ಮಡಿಕೇರಿ, ಜ. 23: ಒಬಿಸಿ ಅಥವಾ ಇತರ ಹಿಂದುಳಿದ ವರ್ಗ ಎನ್ನುವುದು ಭಾರತ ಸರ್ಕಾರವು ಶೈಕ್ಷಣಿಕ ಅಥವಾ ಸಾಮಾಜಿಕವಾಗಿ ಹಿಂದುಳಿದ ಜಾತಿಗಳನ್ನು ವರ್ಗೀಕರಿಸಲು ಬಳಸುವ ಸಾಮೂಹಿಕ ಪದವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್‍ಸಿ ಮತ್ತು ಎಸ್‍ಟಿ)ಗಳೊಂದಿಗೆ ಭಾರತದ ಜನಸಂಖ್ಯೆಯ ಹಲವಾರು ಅಧಿಕೃತ ವರ್ಗೀಕರಣಗಳಲ್ಲಿ ಇದು ಒಂದು. ಭಾರತೀಯ ಸಂವಿಧಾನದಲ್ಲಿ, ಒಬಿಸಿಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಎಂದು ವಿವರಿಸಲಾಗಿದೆ, ಮತ್ತು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವನ್ನು ಆದೇಶಿಸಲಾಗಿದೆ. ಒಬಿಸಿಗಳು ಸಾರ್ವಜನಿಕ ವಲಯದ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಶೇ. 27 ಮೀಸಲಾತಿಗೆ ಅರ್ಹರಾಗಿದ್ದಾರೆ.

ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಇತರ ಹಿಂದುಳಿದ ವರ್ಗಗಳ ಇಲಾಖೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅನೇಕ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 19 ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಮಾಸಿಕ ರೂ. 1,500ರ ದರದ ವೆಚ್ಚದಲ್ಲಿ ಊಟ ನೀಡುವುದರೊಂದಿಗೆ, ವಸತಿ ಸೌಕರ್ಯದ ಜೊತೆಯಲ್ಲಿ ಸಮವಸ್ತ್ರ, ಪಠ್ಯಪುಸ್ತಕ, ನೋಟ್ ಪುಸ್ತಕ, ವೈದ್ಯಕೀಯ ಉಚಿತ ಸೌಲಭ್ಯ, ಹಾಸಿಗೆ ಹೊದಿಕೆಗಳು, ಕ್ರೀಡಾ ಸಾಮಗ್ರಿಗಳು ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಇಲಾಖಾ ವತಿಯಿಂದ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 19 ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳು ಕಾರ್ಯಾಚರಣೆಯಲ್ಲಿದ್ದು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಮಾಸಿಕ ರೂ. 1,600 ರಂತೆ ಉಚಿತ ಊಟ ಮತ್ತು ವಸತಿ ಸೌಲಭ್ಯಗಳನ್ನು ಇಲಾಖಾ ವತಿಯಿಂದ ನೀಡಲಾಗುತ್ತಿದೆ.

2019-20ನೇ ಸಾಲಿನಲ್ಲಿ ಒಟ್ಟು ರೂ. 809.50 ಲಕ್ಷಗಳ ಅನುದಾನ ಒದಗಿಸಲಾಗಿದ್ದು, 2019ನೇ ಡಿಸೆಂಬರ್ ಅಂತ್ಯದವರೆಗೆ ರೂ.372.20 ಲಕ್ಷಗಳು ಖರ್ಚಾಗಿದೆ. ಒಟ್ಟು 1721 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಹೊಲಿಗೆ ತರಬೇತಿ ಕೇಂದ್ರಗಳ ಪ್ರಾರಂಭ ಮತ್ತು ನಿರ್ವಹಣೆ: ಮಡಿಕೇರಿ ತಾಲೂಕಿನ ಮೂರ್ನಾಡು ಮತ್ತು ಮಕ್ಕಂದೂರಿನಲ್ಲಿ 2 ಮಹಿಳಾ ಹೊಲಿಗೆ ತರಬೇತಿ ಕೇಂದ್ರಗಳಿದ್ದು, ಪ್ರತೀ ಕೇಂದ್ರಗಳಲ್ಲಿ ತಲಾ 20 ಮಹಿಳಾ ಅಭ್ಯರ್ಥಿಗಳಿಗೆ ಹೊಲಿಗೆ ತರಬೇತಿ ನೀಡಲಾಗುತ್ತಿದೆ. ವರ್ಷದ ಕೊನೆಯಲ್ಲಿ ವಾರ್ಷಿಕ ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಉಚಿತವಾಗಿ ಹೊಲಿಗೆ ಯಂತ್ರ ಹಾಗೂ ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ರೂ. 300 ರಂತೆ ಶಿಷ್ಯವೇತನ ನೀಡಲಾಗುತ್ತಿದೆ. ಈ ಹೊಲಿಗೆ ತರಬೇತಿ ಕೇಂದ್ರಗಳಿಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಕನಿಷ್ಟ 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 2019-20ನೇ ಸಾಲಿನಲ್ಲಿ ಒಟ್ಟು ರೂ.11.34 ಲಕ್ಷಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದ್ದು, 2019ನೇ ಡಿಸೆಂಬರ್ ಅಂತ್ಯದವರೆಗೆ ಒಟ್ಟು ರೂ.2 ಲಕ್ಷ ಖರ್ಚಾಗಿರುತ್ತದೆ. ಒಟ್ಟು 38 ಅಭ್ಯರ್ಥಿಗಳು ಈ ಪ್ರಯೋಜನ ಪಡೆದಿದ್ದಾರೆ.

ಕಾನೂನು ಪದವೀಧರರಿಗೆ ಶಿಷ್ಯವೇತನ: ಕಾನೂನು ಪದವಿಯನ್ನು ಪಡೆದಿರುವ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿಗಾಗಿ ಆಯ್ಕೆ ಮಾಡಿ ಒಟ್ಟು 4 ವರ್ಷಗಳವರೆಗೆ ತರಬೇತಿ ನೀಡಲಾಗುತ್ತಿದ್ದು, ಮಾಸಿಕ ರೂ. 4 ಸಾವಿರದಂತೆ ಶಿಷ್ಯ ವೇತನ ನೀಡಲಾಗುತ್ತದೆ. 2019-20ನೇ ಸಾಲಿನಲ್ಲಿ ಒಟ್ಟು ರೂ. 19.20 ಲಕ್ಷಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದ್ದು, 2019ರ ಡಿಸಂಬರ್ ಅಂತ್ಯದವರೆಗೆ ರೂ. 4.40 ಲಕ್ಷಗಳು ಖರ್ಚಾಗಿದ್ದು, ಒಟ್ಟು 13 ಕಾನೂನು ಪದವೀಧರರಿಗೆ ಶಿಷ್ಯವೇತನ ನೀಡಲಾಗಿದೆ.

ಶುಲ್ಕ ವಿನಾಯಿತಿ ನೀಡಿಕೆ: ಸರ್ಕಾರದಿಂದ ಮಾನ್ಯತೆ ಪಡೆದು ಅನುದಾನ ಸಹಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ನಿಗದಿಪಡಿಸಿದ ದರದಂತೆ ಬೋಧನಾ ಶುಲ್ಕ, ಪ್ರವೇಶ ಶುಲ್ಕ ಹಾಗೂ ಇನ್ನಿತರ ಶುಲ್ಕವನ್ನು ಇಲಾಖಾ ವತಿಯಿಂದ ಮರು ಪಾವತಿಸಲಾಗುತ್ತಿದೆ. 2019-20ನೇ ಸಾಲಿನಲ್ಲಿ ಜಿಲ್ಲಾವಲಯ ಯೋಜನೇತರ ಕಾರ್ಯಕ್ರಮದಡಿ ಒಟ್ಟು ರೂ.270.88 ಲಕ್ಷಗಳನ್ನು ಒದಗಿಸಲಾಗಿದ್ದು, ಡಿಸೆಂಬರ್-2019ನೇ ಅಂತ್ಯದವರೆಗೆ ಒಟ್ಟು ರೂ. 270.88 ಲಕ್ಷಗಳನ್ನು ಖರ್ಚು ಮಾಡಲಾಗಿದ್ದು, ಒಟ್ಟು 2961 ವಿದ್ಯಾರ್ಥಿಗಳಿಗೆ ಡಿಬಿಟಿ ಆನ್‍ಲೈನ್ ಮೂಲಕ ಖರ್ಚು ಮಾಡಲಾಗಿದೆ. ರಾಜ್ಯ ವಲಯ ಕಾರ್ಯಕ್ರಮದಡಿ ಈ ಯೋಜನೆಯಡಿ ಒಟ್ಟು ರೂ.73.78 ಲಕ್ಷಗಳನ್ನು ಒದಗಿಸಲಾಗಿದ್ದು, ಡಿಸೆಂಬರ್-2019ನೇ ಅಂತ್ಯದವರೆಗೆ ಒಟ್ಟು ರೂ. 73.63 ಲಕ್ಷಗಳನ್ನು ಖರ್ಚು ಮಾಡಲಾಗಿದ್ದು ಒಟ್ಟು 1597 ವಿದ್ಯಾರ್ಥಿಗಳಿಗೆ ಡಿಬಿಟಿ ಆನ್‍ಲೈನ್ ಮೂಲಕ ಖರ್ಚು ಮಾಡಲಾಗಿದೆ.

ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿ ವೇತನ: ವಿವಿಧ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ನೇ ತರಗತಿಯಿಂದ 10 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಹಾಗೂ ಪ್ರಥಮ ಪಿ.ಯು.ಸಿ.ಯಿಂದ ಸ್ನಾತಕೋತ್ತರ ತರಗತಿ ಹಾಗೂ ತಾಂತ್ರಿಕ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಇಲಾಖಾ ವತಿಯಿಂದ ಮಂಜೂರು ಮಾಡಲಾಗುತ್ತಿದೆ.

2019-20ನೇ ಸಾಲಿನಲ್ಲಿ ಒಟ್ಟು ರೂ.113.58 ಲಕ್ಷಗಳನ್ನು ಒಟ್ಟು 8300 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಒದಗಿಸಲಾಗಿರುತ್ತದೆ. ರಾಜ್ಯವಲಯ ಕಾರ್ಯಕ್ರಮದಡಿ ರೂ.731.04 ಲಕ್ಷಗಳನ್ನು ಒಟ್ಟು 14115 ವಿದ್ಯಾರ್ಥಿಗಳಿಗೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಡಿಬಿಟಿ ಮೂಲಕ ಆನ್ ಲೈನ್ ಮೂಲಕ ಮಂಜೂರು ಮಾಡಲಾಗಿರುತ್ತದೆ.

ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಮಂಜೂರಾತಿ: ವಿದ್ಯಾರ್ಥಿ ನಿಲಯಗಳಲ್ಲಿದ್ದು ವಾರ್ಷಿಕ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತಿದ್ದು 2019ನೇ ಮಾರ್ಚ್ ಅಂತ್ಯದವರೆಗೆ ಒಟ್ಟು ರೂ.12.85 ಲಕ್ಷಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದ್ದು 2019ನೇ ಡಿಸೆಂಬರ್ ಅಂತ್ಯದವರೆಗೆ ಒಟ್ಟು ರೂ.6.56 ಲಕ್ಷಗಳನ್ನು 382 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಮಂಜೂರು ಮಾಡಲಾಗಿದೆ.

ಪಿ.ಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ ಫೆಲೋಶಿಪ್ ನೀಡಿಕೆ ಕಾರ್ಯಕ್ರಮದಡಿ 2019ನೇ ಡಿಸೆಂಬರ್ ಅಂತ್ಯದವರೆಗೆ ರೂ.4.80 ಲಕ್ಷಗಳನ್ನು ಒದಗಿಸಲಾಗಿದ್ದು ರೂ. 4.20 ಲಕ್ಷಗಳನ್ನು 8 ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮಂಜೂರಾತಿ ನೀಡಲಾಗಿರುತ್ತದೆ.

ವಿದ್ಯಾಸಿರಿ: ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆಯಡಿ ವಸತಿ ನಿಲಯದಲ್ಲಿ ಪ್ರವೇಶ ದೊರಕದ ಹಿಂದುಳಿದ ವರ್ಗಗಳ, ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ.1500 ರಂತೆ 10 ತಿಂಗಳಿಗೆ ರೂ.15 ಸಾವಿರ ನೀಡುವ ಕಾರ್ಯಕ್ರಮವಾಗಿದ್ದು, 2019ನೇ ಡಿಸೆಂಬರ್ ಅಂತ್ಯದವರೆಗೆ ರೂ.31.86 ಲಕ್ಷಗಳನ್ನು ಒದಗಿಸಲಾಗಿದ್ದು ರೂ.13.55 ಲಕ್ಷಗಳನ್ನು 368 ವಿದ್ಯಾರ್ಥಿಗಳಿಗೆ ಮಂಜೂರಾತಿ ನೀಡಲಾಗಿರುತ್ತದೆ.

ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಮೆಟ್ರಿಕ್ ಪೂರ್ವ ನವೀಕರಣ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಕಾರ್ಯಕ್ರಮದಡಿ ರೂ. 1.74 ಲಕ್ಷಗಳನ್ನು ಒಟ್ಟು 87 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಡಿಬಿಟಿ ಅನ್ವಯ ಆನ್‍ಲೈನ್ ಮೂಲಕ ಮಂಜೂರು ಮಾಡಲಾಗಿದೆ.