ್ಮ ಹಣ ಇರಿಸಿರುವ ಜಾಗ ತೋರಿಸುವುದಿಲ್ಲ’ ಎಂದು ಹಟ ಮಾಡಿದ್ದಾಗಿ ಆರೋಪಿ ತನಿಖೆ ಸಂದರ್ಭ ಬಾಯ್ಬಿಟ್ಟಿದ್ದಾನೆ. ಈ ಸಂದರ್ಭ ಮತ್ತಷ್ಟು ಕ್ರೋಧಗೊಂಡಿರುವ ಗಫೂರ್ ಆಲಿ ಆಕೆಯನ್ನು ಲೈನ್ ಮನೆಯಿಂದ ಎಳೆದೊಯ್ದು; ಮುರ್ಷಿದಾಳನ್ನು ಕೊಂದಿದ್ದ ಸ್ಥಳದಲ್ಲಿಯೇ; ತಾಯಿಯ ಶವದೆದುರು ಮಗಳನ್ನು ಬಡಿದು ಸಾಯಿಸಿ ಬಿಟ್ಟಿದ್ದಾನೆ. ಬಳಿಕ ಇಬ್ಬರ ಶವಗಳನ್ನು ಎಳೆದೊಯ್ದು ಬಾವಿಯೊಳಗೆ ಎಸೆದಿದ್ದಾನೆ. ಅಲ್ಲಿಂದ ಆರೋಪಿ ಮೂಡಿಗೆರೆಯಲ್ಲಿ ತನ್ನ ಸೋದರಿ ಹಾಗೂ ಇತರರು ನೆಲೆಸಿರುವ ಚಂದ್ರೇಗೌಡ ಎಂಬವರ ತೋಟದ ಮನೆಗೆ ತೆರಳಿ ಅವಿತ್ತಿದ್ದಾಗಿ ಗೊತ್ತಾಗಿದೆ.

ದುಷ್ಕøತ್ಯ ಎಸಗಿದ್ದ ತೋಟದ ಪಕ್ಕದಲ್ಲಿ ನೆಲೆಸಿರುವ ಮತ್ತೋರ್ವ ಕಾರ್ಮಿಕನ ಬಳಿ; ಆರೋಪಿ ಪರಾಗಿಯಾಗುವ ಮುನ್ನ ‘ತನ್ನ ಪತ್ನಿ ಹಾಗೂ ಮಗಳು ಕಾಣೆಯಾಗಿದ್ದು, ಹುಡುಕಿಕೊಂಡು ಬರುವೆ’ ಏನಾದರೂ ಸುಳಿವು (?) ಗೊತ್ತಾದರೆ ಕರೆ ಮಾಡು ಎಂದು ಹೇಳಿ ತನ್ನ ಮೊಬೈಲ್ ಸಂಖ್ಯೆಯನ್ನು ಆತನಿಗೆ ನೀಡಿದ್ದಾನೆ. ಈ ಸುಳಿವಿನ ಬೆನ್ನೇರಿದ ಪೊಲೀಸರು; ಕೊನೆಗೂ ಗಫೂರ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಪೊಲೀಸ್ ಅತಿಥಿಯಾಗಿರುವ ಆರೋಪಿಯ ಬಗ್ಗೆ ಹೆಚ್ಚಿನ ವಿಚಾರಣೆ ಮುಂದುವರೆದಿದೆ.