ಮಡಿಕೇರಿ, ಜ. 23: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ವತಿಯಿಂದ ಬೆಂಗಳೂರಿನ ಹೆಸರಘಟ್ಟಕೆರೆಯಲ್ಲಿರುವ ಐಐಎಚ್‍ಆರ್ ಆವರಣದಲ್ಲಿ ಫೆಬ್ರವರಿ 5 ರಿಂದ 8 ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳ ನಡೆಯಲಿದೆ.

ಮೇಳದಲ್ಲಿ ರಾಷ್ಟ್ರದ ಎಲ್ಲಾ ರಾಜ್ಯಗಳ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಇತರ ಇಲಾಖೆಗಳು, ಸಂಶೋಧಾನ ಸಂಸ್ಥೆಗಳು, ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳು, ಕೃಷಿ ಪರಿಕರ, ರಸಗೊಬ್ಬರ ಹಾಗೂ ಸಸ್ಯ ಸಂರಕ್ಷಣಾ ವಸ್ತುಗಳ ತಯಾರಕರು, ಬಿತ್ತನೆ ಬೀಜಗಳು ಮತ್ತು ನರ್ಸರಿ ಗಿಡಗಳ ವಿತರಕರು, ನವೋದ್ಯಮಗಳು, ಬಿಪಿಡಿ ಲೈಸನ್ಸ್‍ದಾರರು, ಸರ್ಕಾರೇತರ ಸಂಘ-ಸಂಸ್ಥೆಗಳು, ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಸಂಘ, ರೈತ ಉತ್ಪಾದಕರ ಸಂಸ್ಥೆಗಳು ರೈತರು ಭಾಗವಹಿಸಬಹುದು ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

ರಾಷ್ಟ್ರೀಯ ತೋಟಗಾರಿಕೆ ಮೇಳ-2020ರ ವಿಶೇಷತೆಗಳು: ಹಣ್ಣು, ತರಕಾರಿ, ಅಲಂಕಾರಿಕ, ಔಷಧೀಯ ಮತ್ತು ಸೌಗಂಧಿಕ ಬೆಳೆ, ಅಣಬೆ, ಪ್ಲಾಂಟೇಷನ್ ಮತ್ತು ಸಾಂಬಾರು ಬೆಳೆಗಳ ಉತ್ಪಾದನೆ ಮತ್ತು ಸಸ್ಯ ಸಂರಕ್ಷಣಾ ತಂತ್ರಜ್ಞಾನಗಳು. ನರ್ಸರಿ ಮತ್ತು ಸಸ್ಯಪರಿಕರಗಳನ್ನು ಒದಗಿಸುವ ಮಳಿಗೆಗಳು, ಸಂರಕ್ಷಿತ ಬೇಸಾಯ ಪದ್ಧತಿಗಳು, ತೋಟಗಾರಿಕೆ ಆಧಾರಿತ ಮಿಶ್ರ ಬೇಸಾಯ ಪದ್ಧತಿಗಳು, ಕೊಯ್ಲೋತ್ತರ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ, ತೋಟಗಾರಿಕೆಯ ಯಂತ್ರೋಪಕರಣಗಳು ಹಾಗೂ ನಗರ ತೋಟಗಾರಿಕೆ-ಕಾರ್ಯಾಗಾರ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಭಾ.ಕೃ.ಅನು.ಪ.-ಭಾ.ತೋ.ಸಂ. ಸಂಸ್ಥೆ, ಹೆಸರಘಟ್ಟಕೆರೆ ಅಂಚೆ, ಬೆಂಗಳೂರು ದೂ. 080-23086100 ನ್ನು ಸಂಪರ್ಕಿಸಬಹುದು.