ಮಡಿಕೇರಿ, ಜ. 20 : ಕೇಂದ್ರ ಸರ್ಕಾರದÀ ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಕಾಯ್ದೆಗಳು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿರುವ ಸುನ್ನಿ ಸಮನ್ವಯ ಸಮಿತಿಯ ಸಂಯೋಜಕ ಸಿ.ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್, ಕೇಂದ್ರದ ಜನ ವಿರೋಧಿ ನೀತಿಗಳನ್ನು ಪ್ರತಿಭಟಿಸುವ ಉದ್ದೇಶದಿಂದ ಎರಡು ಪಂಗಡಗಳಾಗಿದ್ದ ಸಮುದಾಯವನ್ನು ಒಗ್ಗೂಡಿಸಿ ‘ಸುನ್ನಿ ಸಮನ್ವಯ ಸಮಿತಿ’ಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೌರತ್ವ ಕಾಯ್ದೆಯಲ್ಲಿ ಭಾರತೀಯ ಮುಸ್ಲಿಂ ಸಮುದಾಯದ ಪೌರತ್ವ ರದ್ದಾಗುವ ಪ್ರಸ್ತಾಪವಿಲ್ಲ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಜಾರಿಗೆ ತಂದಿರುವ ಸಿಎಎಯು ಭಾರತದ ಜಾತ್ಯತೀತ ಪರಿಕಲ್ಪನೆಗೆ ವಿರುದ್ಧ ವಾಗಿದೆ. ಜಾತಿ ಧರ್ಮದ ಆಧಾರದಲ್ಲಿ ಪೌರತ್ವವನ್ನು ನಿರಾಶ್ರಿತರಿಗೆ ನೀಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಯಾವುದೇ ದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗುವವರಿಗೆ ಧರ್ಮದ ಆಧಾರವನ್ನು ಮೀರಿ ಇಲ್ಲಿ ಪೌರತ್ವವನ್ನು ನೀಡಬೇಕೆಂದು ಸಮರ್ಥಿಸಿಕೊಂಡರು.

ಸಮನ್ವಯ ಸಮಿತಿಯ ಸಂಯೋಜಕ ಹಫೀಳ್ ಸಅದಿ ಮಾತನಾಡಿ, ಪೌರತ್ವ ಕಾಯ್ದೆಯ ಬಗ್ಗೆ ಜನರಲ್ಲಿರುವ ಭಯ ಹೋಗಲಾಡಿ ಸುವ ನಿಟ್ಟಿನಲ್ಲಿ ತಾ. 22ರ ಒಳಗಾಗಿ ಜಿಲ್ಲೆಯ ಎಲ್ಲಾ ಮೊಹಲ್ಲಾಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರ್ರ ಸರ್ಕಾರ ಈ ಕಾಯ್ದೆ ಜಾರಿಗೆ ತರಲು ಮುಂದಾದಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಹೇಳಿದರು.

ವಕ್ಫ್ ಸಲಹಾ ಸಮಿತಿ ಸದಸ್ಯ ಕೆ. ಎ. ಯಾಕೂಬ್ ಮಾತನಾಡಿ, ಸಮಿತಿಗೆ 25 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಕೆ.ಎ.ಮುಹಮ್ಮದ್ ಮುಸ್ಲಿಯಾರ್ ಎಡಪಾಲ, ಉಪಾಧ್ಯಕ್ಷರಾಗಿ ಕೆ.ಎ. ಯಾಕೂಬ್, ಎ.ಎ. ಮುಹಮ್ಮದ್ ಹಾಜಿ, ಮುಖ್ಯ ಸಂಯೋಜಕರಾಗಿ ಎಂ.ಎಂ. ಅಬ್ದುಲ್ಲ ಫೈಝಿ, ಸಂಯೋಜಕರಾಗಿ ಹಫೀಳ್ ಸಅದಿ, ಸಿ.ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.