ನಾನು ಬೆಂಗಳೂರಿನ ಬ್ಯಾಟರಾಯನ ಪುರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ವೇಲು ಪ್ಯೂನ್ ಆಗಿದ್ದ. ಹೆಚ್ಚಿಗೆ ಮಾತನಾಡದ ಆತ ವ್ಯವಹಾರದಲ್ಲಿ ಬಹಳ ಚಾಣಾಕ್ಷ. ಗುಮಾಸ್ತರ ಕೆಲಸದ ಬಗ್ಗೆಯೂ ಆತ ಸಾಕಷ್ಟು ತಿಳಿದುಕೊಂಡಿದ್ದ. ಯಾರಾದರೂ ಲಾಗಿನ್ ಮಾಡಿಕೊಟ್ಟರೆ, ಗ್ರಾಹಕರ ಪಾಸ್ ಪುಸ್ತಕವನ್ನು ಪ್ರಿಂಟ್ ಮಾಡಿಕೊಡುತ್ತಿದ್ದ ಹಾಗೂ ತನ್ನ ಮತ್ತು ಉಳಿದವರ ಖಾತೆಯನ್ನು ನೋಡುತ್ತಿರುತ್ತಿದ್ದ. ಆ ಸಂಗತಿ ನಮಗೆಲ್ಲ ಗೊತ್ತಿತ್ತು.
ಒಂದು ದಿನ ವೇಲು ಪ್ರಬಂಧಕರ ಕೊಠಡಿಯಿಂದ ಬಂದು ನನಗೆ ಹೇಳಿದ, ‘ಏನು ಅನ್ಯಾಯ ನೋಡಿ ಎ.ಟಿ.ಎಂ.ನಲ್ಲಿ ನಾನು 90000 ರೂಪಾಯಿಗಳನ್ನು ತೆಗೆದಿದ್ದೀನಂತೆ ನನ್ನ ಖಾತೆಯಲ್ಲಿ ಇರೋದೆ 12000 ರೂಪಾಯಿ ಮಾತ್ರ. ಅದೇಗೆ ಅಷ್ಟೊಂದು ಹಣ ತೆಗೆಯಲು ಬರುತ್ತದೆ’
‘ಇಲ್ಲದ ಹಣ ಹೇಗೆ ತೆಗೆಯೋಕೆ ಸಾಧ್ಯ...?’ ನಾನು ಆಶ್ಚರ್ಯದಿಂದ ಕೇಳಿದೆ.
‘ಸಾಧ್ಯವೇ ಇಲ್ಲ ಅಲ್ವಾ.... ನೀವು ಬಂದು ಮ್ಯಾನೇಜರರಿಗೆ ಸ್ವಲ್ಪ ಹೇಳಿ...’ ವೇಲು ನನ್ನನ್ನು ಪ್ರಬಂಧಕರ ಬಳಿಗೆ ಕರೆದುಕೊಂಡು ಹೋದ.
ನಾನು ವೇಲುವಿನ ಜೊತೆ ಬಂದಿದ್ದನ್ನು ನೋಡಿದ ಪ್ರಬಂಧಕರೆ ಹೇಳಿದರು, ‘ನಮ್ಮ ಕಾರ್ಡ್ ವಿಭಾಗದವರು ಫೋನ್ ಮಾಡಿದ್ದರು... ವೇಲು ದಿನಾಲೂ ಹತ್ತು ಸಾವಿರದಂತೆ ಒಂಭತ್ತು ದಿನ ಎಟಿಎಂನಲ್ಲಿ ಹಣ ತೆಗೆದಿದ್ದಾನೆ ಅಂತ ಅವರು ಹೇಳ್ತಾ ಇದ್ದಾರೆ...’
‘ಅದು ಹೇಗೆ ಸಾಧ್ಯ ಅಂತಾನೆ ಅರ್ಥ ಆಗ್ತಿಲ್ಲ ಸರ್, ಅವನ ಖಾತೆಯನ್ನು ಈಗಲೂ ನೋಡಿದೆ. ಹದಿನೈದು ದಿನಗಳಿಂದ ಹನ್ನೆರಡು ಸಾವಿರ ರೂಪಾಯಿ ಮಾತ್ರ ಇದೆ. ಹಣ ತೆಗೆದಿದ್ದರೆ ಖಾತೆಯಲ್ಲಿ ತೋರಿಸಬೇಕಾಗಿತ್ತಲ್ಲ’ ನಾನೆಂದೆ.
‘ಸಮಸ್ಯೆ ಅದೆ... ನಾವು ಎ.ಟಿ.ಎಂ. ಬಗ್ಗೆ ಏನೂ ತಿಳಿದುಕೊಂಡಿಲ್ಲ. ಈಗ ಮಾತ್ರ ಹೊಸದಾಗಿ ಬಂದಿದ್ದು ಅದು ನಾವು ದಿನಾಲೂ ಆಪ್ ಲೋಡ್ ಮಾಡ್ತಿದ್ದುದು ನಿಜ. ಆದರೆ, ಅದನ್ನು ಸರ್ವರ್ ಸ್ವೀಕರಿಸಲಿಲ್ಲ. ಹಾಗಾಗಿ ಹಣ ತೆಗೆದಾಗ ಖಾತೆಯಲ್ಲಿ ಖರ್ಚು ತೋರಿಸುತ್ತಿರಲಿಲ್ಲ.’ ಪ್ರಬಂಧಕರು ವಿವರಿಸಿದರು.
‘ಏನೂ ಅರ್ಥವೇ ಆಗುತ್ತಿಲ್ಲ’ ವೇಲು ಗೊಣಗಿದ.
‘ನೀನು ಎ.ಟಿ.ಎಂ.ನಲ್ಲಿ ಹಣ ತಗೊಂಡಿಲ್ಲ ಅಂತೀಯಾ ವೇಲು ?’ ದೃಢ ಧ್ವನಿಯಲ್ಲಿ ಕೇಳಿದರು ಪ್ರಬಂಧಕರು.
‘ಇಲ್ಲ ಸರ್’ ಅಂದ ವೇಲು.
‘ಸರಿ, ಎನ್ಕ್ವಾಯರಿ ಆಗಲಿ, ನಮ್ಮ ಕಾರ್ಡ್ ವಿಭಾಗದವರು ಹೇಳಿದ್ದನ್ನು ನಾನು ಹೇಳಿದೀನಿ... ಇನ್ನು ನೀನೆ ಉತ್ತರ ಕೊಡಬೇಕಾದವನು....’ ಎಂದರು ಪ್ರಬಂಧಕರು.
‘ಸರಿ ಸರ್...’ ಎಂದ ವೇಲು.
ನಾನು ಬಂದು ನನ್ನ ಜಾಗದಲ್ಲಿ ಕೂತು ಕೆಲಸ ಮುಂದುವರಿಸಿದೆ. ವೇಲು ಆ ಕಡೆ, ಈ ಕಡೆ ಓಡಾಡುತ್ತಿದ್ದುದನ್ನು ಗಮನಿಸಿದೆ. ಆತ ಚಿಂತೆಗೀಡಾಗಿದ್ದುದು ಅವನ ಮುಖಭಾವದಿಂದಲೇ ಗೊತ್ತಾಗುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ವೇಲುವನ್ನು ಕರೆದು ಕೇಳಿದೆ, ‘ಯಾಕೆ ಭಾರೀ ಚಿಂತೆಯಲ್ಲಿ ಇರೊ ತರಹ ಕಾಣುತ್ತೆ ?’
‘ಎನ್ಕ್ವಾಯರಿ ಅಂತ ಪ್ರಾಣ ಹಿಂಡ್ತಾರೆ, ಅದಕ್ಕಾಗಿ ಚಿಂತೆ’ ಅಂದ ವೇಲು.
‘ನಿಂದು ತಪ್ಪು ಇಲ್ಲ ಅಂದ ಮೇಲೆ ಭಯ ಯಾಕೆ...?’ ಕೇಳಿದೆ.
‘ಅದೂ ಸರಿ.... ‘ ಎನ್ನುತ್ತ ತನ್ನ ಕೆಲಸಕ್ಕೆ ಹೋದ ವೇಲು.
ಸಂಜೆ ನಾಲ್ಕು ಗಂಟೆಯ ಸುಮಾರಿಗೆ ವೇಲು ನನ್ನ ಪಕ್ಕದಲ್ಲಿ ಬಂದು ಕೂತ. ಆತ ಏನೊ ಹೇಳಲು ಬಂದಿದ್ದಾನೆ ಅಂತ ಅರ್ಥವಾಗಿ, ’ಏನ್ಸಮಾಚಾರ... ?’ ಕೇಳಿದೆ.
‘ನಾನು ಎ.ಟಿ.ಎಂ.ನಲ್ಲಿ ಹಣ ತೆಗೆದಿದ್ದು ನಿಜ, ದಿನಾ ಮನೆಗೆ ಹೋಗುವ ಮೊದಲು ಅಕೌಂಟ್ ಚೆಕ್ ಮಾಡುತ್ತಿದ್ದೆ. ನಾನು ತೆಗೆದ ಹಣ ಡೆಬಿಟ್ ಆಗ್ತಾ ಇರಲಿಲ್ಲ. ನನ್ನ ಮನೆಗೆ ಹೋಗುವ ದಾರಿಯಲ್ಲಿ ನಮ್ಮ ವಿಜಯನಗರ ಬ್ರಾಂಚಿನ ಎ.ಟಿ.ಎಂ. ಇದೆಯಲ್ಲ. ಸ್ಕೂಟರ್ ನಿಲ್ಲಿಸಿ ಹಣ ತೆಗೀತಿದ್ದೆ. ಹಣ ತೆಗೆದಿದ್ದು ಯಾರಿಗೂ ಗೊತ್ತಾಗಲಿಕ್ಕಿಲ್ಲ ಎಂಬ ಹುಂಬ ಧೈರ್ಯದಲ್ಲಿ ಬೆಳಿಗ್ಗೆ ಮ್ಯಾನೇಜರ್ ಎದುರು ಸುಳ್ಳು ಹೇಳಿದೆ. ಆ ಮೇಲೆ ಯೋಚನೆ ಮಾಡಿದೆ. ಕಾರ್ಡ್ ವಿಭಾಗದವರು ಕಂಡು ಹಿಡಿದಿದ್ದಾರೆ ಅಂದರೆ ಅವರಿಗೆ ಗೊತ್ತಾಗಿದೆ ಎಂದು ಮನವರಿಕೆ ಮಾಡಿಕೊಂಡೆ. ಎನ್ಕ್ವಾಯರಿ ಆದರೆ ನನಗೆ ನಾನೆ ಸಮಸ್ಯೆ ತಂದುಕೊಂಡ ಹಾಗಾಗುತ್ತದೆ, ನಾನು ಮನೆಗೆ ಹೋದ ಮೇಲೆ ಮ್ಯಾನೇಜರರಿಗೆ ನೀವೆ ನಾನು ಹೇಳಿದ್ದನ್ನು ಹೇಳಿ. ಎ.ಟಿ.ಎಂ. ನಲ್ಲಿ ತೆಗೆದ ಹಣ ನಾನು ಖರ್ಚು ಮಾಡಿಲ್ಲ. ನಾಳೆಯೇ ತಂದು ಕಟ್ತೀನಿ...’ ವೇಲುವಿನದು ನಡಗುವ ಧ್ವನಿ ಇತ್ತು.
‘ಸರಿ, ಹೇಳ್ತೀನಪ್ಪಾ...’ ಎಂದೆ. ಸಂಜೆ ವೇಲು ಮನೆಗೆ ಹೋದ ನಂತರ ಪ್ರಬಂಧಕರಿಗೆ ಆತ ಹೇಳಿದ ವಿಷಯ ತಿಳಿಸಿದೆ.
ಪ್ರಬಂಧಕರು ಹೇಳಿದರು, ‘ನಮ್ಮ ಶಾಖೆಯಿಂದ ಆರು ಜನಕ್ಕೆ ಮಾತ್ರ ಏ.ಟಿ.ಎಂ. ಕಾರ್ಡ್ ಕೊಟ್ಟಿದ್ದೀವಿ... ವೇಲುವನ್ನು ಹೊರತು ಪಡಿಸಿದರೆ, ಒಬ್ಬರು ಮಾತ್ರ ಐದು ಸಾವಿರ ರೂಪಾಯಿ ಡ್ರಾ ಮಾಡಿದ್ದುದಾಗಿ ಕಾರ್ಡ್ ವಿಭಾಗದವರು ಹೇಳಿದ್ದರು, ಆ ಗ್ರಾಹಕರು ಹಣ ತೆಗೆದಿದ್ದು ನಿಜ ಅಂತ ಹೇಳಿದರು. ಹಾಗಾಗಿ ಅವರ ಖಾತೆಗೆ ಐದು ಸಾವಿರ ಡೆಬಿಟ್ ಮಾಡಿದೆವು. ಆದರೆ ವೇಲು ಒಪ್ಕೊಳ್ಳಲಿಲ್ಲ. ಈಗ ಒಪ್ಪಿಕೊಂಡನಲ್ಲ. ಅಷ್ಟು ಸಾಕು. ಅವನ ಮೊಂಡು ವಾದ ಮುಂದುವರಿದಿದ್ದರೆ ಆತನೇ ತೊಂದರೆಗೆ ಸಿಕ್ಕಿಹಾಕಿ ಕೊಳ್ಳುತ್ತಿದ್ದ. ನಮ್ಮ ಸರ್ವರ್ ತಪ್ಪೂ ಇದೆ, ಸಂಜೆ ಅಪ್ಲೋಡ್ ಮಾಡುವಾಗ ರನ್ ಆಗುತ್ತಿತ್ತು. ಆದರೆ ಅಕೌಂಟಿಗೆ ಡೆಬಿಟ್ ಆಗ್ತಾ ಇರಲಿಲ್ಲ. ವೇಲುಗೆ ಆಸೆ ಜಾಸ್ತಿ’ ತಮ್ಮಷ್ಟಕ್ಕೆ ನಗುತ್ತ ಮುಂದುವರೆಸಿ ಕೇಳಿದರು ಪ್ರಬಂಧಕರು, ‘ನೀವು ಯಾಕೆ ಎ.ಟಿ.ಎಂ. ಕಾರ್ಡಿಗೆ ಅರ್ಜಿ ಹಾಕಲಿಲ್ಲ...?’
‘ಮುಂದೆ ಯಾವಾಗಾದ್ರೂ ಅರ್ಜಿ ಹಾಕ್ತೀನಿ ಸರ್’ ನಾನೆಂದೆ.
‘ನಾನೂ ತಗೊಂಡಿಲ್ಲ ನಮ್ಮ ಶಾಖೆಯಲ್ಲಿ ಎ.ಟಿ.ಎಂ. ಮೆಶಿನ್ ಇಲ್ಲ.. ಹತ್ತಿರ ಅಂದರೆ ನಾಲ್ಕು ಕಿಲೋಮೀಟರ್ ದೂರದ ವಿಜಯನಗರ ಶಾಖೆಗೆ ಹೋಗಬೇಕು. ಹಣ ತೆಗೆಯೋಕೆ ಅಷ್ಟು ದೂರ ಯಾರು ಹೋಗ್ತಾರೆ. ಇಲ್ಲೆ ಚೆಕ್ ಕೊಟ್ಟು ತಗೊಂಡ್ರಾಯಿತು. ವೇಲುವಿಗಾದರೆ ಮನೆಗೆ ಹೋಗುವಾಗ ವಿಜಯನಗರ ಶಾಖೆಯ ಮುಂದೇ ಹೋಗಬೇಕು ಅವನಿಗೆ ಉಪಯೋಗ ಆಗುತ್ತೆ.’
ಮಾರನೆಯ ದಿನ ವೇಲು ಹಣ ತಂದು ಕಟ್ಟಿದ. ಪ್ರಬಂಧಕರು ಆತನಿಗೆ ಏನೂ ಹೇಳಲಿಲ್ಲ. ವಿಷಯ ಬೇರೆ ಸಿಬ್ಬಂದಿಗೆ ತಿಳಿಯಲೂ ಇಲ್ಲ.
ಆದರೂ ಎಂಟತ್ತು ದಿನಗಳ ನಂತರ ನಮ್ಮ ಪ್ರಧಾನ ಕಚೇರಿಯಿಂದ ವೇಲುವಿಗೆ ಎಚ್ಚರಿಕೆಯ ಕಾಗದವಂತೂ ಬಂತು. ಪ್ರಬಂಧಕರು ಆ ಕಾಗದವನ್ನು ವೇಲುವಿಗೆ ಕೊಡುತ್ತ ಹೇಳಿದರು, ‘ನೀನು ಒಬ್ಬ ಸಿಬ್ಬಂದಿ ಯಾಗಿ, ಎ.ಟಿ.ಎಂ.ನಲ್ಲಿ ಹಣ ತೆಗೆದಾಗ ಅಕೌಂಟಿಗೆ ಡೆಬಿಟ್ ಆಗ್ತಾ ಇಲ್ಲ ಅಂತ ಹೇಳಿದ್ದರೆ ನೀನು ದೊಡ್ಡ ಮನುಷ್ಯನಾಗ್ತಿದ್ದೆ. ಸುಳ್ಳು, ಮೋಸ ಒಂದಲ್ಲ ಒಂದು ದಿನ ಸಮಸ್ಯೆ ತರುತ್ತದೆ ಅಂತ ಇನ್ನಾದರೂ ತಿಳ್ಕೊ’
ವೇಲು ತಲೆ ಅಲ್ಲಾಡಿಸಿದ. ಹೊರಡುವ ಮುನ್ನ ಒಂದು ಪ್ರಶ್ನೆ ಮುಂದಿಟ್ಟ, ‘ಸರ್, ಇನ್ನು ನಮಗೆ ಕ್ರೆಡಿಟ್ ಕಾರ್ಡ್ ಕೊಡ್ತಾರಂತಲ್ಲ. ಅದರಲ್ಲಿ ಹಣ ಹೇಗೆ ಡ್ರಾ ಮಾಡೋದು ?’
? ನರಸಿಂಹ ಹೆಗಡೆ
(ನಿವೃತ್ತ ಬ್ಯಾಂಕ್ ಉದ್ಯೋಗಿ)
ಬೆಂಗಳೂರು. ಮೊ : 9449060077