ಸೋಮವಾರಪೇಟೆ, ತಾ.24: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾ. 26 ರಂದು 71ನೇ ಗಣ ರಾಜ್ಯೋತ್ಸವ ಸಮಾರಂಭ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 9.30ಕ್ಕೆ ತಾಲೂಕು ದಂಡಾಧಿಕಾರಿಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಆರ್. ಗೋವಿಂದರಾಜು ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಜರ್ಮನಿಯ ಕಾಸೆಲ್ ವಿಶ್ವವಿದ್ಯಾ ನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಗೆಜ್ಜೆಹಣ ಕೋಡು ಗ್ರಾಮದ ಡಾ.ಸುಪ್ರಿಯಾ ದಯಾನಂದ, ಕಾರೆಕೊಪ್ಪ ಗ್ರಾಮದ ಮಾಜಿ ಸೈನಿಕರಾದ ಹವಾಲ್ದಾರ್ ಸಿ.ಎಸ್. ಹರಿಶ್ಚಂದ್ರ ಹಾಗೂ ಗರ್ವಾಲೆ ಮತ್ತು ಸುಂಟಿ ಕೊಪ್ಪದ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಎ. ಸತ್ತಾರ್‍ಖಾನ್ ಅವರುಗಳನ್ನು ಸನ್ಮಾನಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.