ಗೋಣಿಕೊಪ್ಪ ವರದಿ, ಜ. 23: ಇತ್ತೀಚೆಗೆ ಮಡಿಕೇರಿಯಲ್ಲಿ ಆಯೋಜಿಸಿದ್ದ ಅರಣ್ಯ ಹಕ್ಕು ಜಿಲ್ಲಾ ಸಮಿತಿ ಸಭೆಯನ್ನು ಕೇವಲ 2 ನಿಮಿಷದಲ್ಲಿ ನಡೆಸಿರುವುದು ಅರಣ್ಯವಾಸಿಗಳ ಕಡೆಗಣನೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ. ಆರ್. ಪಂಕಜ (ಅರಣ್ಯ ಹಕ್ಕು ಜಿಲ್ಲಾ ಸಮಿತಿ ಸದಸ್ಯೆ) ಆರೋಪಿಸಿದ್ದಾರೆ.

ಮಡಿಕೇರಿ ಅರಣ್ಯ ಭವನದಲ್ಲಿ ಜನವರಿ 18 ರಂದು ಅರಣ್ಯ ಹಕ್ಕು ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷೆಯಾಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯನ್ನು ನಾವು ಸಭೆಗೆ ಸೇರಿಕೊಳ್ಳುವ ಮುನ್ನವೇ ಮಗಿಸಿ ತೆರಳಿರುವುದರಿಂದ ಸಭೆಯಲ್ಲಿ ಚರ್ಚಿಸಬೇಕಾದ ವಿಚಾರಗಳ ಅನುಷ್ಠಾನಕ್ಕೆ ತೊಂದರೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಮಧ್ಯಾಹ್ನ 12.30 ಕ್ಕೆ ಕರೆದಿದ್ದ ಸಭೆಗೆ ಸಮಿತಿಯ ಸದಸ್ಯರುಗಳು ತೆರಳಿದ್ದೆವು. ಆದರೆ, ಜಿಲ್ಲಾಧಿಕಾರಿಗೆ ಬೇರೆ ಕಾರ್ಯಕ್ರಮ ಒತ್ತಡದಿಂದ ಸಭೆ ವಿಳಂಭವಾಗಿ 2.30 ಕ್ಕೆ ನಡೆದಿದೆ. ನಾವು ಪೂರ್ವ ನಿಯೋಜಿತ ಸಮಯದಿಂದ ಅರಣ್ಯ ಭವನದಲ್ಲಿ ಕಾದು, ಕಾದು, ನಂತರ ಹೊರಗೆ ತೆರಳಿದ್ದ ಸಮಯದಲ್ಲಿ ಸಭೆ ಮುಗಿಸಲಾಗಿದೆ. ಕೇವಲ 2 ನಿಮಿಷದಲ್ಲಿ ಸಭೆ ಅಂತ್ಯ ಕಂಡಿರುವುದರಿಂದ ನಾವು ಸಭಾಂಗಣಕ್ಕೆ ತೆರಳುವಾಗ ಸಭೆ ಮುಗಿದಿದೆ ಎಂದು ಸಬೂಬು ನೀಡಿರುವುದರಿಂದ ಸಾಕಷ್ಟು ವಿಚಾರಗಳು ಚರ್ಚಿಸಲು ಸಾಧ್ಯವಾಗದೆ ವ್ಯರ್ಥವಾಗಿದೆ ಎಂದು ತಿಳಿಸಿದರು.

ಸಭೆಗೆ ಐಟಿಡಿಪಿ ಅಧಿಕಾರಿಗಳೊಂದಿಗೆ ಸಮಿತಿ ಸದಸ್ಯರಾರ ಕುಡಿಯರ ಕುಮಾರ, ಮಂಜುಳ ಪಾಲ್ಗೊಳ್ಳಬೇಕಿತ್ತು. ಅರಣ್ಯವಾಸಿಗಳ ಹಕ್ಕುಪತ್ರ ಸೇರಿದಂತೆ ವಿವಿಧ ಸಮಸ್ಯೆಗಳ ಶಿಪಾರಸ್ಸುಗಳಿಗೆ ಅನುಮೋದನೆ ಕೂಡ ಪಡೆಯಬೇಕಿತ್ತು. ಈ ರೀತಿ ಸಭೆ ಅಂತ್ಯವಾಗಿರುವುದರಿಂದ ನಮಗೆ ಗೊಂದಲವಾಗಿದೆ. ಸುಮಾರು 11 ಅರ್ಜಿಗಳು ಅನುಮೋದನೆ ಪಡೆಯಲು ಆಗಲಿಲ್ಲ. ಇದರಿಂದಾಗಿ ಜಿಲ್ಲಾಧಿಕಾರಿ ಮತ್ತೊಂದು ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಹಾಡಿ ನಿವಾಸಿ ಪಿ.ಸಿ. ರಾಮು ಮಾತನಾಡಿ, ಗ್ರಾಮಸಭೆಯಲ್ಲಿ ಸ್ವೀಕರಿಸಿ ಅನುಮೋದನೆ ಪಡೆದ ಅರ್ಜಿಗಳನ್ನು ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ತಿರಸ್ಕಾರ ಮಾಡುತ್ತಿರುವುದರಿಂದ ಆದಿವಾಸಿಗಳ ಸಮಸ್ಯೆ ಪರಿಹಾರ ಕಾಣುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಸಭೆ ನಿರ್ಧಾರಕ್ಕೆ ಮಹತ್ವ ಇದ್ದರೂ ಕೂಡ, ಆದಿವಾಸಿಗಳ ಸಾಕಷ್ಟು ಅರ್ಜಿ ಇಲಾಖಾ ಮಟ್ಟದಲ್ಲಿ ತಿರಸ್ಕಾರವಾಗುತ್ತಿರುವುದು ನಮಗೆ ತೊಂದರೆಯಾಗಿದೆ. ಹಕ್ಕುಪತ್ರ ವಿಚಾರದಲ್ಲಿನ ಗೊಂದಲ ನಿವಾರಣೆಗೆ ಒತ್ತಾಯಿಸಿದರು. ಹಾಡಿ ನಿವಾಸಿ ಸುಬ್ರು, ಪಿ. ಕೆ. ಶಂಕರ, ಪಿ.ಜೆ. ಮಲ್ಲಪ್ಪ ಗೋಷ್ಠಿಯಲ್ಲಿದ್ದರು.