ಮಡಿಕೇರಿ, ಜ. 21: ಕೊಡಗಿನ ರಾಜಪರಂಪರೆಯೊಂದಿಗೆ ಹಾಡಗೇರಿ ನಾಡಿನ ಜನತೆ ಆರಾಧಿಸಿಕೊಂಡು ಬರುತ್ತಿದ್ದ ಪುರಾತನ ಶಿವಾಲಯವೊಂದು; ಪ್ರಕೃತಿ ರಮಣೀಯ ಕೋಟೆಬೆಟ್ಟ ತಪ್ಪಲಿನಲ್ಲಿ ಕಾನನದ ನಡುವೆ; ಒಂದೊಮ್ಮೆ ನಾಶಗೊಂಡಿದ್ದು; ಇಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಸದ್ದಿಲ್ಲದೆ ಜೀರ್ಣೋದ್ಧಾರಗೊಳ್ಳುತ್ತಿದೆ. ಈ ಶಿವಾಲಯಕ್ಕೆ ತನ್ನದೇ ಆದ ಇತಿಹಾಸವಿದ್ದರೂ; ಅನೇಕ ಶತಮಾನಗಳಿಂದ ಕಾಡುಪಾಲಾಗಿತ್ತು.ಇತ್ತೀಚಿನ ವರ್ಷಗಳಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾಗಿರುವ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಮಾಜಿ ಸಚಿವ ದಿ. ಎ.ಎಂ. ಬೆಳ್ಯಪ್ಪ ಪುತ್ರ ನಂದಾ ಬೆಳ್ಯಪ್ಪ ಹಾಡಗೇರಿಯಲ್ಲಿ ಒಂದಿಷ್ಟು ಜಾಗ
ಖರೀದಿಸಿದ ಸಂದರ್ಭ; ನಾಶಗೊಂಡಿರುವ ದೇವಾಲಯದ ಕುರುಹು ಪತ್ತೆಯಾಗಿದೆ. ಆ ಮೇರೆಗೆ ದೈವಜ್ಞರನ್ನು ಆಹ್ವಾನಿಸಿ ಅಷ್ಟಮಂಗಲ ಪ್ರಶ್ನೆ ಇರಿಸಿದಾಗ; ಒಂದೊಮ್ಮೆ ಕಾನನದ ನಡುವೆ ಶಿವಾಲಯವಿದ್ದು; ಹಾಲೇರಿಯ ರಾಜವಂಶಸ್ಥರು ಗ್ರಾಮೀಣ ಜನತೆಯೊಂದಿಗೆ ಸೇರಿ ಪೂಜಾ ಕೈಂಕರ್ಯ ನಡೆಸಿಕೊಂಡು ಬರುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.(ಮೊದಲ ಪುಟದಿಂದ) ಅನಂತರದಲ್ಲಿ ಬ್ರಿಟಿಷ್ ಆಳ್ವಿಕೆಯ ದಿನಗಳಲ್ಲಿ ತೀರಾ ಕಾಡು ಸೀಮೆಯಿಂದ ಕೂಡಿದ್ದ ದುರ್ಗಮ ಪ್ರದೇಶದ ಈ ಶಿವಾಲಯವು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಂಶ ಗೋಚರಿಸಿದೆ. ಆ ಮೇರೆಗೆ ಶಾಸಕರು ಒಂದಿಷ್ಟು ಗ್ರಾಮೀಣ ಪ್ರಮುಖರೊಂದಿಗೆ ಚರ್ಚಿಸಿ; ಈ ಮಹಾದೇವರ ದೇಗುಲವನ್ನು ಪುನರ್ ನಿರ್ಮಾಣ ಮಾಡುವ ಸಂಕಲ್ಪ ಕೈಗೊಂಡಿದ್ದಾರೆ.
ತಂತ್ರಿಗಳ ಮಾರ್ಗದರ್ಶನ: ಅನಂತರದಲ್ಲಿ ಕೊಡಗು ದೇವಾಲಯ ನಿಧಿ ನಿವೃತ್ತ ಅಧಿಕಾರಿ ಎಸ್.ಎಸ್. ಸಂಪತ್‍ಕುಮಾರ್ ಸಹಿತ ಕೆಮ್ಮಿಂಜೆಯ ದೈವಜ್ಞ ನಾಗೇಶ್ ತಂತ್ರಿಗಳ ಮಾರ್ಗದರ್ಶನದಲ್ಲಿ; ಕಳೆದೆರಡು ವರ್ಷಗಳಿಂದ ವಿಶಾಲ ಪರಿಸರದಲ್ಲಿ ದೇಗುಲ ತಲೆಯೆತ್ತುವಂತಾಗಿದೆ ಎಂದು ಗ್ರಾಮದ ಬೆಳೆಗಾರ ನಂದಾ ಬೆಳ್ಯಪ್ಪ ‘ಶಕ್ತಿ’ಯೊಂದಿಗೆ ತಿಳಿಸಿದರು.
ರಂಜನ್ ಆಶಯ : ರಾಜ ಪರಂಪರೆಯಿಂದ ಪೂಜೆಗೊಂಡು ನಶಿಸಿ ಹೋಗಿದ್ದ ಶಿವಾಲಯದ ಜೀರ್ಣೋದ್ಧಾರಕ್ಕೆ ಮುಂದಾಗಿರುವ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪ್ರತಿಕ್ರಿಯಿಸಿ; ಅಷ್ಟಮಂಗಲದಲ್ಲಿ ಗೋಚರ ಫಲದಂತೆ ಎಲ್ಲರ ಒಳಿತಿಗಾಗಿ ಅಭಿವೃದ್ಧಿಗೆ ಪ್ರಯತ್ನ ನಡೆದಿದೆ ಎಂದು ನುಡಿದರು. ಅಂದಾಜು ರೂ. 65 ಲಕ್ಷದ ಕೆಲಸ ನಡೆದಿದ್ದು; ಶಿವಾಲಯ ಪೂರ್ಣಗೊಳಿಸಲು ಮತ್ತು ಮರು ಪ್ರತಿಷ್ಠಾಪನೋತ್ಸವ ಸೇರಿ ರೂ. 1 ಕೋಟಿಯ ವೆಚ್ಚವಾಗಲಿದೆ ಎಂದು ಅಂದಾಜಿಸಿದರು. ಅಲ್ಲದೆ ನಿವೃತ್ತ ಪೊಲೀಸ್ ಅಧಿಕಾರಿ ಬಾಚಮಂಡ ಪೂಣಚ್ಚ, ನಂದಾ ಬೆಳ್ಯಪ್ಪ ಹಾಗೂ ಸದ್ಭಕ್ತರು, ದಾನಿಗಳು ಗ್ರಾಮಸ್ಥರ ಸಹಕಾರದಿಂದ ಮುಂದಿನ ಫೆಬ್ರವರಿ ಮಾಸಾಂತ್ಯಕ್ಕೆ ಪ್ರತಿಷ್ಠಾಪನೆ ಕೈಗೊಳ್ಳಲಾಗುವದು ಎಂದು ಆಶಯ ವ್ಯಕ್ತಪಡಿಸಿದರು.