ಸೋಮವಾರಪೇಟೆ, ಜ.25: ಸಮೀಪದ ಕೆಂಚಮ್ಮನಬಾಣೆ ಗ್ರಾಮದ ಭಾರತ್ ಮಾತಾ ಸೇವಾ ಸಂಘದ ಆಶ್ರಯದಲ್ಲಿ ತಾ. 26ರಂದು (ಇಂದು) ಕೆಂಚಮ್ಮನಬಾಣೆಯ ಭಾರತ್ ಮೈದಾನದಲ್ಲಿ, ಗಣರಾಜ್ಯೋತ್ಸವ ಅಂಗವಾಗಿ ರಿಪಬ್ಲಿಕ್ ಕಪ್-ಮುಕ್ತ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಜೆ. ಸುನಿಲ್ ತಿಳಿಸಿದ್ದಾರೆ.
ಬೆಳಗ್ಗೆ 9 ಗಂಟೆಗೆ ಮಾಜೀ ಸೈನಿಕ ತಿಮ್ಮಪ್ಪ ನಾಯಕ್ ಅವರು ಧ್ವಜಾರೋಹಣ ನೆರವೇರಿಸಲಿದ್ದು, ಪ್ರವೀಣ್ ಫ್ರಾನ್ಸಿಸ್ ಮತ್ತು ರಾಘವ ಅವರುಗಳು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಸಂಘದ ಸ್ಥಾಪಕಾಧ್ಯಕ್ಷ ಬಿ.ಎನ್. ಚಂದ್ರಶೇಖರ್, ಗ್ರಾ.ಪಂ. ಮಾಜೀ ಅಧ್ಯಕ್ಷ ಕೆ.ಕೆ. ಬಸವರಾಜ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಸಂಜೆ 6.30ಕ್ಕೆ ಕ್ರೀಡಾಕೂಟದ ಸಮಾರೋಪ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ನೂತನ ಸಮುದಾಯ ಭವನವನ್ನು ಉದ್ಘಾಟಿಸಲಿದ್ದಾರೆ.
ಸಂಸದ ಪ್ರತಾಪ್ಸಿಂಹ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಬೇಳೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎ. ಯೋಗೇಶ್ ಅವರನ್ನು ಸನ್ಮಾನಿಸಲಾಗುವದು. ನಂತರ ಅಶೋಕ್ ಮತ್ತು ತಂಡದಿಂದ ನೃತ್ಯ, ಕೆ.ಎಂ.ರವಿ, ಜನಾರ್ಧನ್, ಕವಿತಾ ಪೀಟರ್ ಅವರುಗಳಿಂದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಸುನಿಲ್ ತಿಳಿಸಿದ್ದಾರೆ.