ಗೋಣಿಕೊಪ್ಪಲು, ಜ.21: ಪಶ್ಚಿಮಘಟ್ಟಗಳ ಪ್ರದೇಶದ ಕೃಷಿಗೆ ಅಂತರ್ರಾಷ್ಟ್ರೀಯ ಮಾನ್ಯತೆ ಇದೆ. ಈ ಹಿಂದೆ ಕೊಡಗಿನ ಕಾಫಿಗೆ ಜಿಯೋಗ್ರಾಫಿಕ್ ಲೇಬಲ್(ಮುದ್ರೆ) ಇರಲಿಲ್ಲ.ಇದೀಗ ಅಂತರ್ರಾಷ್ಟ್ರೀಯ ಮಾನ್ಯತೆ ದೊರೆತಿದ್ದು ಕಾಫಿ, ಕಾಳುಮೆಣಸು, ಏಲಕ್ಕಿ, ಜೇನು, ಪುಷ್ಪಕೃಷಿಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭವಿಷ್ಯದಲ್ಲಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪೆÇನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಸಿ.ಜಿ.ಕುಶಾಲಪ್ಪ ಮಾಹಿತಿ ನೀಡಿದರು.ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ ತರಬೇತಿ ಪಡೆದ ಸಿಬ್ಬಂದಿಗೆ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ಇದೀಗ 120 ಮಂದಿ ಕೃಷಿ ಪರಿಕರ ಮಾರಾಟಗಾರರು ಪದವಿಯನ್ನು ಪಡೆದಿದ್ದು, ಅವರೆಲ್ಲ ಇನ್ನು ಮುಂದೆ ಕೊಡಗಿನ ಹೆಚ್ಚುವರಿ ಕೃಷಿ ಸೈನಿಕರಿದ್ದಂತೆ. ಕೊಡಗಿನ ಸಾಂಪ್ರದಾಯಿಕ ಕೃಷಿಯನ್ನು ಅಭಿವೃದ್ಧಿಗೊಳಿಸುವಲ್ಲಿ ಇವರ ಪಾತ್ರ ಅತಿಮುಖ್ಯ ಎಂದು ಬಣ್ಣಿಸಿದರು. ಕೃಷಿ ಕೈಬಿಟ್ಟರೆ ನೀರು, ಆಹಾರ, ಗಾಳಿ ಕಳೆದುಕೊಂಡು ಯುದ್ಧಕ್ಕೆ ನಾಂದಿಯಾಗುತ್ತದೆ. ಭವಿಷ್ಯದಲ್ಲಿ ಕೃಷಿಯಲ್ಲಿ ಹೆಚ್ಚಿನ ಮಾರ್ಪಾಡು ಕಾಣಬಹುದಾಗಿದ್ದು, ಬೇಡಿಕೆ ಕೂಡ ಹೆಚ್ಚಾಗಲಿದೆ. ಆಹಾರ ಉದ್ಯಮಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಇದನ್ನು ಮನಗಂಡು ಉಪ ಕಸುಬು ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು. ಹವಾಮಾನ ವೈಪರೀತ್ಯ ವಿಶ್ವಮಟ್ಟದ ಸಮಸ್ಯೆಯಾಗಿರುವದರಿಂದ ಕೃಷಿಯಿಂದ ದೂರ ಉಳಿಯಲು ಪ್ರಯತ್ನಿಸಬಾರದು. ಪಶ್ಚಿಮಘಟ್ಟ ಪ್ರದೇಶದಿಂದ ಜಗತ್ತಿಗೆ ಉತ್ತಮ ಕೃಷಿಯ ಸಂದೇಶ ನೀಡಲು ಮುಂದಾಗಬೇಕು ಎಂದು ಅವರು ಹೇಳಿದರು.

ಕೊಡಗಿನಲ್ಲಿ ಹಸಿರು ಕೃಷಿ ಉತ್ಪಾದನೆ, ಬೀಜಗಳ ಉತ್ಪಾದನೆ ಅಧಿಕಗೊಂಡಲ್ಲಿ ಯುವಜನಾಂಗಕ್ಕೆ ಇಲ್ಲಿಯೇ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿದರು. ಇಲ್ಲಿನ ಪುತ್ತರಿ ಫಾರ್ಮರ್ಸ್ ಪರಿಕರ ಮಾರಾಟ ಸಹಕಾರ ಸಂಸ್ಥೆಯ ಮಾದರಿ ಅರಣ್ಯ ಕಾಲೇಜಿನಲ್ಲಿಯೂ ಮುಂದೆ ಸ್ಥಾಪನೆ ಮಾಡಲಾಗುವದು ಎಂದರು.

ಪದವಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ರಾಜ್ಯ ಸಮನ್ವಯ ಅಧಿಕಾರಿ ಸಮೇತಿ

( ದಕ್ಷಿಣ) ಬೆಂಗಳೂರಿನ ಡಾ.ಜಿ.ಆರ್. ಪೆನ್ನೋಬಳ ಸ್ವಾಮಿ, ಕೊಡಗಿನ ಜನ ಹೃದಯವಂತರು,

(ಮೊದಲ ಪುಟದಿಂದ) ವಿದ್ಯಾವಂತರು. ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಅದೃಷ್ಟವಂತರು. ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಕೊಡಗಿನ ರೈತರಿಗೆ ಉತ್ತಮ ಕಾರ್ಯಕ್ರಮ ನೀಡುತ್ತಾ ಬಂದಿದೆ. ಇದೀಗ 40 ಮಂದಿ ಜಿಲ್ಲೆಯ ಪದವೀಧರರೂ ಒಳಗೊಂಡಂತೆ ಒಟ್ಟು 120 ಮಂದಿ ಕೃಷಿ ಪರಿಕರ ಮಾರಾಟಗಾರರು ಇನ್ನು ಮುಂದೆ ಇಲ್ಲಿನ ಕೃಷಿಕರಿಗೆ ಉತ್ತಮ ಸೇವೆಯನ್ನು ಒದಗಿಸಬೇಕು. ತಮ್ಮ ಜಮೀನು, ತಮ್ಮ ಸುತ್ತಮುತ್ತಲಿನ ಜಮೀನಿನಲ್ಲಿ ಉತ್ತಮ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ನಿರಂತರ ಕ್ಷೇತ್ರ ಭೇಟಿ ಮಾಡಬೇಕು. ಉತ್ತಮ ಮೊಳಕೆಯೊಡೆಯುವ ಬೀಜದ ಬಗ್ಗೆ, ಕೀಟನಾಶಕ ಸಿಂಪರಣೆ, ಗೊಬ್ಬರ ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುವ ಮೂಲಕ ರೈತ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ದ್ರವದ ಗೊಬ್ಬರ ಬಳಕೆ, ನ್ಯಾನೋ ಗೊಬ್ಬರ ಬಳಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಕೃಷಿ ನಷ್ಟಗೊಂಡಲ್ಲಿ ಕೃಷಿ ಪರಿಕರ ವರ್ತಕರು ಕಾನೂನು ಕುಣಿಕೆಯಲ್ಲಿ ಸಿಲುಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಕೊಡಗು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ರಾಜು ಮಾತನಾಡಿ, ಈ ಹಿಂದೆ ಯಾರು ಬೇಕಿದ್ದರೂ ಕೃಷಿ ಪರಿಕರ, ಕೀಟನಾಶಕ, ರಾಸಾಯನಿಕ ಗೊಬ್ಬರ ಇತ್ಯಾದಿ ಮಾರಾಟಗಾರರಾಗಬಹುದಿತ್ತು. ಆದರೆ, ಇದೀಗ ಕಡ್ಡಾಯವಾಗಿ ಹೈದರಾಬಾದ್ ಸಂಸ್ಥೆ ಆತ್ಮ ಯೋಜನೆಯಂತೆ ಹುಟ್ಟುಹಾಕಿರುವ ಸಮೇತಿ (ದಕ್ಷಿಣ)ಯ 48 ವಾರಗಳ ತರಬೇತಿ ಹೊಂದಬೇಕಾಗಿದೆ. ಮಾರಾಟಗಾರರಿಂದ ಕೃಷಿಕರಿಗೆ ಅನ್ಯಾಯವಾಗದಂತೆ ಕಡಿವಾಣ ಹಾಕಲು ಇಂತಹ ಪದವಿ ಕೋರ್ಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 155 ರಿಂದ 160 ಆಂತರಿಕ ಕೃಷಿ ಪರಿಕರ ಮಾರಾಟಗಾರರಿದ್ದು ಇದೀಗ 120 ಮಂದಿ ತರಬೇತಿ ಹೊಂದಿದ್ದಾರೆ. ಇನ್ನು 20 ಮಂದಿ ತರಬೇತಿಯಿಂದ ಕಾರಣಾಂತರವಾಗಿ ವಂಚಿತರಾಗಿದ್ದು ಮುಂದೆ ಹಾಸನದಲ್ಲಿ ತರಬೇತಿ ಹೊಂದಬೇಕಾಗಿದೆ ಎಂದು ವಿವರಿಸಿದರು. ಕಳಪೆ ಕೃಷಿ ವಸ್ತುಗಳ ಮಾರಾಟದಿಂದ ಅಧಿಕ ಲಾಭ ಪಡೆಯಲು ಮುಂದಾಗದೆ ಆತ್ಮವಂಚನೆ ಮಾಡಿಕೊಳ್ಳದ ರೀತಿಯಲ್ಲಿ ಮಾರಾಟಗಾರರು ಕೃಷಿಕನಿಗೆ ಗುಣಮಟ್ಟದ ವಸ್ತುಗಳನ್ನು ನೀಡಬೇಕಿದೆ ಎಂದರು.

ಗೋಣಿಕೊಪ್ಪಲು ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್ ಮಾತನಾಡಿ, ಮಾರಾಟಗಾರರು ತರಬೇತಿ ಪಡೆದಿರುವುದರಿಂದ ಕೃಷಿ ವಲಯದಲ್ಲಿ ಹೆಚ್ಚಿನ ಗುಣಮಟ್ಟದ ಉತ್ಪಾದನೆ ನೀರಿಕ್ಷಿಸಲಾಗುತ್ತಿದೆ. ಇವರಿಂದ ದೊರೆಯುವ ಸಲಹೆ ಕೃಷಿಯಲ್ಲಿ ವೈಜ್ಞಾನಿಕವಾಗಿ ಬದಲಾವಣೆ ತರಲಿದೆ ಎಂದರು.

ಕೃಷಿ ಪರಿಕರ ಮಾರಾಟಗಾರರು ಬಿಎಸ್‍ಸಿ ಪದವಿ, ಅಥವಾ ರಾಸಾಯನ ಶಾಸ್ತ್ರದಲ್ಲಿ ಪದವಿ ಮಾಡಿರಬೇಕು. ಈ ಬಾರಿ ಕೃಷಿ ತಜ್ಞ ವೀರೇಂದ್ರಕುಮಾರ್ ನೇತೃತ್ವದಲ್ಲಿ ಕೊಡಗಿನ 40 ಕೃಷಿ ಪರಿಕರ ಮಾರಾಟಗಾರರಿಗೆ 54 ವಾರಗಳ ತರಬೇತಿ ನೀಡಲಾಗಿದ್ದು, ಸುಮಾರು 27 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. 34 ಮಂದಿ ಅತ್ಯುನ್ನತ ಶ್ರೇಣಿ, 4 ಮಂದಿ ಪ್ರಥಮ ದರ್ಜೆ ಹಾಗೂ ಇಬ್ಬರು ಪಾಸ್ ಆಗುವ ಮೂಲಕ ಉತ್ತಮ ಫಲಿತಾಂಶ ಬಂದಿದೆ. ಸುಮಾರು 25 ತಜ್ಞ ಶಿಕ್ಷಕರಿಂದ ತರಬೇತಿ ನೀಡಲಾಗಿತ್ತು. ಮಣ್ಣಿನ ಆರೋಗ್ಯ ಪರೀಕ್ಷೆ ತರಬೇತಿ, ವಿವಿಧ ಕ್ಷೇತ್ರಗಳ ಪರಿಚಯವನ್ನು ಮಾಡಲಾಗಿದೆ ಎಂದು ಪ್ರಾಸ್ತಾವಿಕವಾಗಿ ನುಡಿದರು.

ಈ ಸಂದರ್ಭ ಪ್ರಥಮ ಸ್ಥಾನ ಗಳಿಸಿದ ಮೂವರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕವನ್ನು ನೀಡಲಾಯಿತು. 40 ಮಂದಿಗೆ ದ್ರೃಢೀಕರಣ ಪತ್ರ ವಿತರಣೆ ಮೂಲಕ ಪದವಿ ಪ್ರದಾನ ಮಾಡಲಾಯಿತು. ಯೋಜನೆ ಸಂಚಾಲಕ ಡಾ. ವೀರೇಂದ್ರಕುಮಾರ್, ವಿಜ್ಞಾನಿಗಳಾದ ಡಾ. ಪ್ರಭಾಕರ್, ಡಾ. ದೇವಯ್ಯ ಇದ್ದರು.

ಕಾರ್ಯಕ್ರಮದಲ್ಲಿ ಕೃಷಿತಜ್ಞರಾದ ವೀರೇಂದ್ರಕುಮಾರ್ ಸ್ವಾಗತ, ಪ್ರಭಾಕರ್ ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದರು.

ವರದಿ: ಟಿ.ಎಲ್.ಎಸ್, ಸುದ್ದಿಮನೆ,