ಮಡಿಕೇರಿ, ಜ. 23: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಅಂತರರಾಷ್ಟ್ರೀಯ ಹಾಕಿ ಆಟಗಾರ ಮಂಡೇಪಂಡ ಕೆ. ಪ್ರಕಾಶ್ ಹೇಳಿದರು.

ಗೋಣಿಕೊಪ್ಪ ಸಮೀಪದ ಕಳತ್ಮಾಡು ಲಯನ್ಸ್ ಶಿಕ್ಷಣ ಸಂಸ್ಥೆಯ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಭಾಗವಹಿಸಬೇಕು. ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದರೆ ಅತ್ಯುತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮ ಬಹುದಾಗಿದೆ.

ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಶ್ರದ್ಧೆ, ಶಿಸ್ತು, ಸಮಯ ಪಾಲನೆ ಹಾಗೂ ಏಕಾಗ್ರತೆ ಮುಖ್ಯ ವಾಗಿದೆ.

ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸು ವಂತಾಗಬೇಕು ಎಂದರು.

ಲಯನ್ಸ್ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದು, ನಿಜಕ್ಕೂ ಶ್ಲಾಘನೀಯ. ಅಲ್ಲದೆ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯಬೇಕೆಂದು ಪ್ರಕಾಶ್ ಹೇಳಿದರು.

ಲಯನ್ಸ್ ಶಿಕ್ಷಣ ಸಂಸ್ಥೆಗಳಾದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಕ್ರೀಡೋತ್ಸವದ ಅಂಗವಾಗಿ ವಿವಿಧ ಕ್ರೀಡಾಕೂಟಗಳು ನಡೆದವು. ಲಯನ್ಸ್ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾ ವರದಿಯನ್ನು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕ ಗಣಪತಿ ಹಾಗೂ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಾರ್ಷಿಕ ಕ್ರೀಡಾ ವರದಿಯನ್ನು ದೈಹಿಕ ಶಿಕ್ಷಕ ನಾಗೇಶ್ ಮಂಡಿಸಿದರು.

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಲಯನ್ಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು. ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಬಹುಮಾನ ವಿತರಣೆ ಮಾಡಲಾಯಿತು.

ಅನುಷಾ ಸ್ವಾಗತಿಸಿ, ಅನ್ವಿತಾ ನಿರೂಪಣೆ ಮಾಡಿದರು. ನಿಚಿತ ಬಹುಮಾನ ವಿಜೇತರನ್ನು ಘೋಷಣೆ ಮಾಡಿದರು. ವೇದಿಕೆಯಲ್ಲಿ ಲಯನ್ಸ್ ಚೇರ್ಮೆನ್ ಕೆ.ಎಸ್. ಚಂಗಪ್ಪ, ಅಧ್ಯಕ್ಷ ಕೆ. ನಿತಿ ಪೂಣಚ್ಚ, ಕಾರ್ಯದರ್ಶಿ ಪೆಮ್ಮಯ್ಯ, ಉಪಾಧ್ಯಕ್ಷ ಸುಬ್ಬಯ್ಯ, ಕ್ರೀಡಾ ನಾಯಕರಾದ ನಾಣಯ್ಯ, ಪುಷ್ಯ, ವರುಣ್ ಲಯನ್ಸ್ ಕಾಲೇಜು ಪ್ರಾಂಶುಪಾಲ ಕೆ.ಸಿ. ಪವಿತ್ರ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಎ.ಬಿ. ಅಕ್ಕಮ್ಮ, ಪ್ರಾಥಮಿಕ ಹಾಗೂ ನರ್ಸರಿ ಮುಖ್ಯೋಪಾಧ್ಯಾಯಿನಿ ಪಿ.ಡಿ. ತಂಗಮ್ಮ ಇದ್ದರು.

- ಕೆ.ಎಂ. ಇಸ್ಮಾಯಿಲ್