ಭಾಗಮಂಡಲ, ಜ. 23: ಇಲ್ಲಿಗೆ ಸಮೀಪದ ಚೇರಂಗಾಲ ಗ್ರಾಮದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಲು ಸಮತಟ್ಟು ಮಾಡಲಾದ ಪ್ರದೇಶವನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತನಿಖಾ ಸಮಿತಿ ಇಂದು ಭೇಟಿ ಮಾಡಿ ಪರಿಶೀಲನೆ ನಡೆಸಿದೆ.ಮಡಿಕೇರಿಯ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ ಆಗಿದ್ದ ಸತೀಶ್ ಎಂಬವರು ತಮಗೆ ಮಂಜೂರಾದ ಜಾಗ ಸೇರಿದಂತೆ ಸರಕಾರಿ ಜಾಗವನ್ನು ಕಬಳಿಸಿಕೊಂಡು ರೆಸಾರ್ಟ್ ನಿರ್ಮಿಸಲು ಎಕರೆಗಟ್ಟಲೆ ಜಾಗವನ್ನು ಸಮತಟ್ಟು ಮಾಡಿರುವ ಬಗ್ಗೆ ‘ಶಕ್ತಿ’ ತಾ. 13.8.2019 ರಂದು ಬೆಳಕು ಚೆಲ್ಲಿತ್ತು. ಈ ಬಗ್ಗೆ ವಿಚಾರಣೆ ನಡೆದು ಸತೀಶ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿತ್ತು. ಇದೀಗ ಜಾಗದ ಸರ್ವೆ ನಂಬರ್‍ನಲ್ಲಿ ಗೊಂದಲ ಇರುವ ಬಗ್ಗೆ ; ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕೆಂದು ಕಾವೇರಿ ಜನ್ಮಭೂಮಿ ಟ್ರಸ್ಟ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲಯ ಈ ಸಂಬಂಧ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಸಮಿತಿ ರಚನೆ ಮಾಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು.
(ಮೊದಲ ಪುಟದಿಂದ) ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂಬಂಧ ವಿವಿಧ ಇಲಾಖೆಗಳ ವರದಿಯನ್ನು ಸಂಗ್ರಹಿಸಿ, ಅರಣ್ಯ ಇಲಾಖೆ ಸಮಿತಿಯ ವರದಿಯನ್ನು ಒಳಗೊಂಡು ನ್ಯಾಯಾಲಯಕ್ಕೆ ಸಲ್ಲಿಸಲಿರುವುದಾಗಿ ಸಮಿತಿ ಸದಸ್ಯರಲ್ಲೋರ್ವರಾದ ಉಪಸಂರಕ್ಷಣಾಧಿಕಾರಿ ಪ್ರಭಾಕರನ್ ‘ಶಕ್ತಿ’ಗೆ ತಿಳಿಸಿದ್ದಾರೆ.