ಮಡಿಕೇರಿ, ಜ. 23: ಸಮಾಜದಲ್ಲಿ ಅತ್ಯಂತ ಬಡತನದಲ್ಲಿರುವ ಕೂಲಿಕಾರ್ಮಿಕರು, ವಯೋವೃದ್ಧರು, ರೋಗಿಗಳು, ವಿಶೇಷಚೇತನರು, ಬಡ ವಿದ್ಯಾರ್ಥಿಗಳು, ಮುಂತಾದವರನ್ನು ಗುರುತಿಸಿ ಸಾಧ್ಯವಾಗುವ ನೆರವು ನೀಡುತ್ತಾ ಬರುತ್ತಿರುವ ವ್ಯಾಟ್ಸ್‍ಪ್ ಮಾನವೀಯ ಸ್ನೇಹಿತರ ಒಕ್ಕೂಟವು ಇತ್ತೀಚೆಗೆ ಸಮಾಜದ ವಿವಿಧ ಜನಾಂಗದ 11 ಕಡುಬಡ ಕುಟುಂಬವನ್ನು ಗುರುತಿಸಿ ಅವರಿಗೆ ಪಡಿತರ ಅರಿವೆ, ಚಿಕಿತ್ಸಾ ವೆಚ್ಚ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ತನ್ನ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ನಡೆಸಿತು.
ಸಿದ್ದಾಪುರದ ಹಿರಾ ಮಸೀದಿಯ ಸಭಾಂಗಣದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಎಂ.ಇ. ಮಹಮ್ಮದ್ ವಹಿಸಿದ್ದರು. ಕೊಡಗು ರಿಲೀಫ್ ಟ್ರಸ್ಟ್‍ನ ಸಿದ್ದಾಪುರ ವಿಭಾಗದ ಕಾರ್ಯದರ್ಶಿ ಟಿ.ಎ. ಬಶೀರ್ ಗಿಡಕ್ಕೆ ನೀರೆರೆಯುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಒಕ್ಕೂಟದ ಕಾರ್ಯಕ್ರಮವನ್ನು ಪ್ರಶಂಸಿಸಿದರು.
ಒಕ್ಕೂಟದ ವಕ್ತಾರ ಮೈಕಲ್ ವೇಗಸ್ ಅವರು ಮಾತನಾಡಿ, ಮಾನವೀಯ ಸ್ನೇಹಿತರ ಒಕ್ಕೂಟವು ಅದರ ಹೆಸರಿಗನುಗುಣವಾಗಿ ಹಿಂದೂ-ಮುಸ್ಲಿಂ-ಕ್ರೈಸ್ತ ಜನಾಂಗದ ಸಮಾನ ಮನಸ್ಕರನ್ನೊಳಗೊಂಡ ಸಂಘಟನೆಯಾಗಿದ್ದು, ಸದಸ್ಯರುಗಳ ಹಾಗೂ ದಾನಿಗಳ ಸಹಕಾರದೊಂದಿಗೆ ಕಳೆದ ಒಂದು ವರ್ಷದಲ್ಲಿ ಜಾತಿ ಮತ ನೋಡದೆ ಅನೇಕ ಬಡವರಿಗೆ ನೆರವು ನೀಡುತ್ತಾ ಬರುತ್ತಿದೆ. ಒಕ್ಕೂಟವನ್ನು ಮತ್ತಷ್ಟು ಬಲಪಡಿಸಿ ಜಿಲ್ಲೆಯಾದ್ಯಂತ ಇರುವ ಅರ್ಹ ಫಲಾನುಭವಿಗಳಿಗೆ ದೊಡ್ಡಪ್ರಮಾಣದಲ್ಲಿ ನೆರವಾಗುವ ವಿಶೇಷ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು. ಅತಿಥಿ ಸದಸ್ಯ ರಾಮದಾಸ್ ಅವರು ಮಾತನಾಡಿದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಒಕ್ಕೂಟದ ಸದಸ್ಯರುಗಳಾದ ಮಂದ್ರೀರ ಮನೋಜ್, ಪಾಲಿಬೆಟ್ಟದ ರೇವಣ್ಣ ಹಾಗೂ ಮಡಿಕೇರಿಯ ಡೇವಿಡ್ ವೇಗಸ್ ಇವರುಗಳನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಒಕ್ಕೂಟದ ವತಿಯಿಂದ ಮಡಿಕೇರಿಯ ಜಿಟಿ ವೃತ್ತದ ಚರ್ಚ್ ಕಾಂಪ್ಲೆಕ್ಸ್ ನಲ್ಲಿ ಅಳವಡಿಸಲಾಗಿರುವ ಸಾರ್ವಜನಿಕ ಔಷಧಿ ಪೆಟ್ಟಿಗೆಯಲ್ಲಿ ಸಂಗ್ರಹವಾದ ಅವಧಿ ಮೀರದ ಮಾತ್ರೆಗಳನ್ನು ವೈದ್ಯರ ಪರಿಶೀಲನೆಗೆ ಒಳಪಡಿಸಿ ಹಿರಿಯ ಜೀವಗಳಿಗೆ ನೀಡಲು ಸುಂಟಿಕೊಪ್ಪದ ವಿಕಾಸ್ ಟ್ರಸ್ಟ್‍ನ ಮುಖ್ಯಸ್ಥ ರಮೇಶ್ ಅವರಿಗೆ ಹಸ್ತಾಂತರಿಸಲಾಯಿತು.
ಎಂ.ಇ. ಮಹಮದ್ ವಿರಚಿತ ಒಕ್ಕೂಟದ ಧ್ಯೇಯ ಗೀತೆಯನ್ನು ಸದಸ್ಯೆ ಕಡ್ಲೇರ ತುಳಸಿ ಮೋಹನ್ ಅವರು ಮನಮುಟ್ಟುವಂತೆ ಹಾಡಿದರು. ಸದಸ್ಯೆ ಬಾಳೆಯಡ ದಿವ್ಯಾ ಮಂದಪ್ಪ ಸ್ವಾಗತ ಭಾಷಣ ಮಾಡಿದರು. ಸದಸ್ಯರುಗಳಾದ ಸುನಿತಾ ಟೀಚರ್ ಹಾಗೂ ಉಮೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಮುಖ್ಯಸ್ಥ ಪಿ.ಪಿ. ಸುಕುಮಾರ್ ವರದಿ ವಾಚಿಸುವ ಮೂಲಕ ಸಂಘಟನೆ ನಡೆದು ಬಂದ ಹಾದಿಯ ಕುರಿತು ಸಭೆಗೆ ವಿವರ ನೀಡಿದರು.