ಲೋಮಶ ಮಹರ್ಷಿಗಳು ವನವಾಸದಲ್ಲಿದ್ದ ಪಾಂಡವರಿಗೆ ಮಹಾನ್ ಋಷಿ ಅಗಸ್ತ್ಯರು ಪತ್ನಿ ಲೊಪಾಮುದ್ರೆಯೊಡಗೂಡಿ ಭಾರತದಾದ್ಯಂತ ಸಂಚರಿಸುವಾಗ ಕೈಗೊಂಡ ಅದ್ಭುತ ಧರ್ಮ ಸಂಸ್ಫಾಪನಾ ಕಾರ್ಯಗಳ ಕುರಿತು ದೃಗ್ಗೋಚರವಾಗುವಂತೆ ತಿಳಿಸುತ್ತಾರೆ. ದುಷ್ಟ ಕಾಲೇಯರು ಮಹರ್ಷಿಗಳ, ತಪೋನಿರತರ ಪ್ರಾಣ ಹರಣ ಮಾಡುತ್ತ, ಆಶ್ರಮಗಳಿಗೆ ನುಗ್ಗಿ ಅವರನ್ನು ಭಕ್ಷಣೆ ಮಾಡುತ್ತ ಎದುರಾಳಿಗಳೆ ಇಲ್ಲದೆ ಮೆರೆದಾಡಿದರು. ಈ ರೀತಿಯಲ್ಲಿ ಆ ದಾನವರು ಅನುದಿನವೂ ಆಶ್ರಮಗಳಿಗೆ ನುಗ್ಗಿ ತಪಸ್ವಿಗಳನ್ನು, ಸಾತ್ವಿಕರನ್ನು ವಧೆ ಮಾಡುತ್ತಿದ್ದರೂ ಸಹ “ರಾತ್ರಿ ವೇಳೆಯಲ್ಲಿ ಯಾರು ಬರುತ್ತಾರೆ ? ಹೇಗೆ ಬರುತ್ತಾರೆ ? ಹೇಗೆ ಧ್ವಂಸ ಮಾಡುತ್ತಾರೆ? ಹೀಗೆ ಮಾಡಲು ಅವರ ಆಶಯವೇನು? ಇತ್ಯಾದಿಗಳೊಂದೂ ಮಾನವರಿಗೆ ಗೋಚರವಾಗಲೇ ಇಲ್ಲ. ಪ್ರಾತ: ಕಾಲವಾಯಿತೆಂದರೆ, ಪವಿತ್ರವಾದ ಆಶ್ರಮ ಪ್ರದೇಶಗಳಲ್ಲಿ ತಪಸ್ಸಿನಿಂದ ಕೃಶವಾದ ತಪಸ್ವಿಗಳ ಮತ್ತು ಬ್ರಾಹ್ಮಣರ ಶರೀರಗಳು ನೆಲದ ಮೇಲೆ ಪ್ರಾಣ ರಹಿತವಾಗಿ ಬಿದ್ದಿರುತ್ತಿದ್ದುದನ್ನು ಜನರು ಕಾಣುತ್ತಿದ್ದರು. ಹೀಗೆ ಬಿದ್ದಿರುತ್ತಿದ್ದ ಕೆಲವರ ಶರೀರಗಳಲ್ಲಿ ರಕ್ತವೇ ಇರುತ್ತಿರಲಿಲ್ಲ. ಮತ್ತೆ ಕೆಲವರ ಶರೀರ ಗಳಲ್ಲಿ ಮಾಂಸವೇ ಇರುತ್ತಿರಲಿಲ್ಲ. ಕೆಲವು ಶರೀರಗಳಲ್ಲಿ ಸ್ನಾಯುವೇ ಇರುತ್ತಿರಲಿಲ್ಲ. ಅವಯವಗಳೆಲ್ಲವೂ ಪ್ರತ್ಯೇಕ-ಪ್ರತ್ಯೇಕವಾಗಿ ಬಿದ್ದಿರುತ್ತಿದ್ದವು. ಅವರ ಅಸ್ಥಿಪಂಜರಗಳು ಶಂಖಗಳ ರಾಶಿಯಂತೆ ಆಶ್ರಮ ಸಮೀಪದಲ್ಲಿ ರಾಶಿ ರಾಶಿಯಾಗಿ ಬಿದ್ದಿರುತ್ತಿದ್ದವು. ಆಶ್ರಮದೊಳಗಿರುತ್ತಿದ್ದ ಪುಣ್ಯಾಹ ಕಲಶಗಳೂ, ಹೋಮ ಸಾಧನಗಳಾದ ಸ್ರುಕ್-ಸ್ರವಗಳು ಚೂರು ಚೂರಾಗಿ ಬಿದ್ದಿರುತ್ತಿದ್ದವು. ಅಗ್ನಿ ಹೋತ್ರಾದಿಯಿದ್ದ ಭಾಂಡಗಳೂ ತುಂಡು ತುಂಡಾಗಿ ಅಗ್ನಿಯೊಡನೆ ಆಶ್ರಮದ ಸುತ್ತಲೂ ಬಿದ್ದಿರುತ್ತಿದ್ದವು. ಕಾಲೇಯರ ಈ ಕ್ರೌರ್ಯ ಕಾರ್ಯದಿಂದಾಗಿ ಪ್ರಪಂಚವೆ ನಡುಗಿತು. ಆಶ್ರಮಗಳಲ್ಲಿ ನಡೆಯುತ್ತಿದ್ದ ಅಧ್ಯಯನ ಮತ್ತು ಅಧ್ಯಾಪನಗಳು ಪರಿಸಮಾಪ್ತಿ ಗೊಂಡವು. ಆಶ್ರಮಗಳೆಲ್ಲವೂ ತೇಜೋಹೀನವಾಗಿ ಪಾಳು ಬಿದ್ದು ಹೋಗಿರುವಂತೆ ಕಾಣುತ್ತಿದ್ದವು.

ಯುಧಿಷ್ಟಿರ, ಆಶ್ರಮಗಳಲ್ಲಿದ್ದ ಬ್ರಾಹ್ಮಣರೂ, ತಪಸ್ವಿಗಳೂ ಈ ರೀತಿಯಲ್ಲಿ ಕಾಲೇಯರ ಕ್ರೌರ್ಯಕ್ಕೆ ಸಿಲುಕಿ ನಿಧನ ಹೊಂದುತ್ತಿದ್ದರು. ಅಳಿದುಳಿದ ಒಬ್ಬಿಬ್ಬ ಬ್ರಾಹ್ಮಣರು ಮತ್ತು ತಪಸ್ವಿಗಳು ತಮ್ಮ ಪ್ರಾಣವುಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದರು. ಕೆಲವರು ಪರ್ವತದ ಗುಹೆಗಳಲ್ಲಿ ಹೋಗಿ ಅಡಗಿಕೊಂಡರು. ಮತ್ತೆ ಕೆಲವರು ನದಿಗಳ ದಂಡೆಗಳಲ್ಲಿದ್ದ ಪೊದೆಗಳಲ್ಲಿ ಹೋಗಿ ಅವಿತುಕೊಂಡರು. ಮತ್ತೆ ಕೆಲವರು ಭಯಭೀüತಿಯಿಂದಲೇ ಪ್ರಾಣ ತೊರೆದರು. ಧನುರ್ಧಾರಿ ಗಳಾಗಿದ್ದ ಧೈರ್ಯಶಾಲಿಗಳಾಗಿದ್ದ ಕೆಲವರು ಆಶ್ರಮವನ್ನು ವಿನಾಶ ಮಾಡುತ್ತಿರುವವರು ಯಾರು ಎಂದು ತಿಳಿಯುವ ಪ್ರಯತ್ನ ನಡೆಸು ತ್ತಿದ್ದರು, ಕಾಲೇಯರು ರಾತ್ರಿಯಿಡೀ ವಿನಾಶ ಕಾರ್ಯ ನಡೆಸಿ ಬೆಳಗಿನ ಜಾವ ಎಲ್ಲಿಗೆ ತೆರಳುತ್ತಾರೆ ಎಂದು ಕಾದು ಕುಳಿತು ಈ ವೀರರು ಕಾಲೇಯರನ್ನು ಹಿಂಬಾಲಿಸುತ್ತಿ ದ್ದರು. ಆದರೆ. ಕಾಲೇಯರು ಸಮುದ್ರ ತಟದವರೆಗೆ ತೆರಳುವದು ಮಾತ್ರ ಗೊತ್ತಾಗುತ್ತಿತ್ತು. ಆ ಬಳಿಕ ಸಮುದ್ರ ಪ್ರವೇಶ ಮಾಡಿ ತಳ ಭಾಗ ಸೇರುತ್ತಿದ್ದುದರಿಂದ ಅವರ ನೈಜ ಆವಾಸ ಸ್ಥಾನವನ್ನು ಮಾನವರಿಗೆ ಕಂಡು ಹಿಡಿಯಲು ಅಸಾಧ್ಯವಾಯಿತು. ದೈತ್ಯರು ರಾತ್ರಿಯ ವೇಳೆ ಸಮುದ್ರ ದಿಂದ ಹೊರ ಬಂದು ಆಶ್ರಮ ಗಳನ್ನು ಧ್ವಂಸ ಮಾಡಿ ಬೆಳಗಾಗು ವದರ ಒಳಗಾಗಿಯೇ ಸಮುದ್ರ ವನ್ನು ಸೇರಿಕೊಳ್ಳುತ್ತಿದ್ದರು ಎಂಬದನ್ನಷ್ಟೇ ಈ ಧನುರ್ಧಾರೀ ವೀರರಿಗೆ ತಿಳಿಯಲು ಸಾಧ್ಯ ವಾಗಿತ್ತು. ಅಸುರರನ್ನು ಧ್ವಂಸ ಮಾಡಲು ಪಣತೊಟ್ಟ ಈ ವೀರರು ರಕ್ಕಸರ ಆವಾಸ ಸ್ಥಾನದ ಬಳಿಯೇ ಸುಳಿಯಲು ಕೂಡ ಸಾಧ್ಯವಾಗದೆ ನಿರಾಶೆ ಮೂಡಿಸಿತ್ತು. ಯುಧಿಷ್ಠಿರ, ಈ ರೀತಿಯಲ್ಲಿ ಪ್ರಪಂಚವೆಲ್ಲವೂ ನಾಶ ಹೊಂದಲಾರಂಭಿಸಿತು. ಯಜ್ಞ-ಯಾಗಾದಿಗಳು ಸ್ಥಗಿತಗೊಂಡವು. ಯಜ್ಞಗಳ ಮೂಲಕ ಹವಿಸ್ಸನ್ನು ನಿತ್ಯ ಸ್ವೀಕರಿಸುವ ದೇವತೆಗಳೂ ಯಜ್ಞಗಳಿಲ್ಲದೆ ಅಗ್ನಿಯ ಮೂಲಕ ಋಷಿಗಳಿಂದ ಹವಿಸ್ಸು ಕೊಡುವದೂ ನಿಂತು ಹೋದಾಗ ಅತಿ ದು:ಖಿತರಾದರು. ಒಡನೆಯೇ ದೇವತೆಗಳೆಲ್ಲ ಇಂದ್ರನ ಬಳಿ ತೆರಳಿ ಈ ವಿಪತ್ತಿನ ಕುರಿತು ತೀವ್ರ ಸಮಾಲೋಚನೆ ನಡೆಸಿದರು. ಆದರೆ, ಈ ವಿಪ್ಪತ್ತಿನಿಂದ ಪಾರಾಗುವ ಪರಿಹಾರೋಪಾಯ ಮಾತ್ರ ಯಾರಿಗೂ ಹೊಳೆಯಲೇ ಇಲ್ಲ. ಆ ಸಂದರ್ಭ ದೇವೇಂದ್ರನ ನೇತೃತ್ವದಲ್ಲಿ ದೇವತೆಗಳೆಲ್ಲ ಲೋಕದ ಸ್ಥ್ಥಿತಿಕಾರಕನಾದ ಮಹಾವಿಷ್ಣುವಿನ ಬಳಿ ತೆರಳಿ ಪ್ರಾರ್ಥಿಸಿಕೊಂಡರು. “ಪ್ರಭುವೇ, ಮೂರು ಲೋಕಗಳಿಗೂ ನೀನೇ ಕಾರಣನಾಗಿದ್ದೀಯ. ಈ ಹಿಂದೆ ವರಾಹ ರೂಪ ಧರಿಸಿ ಭೂಮಾತೆಯನ್ನು ನೀನು ಸಂರಕ್ಷಿಸಿದ್ದೆ. ನೃಸಿಂಹಾವತಾರಿಯಾಗಿ ಭಕ್ತ ಪ್ರಹ್ಲಾದನನ್ನು ಕಾಪಾಡಿದ್ದೀಯ, ವಾಮನಾವತಾರದ ಮೂಲಕ ಬಲಿಯನ್ನು ತ್ರೈಲೋಕಾಧಿಪತ್ಯದಿಂದ ಸ್ಥಾನ ಪಲ್ಲಟಗೊಳಿಸಿದ್ದೀಯ, ಕ್ರೂರನಾಗಿದ್ದ ಜಂಭಾಸುರನನ್ನು ಮರ್ದಿಸಿದ್ದೀಯ, ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾದ ನಿನಗೆ ಶರಣಾಗುತ್ತಿದ್ದೇವೆ” ಎನ್ನುತ್ತ ದೇವತೆಗಳು ವಿನಮ್ರ ಪೂರ್ವಕವಾಗಿ ಕೇಳಿಕೊಳ್ಳುತ್ತಾರೆ “ತಸ್ಮಾತ್ತ್ವಾಂ ದೇವದೇವೇಶ ಲೋಕಾರ್ಥಂ ಜ್ಞಾಪಯಾಮಹೇ, ರಕ್ಷ ಲೋಕಾಂಕ್ಚ ದೇವಾಂಶ್ಚ ಶಕ್ರಂಚ ಮಹತೋ ಭಯಾತ್” ಅಂದರೆ, “ ಮಹಾನುಭಾವ, ನಮ್ಮ ಪ್ರಾರ್ಥನೆ ಯನ್ನು ಮನ್ನಿಸಿ ಭೂಲೋಕವನ್ನೂ, ದೇವತೆಗಳನ್ನೂ ಮತ್ತು ನಮ್ಮ ಅಧಿಪತಿಯಾದ ದೇವೇಂದ್ರನನ್ನೂ ಸಹ ಮಹಾಭಯದಿಂದ ಮುಕ್ತ ರನ್ನಾಗಿ ಮಾಡುವವನಾಗು, ನಮ್ಮನ್ನು ದಾನವರಿಂದ ಸಂರಕ್ಷಿಸು” ಮಹಾತ್ಮ, ಇತ್ತೀಚೆಗೆ ಭೂಲೋಕ ದಲ್ಲಿ ಮಾನವರು ಭಯದಿಂದ ಉದ್ವಿಗ್ನರಾಗಿದ್ದಾರೆ. ಈ ಭಯವು ಯಾರಿಂದ ಉಂಟಾಗುತ್ತಿದೆ ? ರಾತ್ರಿ ವೇಳೆಯಲ್ಲಿ ಸಾತ್ವಿಕರು, ಋಷಿ ಮುನಿಗಳು ಯಾರಿಂದ ವಧಿಸಲ್ಪ ಡುತ್ತಿದ್ದಾರೆ ಎಂಬದೇ ಪತ್ತೆಯಾಗು ತಿಲ್ಲ. ‘ತ್ವತ್ಪ್ರಸಾದಾನ್ಮಹಾಬಾಹೋ ಲೋಕಾ: ಸರ್ವೇ ಜಗತ್ಪತೇ, ವಿನಾಶಂ ನಧಿಗಚ್ಛೇಯುಸ್ತ್ವಯಾ ವೈ ಪರಿರಕ್ಷಿತಾ:’ ಅಂದರೆ, “ಮಹಾಬಾಹೋ, ನಿನ್ನ ಅನುಗ್ರಹದಿಂದಾಗಿ ನಿನ್ನಿಂದ ಸಂರಕ್ಷಿತ ವಾಗಿರುವ ಲೋಕಗಳು ವಿನಾಶವನ್ನು ಹೊಂದದಿರಲಿ. ಸುಪ್ರೀತನಾಗಿ ಅನುಗ್ರಹಿಸು, ದೇವೇಶ” ಎಂದು ದೇವತೆಗಳು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿದರು. ಇದರಿಂದ ಸುಪ್ರೀತನಾದ ಶ್ರೀಮನ್ನಾರಾಯಣನು “ದೇವತೆಗಳಿರಾ, ಪ್ರಪಂಚದ ಪ್ರಜೆಗಳು ಕ್ಷಯಿಸುತ್ತಿರುವದಕ್ಕೆ ಕಾರಣವನ್ನು ನಾನು ತಿಳಿದಿರುತ್ತೇನೆ. ಮಹಾಭಯಂಕರರಾದ ಕಾಲೇಯರೆಂಬ ಹೆಸರಿನ ರಾಕ್ಷಸ ಗಣ ವೊಂದಿದೆ. ಈ ಕಾಲೇಯ ದಾನವರು ವೃತ್ರಾಸುರನನ್ನು ತಮ್ಮ ನಾಯಕನನ್ನಾಗಿ ಮಾಡಿಕೊಂಡು ಮೂರು ಲೋಕಗಳನ್ನೂ ವಿಧ್ವಂಸ ಮಾಡುತ್ತಿದ್ದರು. ದೇವೇಂದ್ರನಿಂದ ವೃತ್ರ್ರಾಸುರನು ಹತನಾದನೆಂದು ತಿಳಿದೊಡನೆಯೇ ಈ ಕಾಲೇಯ ದಾನವರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವ ಸಲುವಾಗಿ ವರುಣಾಲಯವಾದ ಸಮುದ್ರದ ತಳ ಭಾಗದಲ್ಲಿ ಸೇರಿಕೊಂಡರು. ಘೋರವಾದ ಮೊಸಳೆಗಳಿಂದಲೂ, ತಿಮಿಂಗಿಲಗಳಿಂದಲೂ ನಿಬಿಡವಾದ ಸಮುದ್ರದಲ್ಲಿ ಅಡಗಿಕೊಂಡಿ ರುವ ಈ ಕಾಲೇಯರು ರಾತ್ರಿಯ ವೇಳೆಯಲ್ಲಿ ಸಮುದ್ರದಿಂದ ಹೊರಗೆ ಬಂದು ಭೂಮಿಯಲ್ಲಿ ಅಲೆದಾಡುತ್ತಾ ಕಣ್ಣಿಗೆ ಬಿದ್ದ ಆಶ್ರಮ ಗಳೆಲ್ಲವನ್ನೂ ಧ್ವಂಸ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ಮೂರು ಲೋಕಗಳನ್ನೂ ವಿನಾಶ ಮಾಡಬೇಕೆಂಬುದೇ ಅವರ ಪರಮಧ್ಯೇಯ ವಾಗಿದೆ. ಅವರು ಸಮುದ್ರದ ತಳಭಾಗದಲ್ಲಿ ವಾಸ ಮಾಡುತ್ತಿರುವದ ರಿಂದ ಅವರನ್ನು ಸಂಹಾರ ಮಾಡುವ ಸಾಧ್ಯತೆಯಿಲ್ಲ. ಆದುದರಿಂದ ನೀವು ಸಮುದ್ರವನ್ನೇ ಶೋಷಿಸಿಬಿಡಲು ಸಮರ್ಥ ನಾದವನೊಬ್ಬನನ್ನು ಈ ಕೂಡಲೇ ಹುಡುಕಬೇಕು. ಮಹರ್ಷಿಗಳಾದ ಅಗಸ್ತ್ಯ ರೊಬ್ಬರನ್ನುಳಿದು ಸಮುದ್ರವನ್ನು ಶೋಷಿಸಲು ಸಮರ್ಥ ರಾದವರು ಈ ಮೂರು ಲೋಕಗಳಲ್ಲಿಯೇ ಬೇರಾರೂ ಇರುವದಿಲ್ಲ, ಸಮುದ್ರವನ್ನು ಶೋಷಿಸದ ಹೊರತು ಆ ಕಾಲೇಯರನ್ನು ಸಂಹಾರ ಮಾಡಲು ಅಸಾಧ್ಯ ಎಂದು ಶ್ರೀಮನ್ನಾರಾಯಣನು ನಿರ್ದೇಶನ ವಿತ್ತನು. ಬಳಿಕ ಕೂಡಲೇ ದೇವತೆಗಳು ಬ್ರಹ್ಮನ ಬಳಿ ತೆರಳಿ ಅವನ ಅನುಮತಿ ಪಡೆದು ಅಗಸ್ತ್ಯಾಶ್ರಮಕ್ಕೆ ತೆರಳಿದರು. ಅಲ್ಲಿ ಮಹಾ ತೇಜಸ್ವಿಗಳಾದ ಅಗಸ್ತ್ಯರನ್ನು ಸುತ್ತುವರಿದು ಅನೇಕಾನೇಕ ಮಹರ್ಷಿ ಗಳು ಕುಳಿತಿದ್ದರು.ಇಂದ್ರಾದಿ ದೇವತೆಗಳು ಅಗಸ್ತ್ಯರನ್ನು ಹೀಗೆ ಪ್ರಾರ್ಥಿಸಿದರು: “ತಮಸಾ ಚಾವೃತೇ ಲೋಕೇ ಮೃತ್ಯುಣಾಭ್ಯರ್ದಿತಾ: ಪ್ರಜಾ:, ತ್ವಾಮೇವ ನಾಥಮಾಸಾದ್ಯ ನಿರ್ವೃತ್ತಿಂ ಪರಮಾಂ ಗತಾ:” ಅಂದರೆ, ಲೋಕವು ತಮಸ್ಸಿನಿಂದ ಕೂಡಿದ್ದಾಗ, ಪ್ರಜೆಗಳು ಮೃತ್ಯು ವಿನಿಂದ ಪೀಡಿತರಾಗಿದ್ದಾಗ ಮಹಾತ್ಮರಾದ ನಿಮ್ಮನ್ನು ಶರಣ್ಯರನ್ನಾಗಿ ಪಡೆದು ಪ್ರಜೆಗಳು ಮೃತ್ಯುವಿನಿಂದ ಪಾರಾಗಿದ್ದಾರೆ. ಆದುದದರಿಂದ ಚರಾಚರ ಪ್ರಾಣಿಗಳಿಗೂ ನೀವೊಬ್ಬರೇ ನಾಥರು. ಮಹರ್ಷೆ, ಭಯದಿಂದ ವಿಹ್ವಲರಾಗಿ ರುವ ನಮಗೂ ಸಹ ನೀವೇ ದಿಕ್ಕು.

(ಮುಂದಿನ ವಾರ : ಅಗಸ್ತ್ಯರಿಂದ ಸಮುದ್ರ ಆಪೋಶನ)