ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರೋಬಸ್ಟಾ ಕಾಫಿಯು ಕಟಾವಿಗೆ ಬಂದಿದ್ದು ಬೆಳೆಗಾರರು ಫಸಲನ್ನು ಕುಯ್ಯ ತೊಡಗಿದ್ದಾರೆ. ಕಳೆದ ಸುಮಾರು ಇಪ್ಪತ್ತೇಳು ವರ್ಷಗಳಿಂದಲೂ ಬೆಲೆಯೇರಿಕೆಯನ್ನು ಕಾಣದ ಈ ಕಾಫಿ ಬೆಳೆಗೆ ಈಗ ಗುಣಮಟ್ಟವು ಕಳಪೆ, ಪಾಯಿಂಟ್ಸ್ಗಳು ಕಡಿಮೆ ಯಾಗಿವೆ ಎಂದು ವ್ಯಾಪಾರಿಗಳು ಶೋಷಣೆ ಮಾಡುವಂತೆ ಕಾಫಿ ಬೆಳೆಗಾರರಿಗೆ ಅನ್ನಿಸುತ್ತಿದೆ. ಆದುದರಿಂದ, ಬೆಳೆಗಾರರು ಕಾಫಿಯ ಗುಣಮಟ್ಟವನ್ನು ಕಾಪಾಡುವುದು ಬಹಳ ಅಗತ್ಯವಾಗಿದೆ.
ಡಿಸೆಂಬರ್ ಮೊದಲನೆಯ ವಾರದಿಂದ ಫೆಬ್ರವರಿ ಅಂತ್ಯದವರೆಗೂ ರೋಬಸ್ಟಾಕಾಫಿಯನ್ನು ಕೀಳಲಾಗುತ್ತದೆ. ಅರೆಬಿಕಾ ಕಾಫಿಯ ಕಟಾವು ಮಾಡುವಾಗ ಪ್ರತಿ ಗಿಡದಿಂದಲೂ ಕೇವಲ ಹಣ್ಣನ್ನಷ್ಟೇ ಅರಿಸಿ, ಕಾಯಿಕಾಫಿ ಯನ್ನು ಎರಡನೆಯ ಸುತ್ತಿನ ಕಟಾವಿನಲ್ಲಿ ಕುಯ್ಯಲಾಗುತ್ತದೆ. ಆದರೆ, ರೋಬಸ್ಟಾ ಕಾಫಿಗೆ ಇದು ಅಷ್ಟೊಂದು ಪ್ರಾಯೋಗಿಕವಲ್ಲ. ಆದುದರಿಂದ ಮುಕ್ಕಾಲು ಭಾಗ ಹಣ್ಣಾಗಿರುವ ಗಿಡದ ಎಲ್ಲ ಫಸಲನ್ನೂ ಒಂದೇಬಾರಿ ಕೀಳಬೇಕು. ಅಲ್ಲದೆ, ತೀರಾ ಕಾಯಿಯಾಗಿಯೇ ಇರುವ ಗಿಡದ ಫಸಲನ್ನು ಹಾಗೆಯೇ ಬಿಟ್ಟು, ಪೂರ್ಣ ಹಣ್ಣಾಗುವವರೆಗೂ ಕಾದು, ಮುಂದಿನ ಸುತ್ತಿನಲ್ಲಿ ಆ ಫಸಲನ್ನು ಬಿಡಿಸಿಕೊಳ್ಳಬೇಕು. ಕಾಫಿಯನ್ನು ಕಟಾವು ಮಾಡುವಾಗ ಪಾರಂಪರಿಕ ಕ್ರಮವಾಗಿ ಸೊಂಟಕ್ಕೆ ಕುಕ್ಕೆಯನ್ನು ಕಟ್ಟಿಕೊಂಡು ಕುಯ್ಯುತ್ತಿದ್ದುದು ಬಹಳ ಹಳೆಯ ಕ್ರಮವಾಗಿದ್ದು, ಕಳೆದ ಸುಮಾರು ಎರಡು ದಶಕಗಳಿಂದ ಗಿಡದ ಸುತ್ತಲೂ ತಾಟು ಹಾಸಿ ಕುಯ್ಯಲಾಗುತ್ತಿದೆ. ಹೀಗೆ ಕುಯ್ಯುವುದರಿಂದ ನೆಲದ ಮೇಲೆ ಕಾಫಿಹಣ್ಣುಗಳು ಉಳಿದುಹೋಗುವ ಸಾಧ್ಯತೆಯನ್ನು ಬಹಳ ಕಡಿಮೆ ಮಾಡಬಹುದು. ಒಂದು ಅಥವಾ ಎರಡು ಗಿಡಗಳ ಹಣ್ಣನ್ನು ಕುಯ್ದಬಳಿಕ, ತಾಟಿನಲ್ಲಿರುವ ಕಾಫಿಯನ್ನು ಕಾಫಿತುಂಬುವ ಚೀಲಗಳಿಗೆ ವರ್ಗಾಯಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕಾಪಿ üಹಣ್ಣುಗಳು ಈ ಚೀಲಗಳಿಗಷ್ಟೇ ಹೋಗುತ್ತಿವೆ, ನೆಲಕ್ಕೆ ಚೆಲ್ಲುತ್ತಿಲ್ಲವೆಂಬುದನ್ನು ಕೃಷಿಕರು ಖಚಿತಪಡಿಸಿಕೊಳ್ಳ ಬೇಕಾಗುತ್ತದೆ. ಇದರೊಂದಿಗೆ ಕುಯ್ದ ಗಿಡದಲ್ಲಿ ಯಾವುದೇ ಫಸಲು ಬಾಕಿ ಉಳಿದಿಲ್ಲ ಎಂಬುದನ್ನೂ ಕೃಷಿ ಕಾರ್ಮಿಕರು ಗಮನಿಸ ಬೇಕಾಗುತ್ತದೆ. ಅದೆಷ್ಟೇ ಜಾಗ್ರತೆ ವಹಿಸಿದರೂ, ನೆಲದಲ್ಲಿ ಮತ್ತು ಗಿಡಗಳಲ್ಲಿ ಕೆಲವು ಹಣ್ಣುಗಳು ಬಿಟ್ಟುಹೋಗುತ್ತವೆ. ಇವನ್ನು ಸಂಗ್ರಹಿಸದಿದ್ದರೆ, ಇವುಗಳಲ್ಲಿ ಬೆರಿಬೋರರ್ ಎಂಬ ಹುಳ ತೂತುಕೊರೆದು ಮನೆಮಾಡಬಹುದು. ಈ ಹುಳು ಹಣ್ಣಿನ ಅರ್ಧಭಾಗವನ್ನು ತಿನ್ನುವುದಲ್ಲದೆ, ಮುಂದಿನ ಫಸಲಿನ ಸಮಯದಲ್ಲಿ ಎಲ್ಲ ಹಣ್ಣುಗಳಿಗೂ ತೂತುಕೊರೆಯುತ್ತದೆ. ಆದುದರಿಂದ ಕಟಾವು ಮಾಡಿದೊಡನೆಯೇ ಈ ಬಿಟ್ಟಕಾಫಿ, ಬಿದ್ದ ಕಾಫಿಗಳನ್ನು ಸಂಗ್ರಹಿಸಲೇಬೇಕು.ಈ “ಟಿಟ್ಸ್ ಎಂಡ್ ಬಿಟ್ಸ್”ಕಾಫಿಯನ್ನು ಪ್ರತ್ಯೇಕವಾಗಿಯೇ ಒಣಗಿಸಿ, ಪ್ರತ್ಯೇಕ ವಾಗಿಯೇ ಮಾರಬೇಕು. ಸೆಗಣಿ ಸಾರಿಸಿದ ನೆಲದಲ್ಲಿ ಈ ಹಿಂದೆ ಕಾಫಿಯನ್ನು ಹರಡಿ ಒಣಗಿಸಲಾಗುತ್ತಿತ್ತು. ಇದು ಕಾಫಿಯ ಗುಣಮಟ್ಟವು ಕೆಡುವಂತೆ ಮಾಡುವು ದಲ್ಲದೆ ಸೆಗಣಿಯ ಅಪವ್ಯಯವನ್ನೂ ಮಾಡುತ್ತದೆ. ಆದುದ ರಿಂದ ಕಾಫಿಯನ್ನು ಸಿಮೆಂಟ್ ನೆಲದ ಮೇಲೆ, ಅಥವಾ ಇಂಟರ್ಲಾಕ್ ಹಾಕಿದ ನೆಲದ ಮೇಲೆ ಅಗಲವಾದ ತಾಟನ್ನು ಹಾಸಿ, ಹರಡಬೇಕು. ಅನುಕೂಲ ಕಡಿಮೆಯಿರು ವವರು ಮಣ್ಣಿನ ಕಾಫಿಕಣವನ್ನು ಹೆರೆದು, ಗುಡಿಸಿ ಅದರ ಮೇಲೆ ತಾಟನ್ನು ಹಾಸಿಯೂ ಕಾಫಿಯನ್ನು ಒಣಗಿಸಬಹುದು. ತಾಟನ್ನು ಒಣಗಿಸಲು ಹಾಸುವ ಮುನ್ನ ಗೆದ್ದಲು ಬಾರದಂತೆ ಸ್ಪ್ರೇ ಮಾಡಬೇಕು. ಇದರಿಂದ ಹರಡಿದ ತಾಟನ್ನು ಗೆದ್ದಲು ತಿಂದು ತೂತು ಮಾಡುವುದನ್ನು ತಡೆಯಬಹುದು ಹೀಗೆ ಒಣಗಲು ಹಾಕಿದ ಕಾಫಿಗೆ ಹಣ್ಣು ಮೊಗಚಲು ದಿನ್ನಕ್ಕೆರಡು ಬಾರಿ ಕಾಲುಹಾಕಿ ಅಥವಾ ಮರದ ಗೋರಿಮಣೆಯಿಂದ ಆಡಿಸಬೇಕು. ಕಾಪಿಹಣ್ಣುಗಳನ್ನು ಒಂದು ಇಂಚು ದಪ್ಪಕ್ಕೆ ಹರಡಿದರೆ ಅವು ಸಮವಾಗಿ ಒಣಗುತ್ತವೆ ಅಲ್ಲದೆ “ಕಾಲು ಆಡಿಸಲೂ” ಸುಲಭವಾಗುತ್ತದೆ. ಕಟಾವು ಮಾಡಿ ಸಂಜೆ ತಂದ ಕಾಫಿಯನ್ನು ಹೀಗೆ ತಾಟಿನ ಮೇಲೆ ಹಾಕಿದ ಅನಂತರ, ಅದಕ್ಕೆ ಮಂಜು ಬೀಳದಂತೆ ಅದೇ ತಾಟನ್ನು ಮುಚ್ಚಬೇಕು. ಪ್ರತಿದಿನವೂ ಬೆಳಗ್ಗೆ ಬಿಸಿಲು ಬರತೊಡಗಿದಾಗ, ಈ ಮುಚ್ಚಿದ ತಾಟನ್ನು ತೆಗೆದು ಕಾಫಿಯನ್ನು ಹರಡಬೇಕು. ಪ್ರತಿಸಂಜೆಯೂ ಕಾಫಿಯನ್ನು ಹೀಗೆ ಉದ್ದುದ್ದವಾಗಿ ಗುಡ್ಡೆಮಾಡಿ,ಮುಚ್ಚಿ, ಬೆಳಗ್ಗೆ ತೆಗೆದು ಹರಡುವುದರಿಂದ ಕಾಫಿ ಹಣ್ಣುಗಳು ಸಮನಾಗಿ ಒಣಗುತ್ತವೆ,
ಕುಯ್ದುತಂದ ಕಾಫಿಗಳಲ್ಲಿ ಹಸಿಎಲೆ, ಕಸಕಡ್ಡಿ, ಚೀಕುಗಳು ಸೇರಿರುತ್ತವೆ. ಕಾಫಿಗೆ ಕಾಲುಹಾಕಿ ಮೊಗಚುವಾಗ, ಇವೆಲ್ಲವನ್ನೂ ತೆಗೆದು ಸುಡಬೇಕು. ಉತ್ತಮ ಬಿಸಿಲಿದ್ದರೆ, ರೋಬಸ್ಟಾ ಕಾಫಿಯು ಸುಮಾರು ಹದಿಮೂರು ದಿನಗಳ ಬಿಸಿಲಿಗೆ ಒಣಗುತ್ತದೆ. ಒಣಗಿದ ಒಂದು ಕಾಫಿಯನ್ನು ಹಲ್ಲಿನಿಂದ ಕಚ್ಚಿದಾಗ ಅದರಲ್ಲಿ ಹಲ್ಲಿನ ಗುರುತು ಬೀಳುವ ಬದಲು ಅದು ಒಡೆಯಬೇಕು. ಆಗ, ಕಾಫಿಯು ಒಣಗಿದೆ ಎಂದರ್ಥ. ಕೇವಲ, ಮುಷ್ಟಿಯಲ್ಲಿ ಹಿಡಿದು ಆಡಿಸಿದಾಗ ಬರುವ “ಕಟಕಟ” ಶಬ್ಧವು ಕಾಫಿಯು ನಿಗದಿತ ಮಟ್ಟಕ್ಕೆ ಒಣಗಿದೆ ಎಂಬುದಕ್ಕೆ ಮಾಪನವಾಗುವುದಿಲ್ಲ. ಹೀಗೆ ಒಣಗಿದ ಕಾಫಿಯನ್ನು ಹೊಸ ಬಿಳಿಚೀಲಗಳಲ್ಲಿ ತುಂಬಿಡಬೇಕು. ಉತ್ತಮ ಬೆಲೆ ಬರಲಿ ಎಂದು ಎಲ್ಲವನ್ನೂ ಗೋದಾಮುಗಳಲ್ಲಿ ತುಂಬಿಸಿಡುವುದು ಅಷ್ಟೊಂದು ಲಾಭದಾಯಕವಲ್ಲ. ದಿನಕಳೆದಂತೆ ಕಾಫಿಯು ಸ್ವಲ್ಪಮಟ್ಟಿಗಾದರೂ ಹಗುರ ಬರುವ ಸಾಧ್ಯತೆಯು ಇರುವುದಲ್ಲದೆ, ಕಾಫಿಯ ಮಾರುಕಟ್ಟೆಯು ಕುಸಿದು ಹೋಗಲೂಬಹುದು. ಆದುದರಿಂದ, ಹೆಚ್ಚಿನ ಬೆಲೆಗಾಗಿ ಕಾಯುವು ದರ ಬದಲು ಬೆಳೆಸಿದ ಅರ್ಧಭಾಗದ ಫಸಲನ್ನು ಒಣಗಿದ ಸಮಯದಲ್ಲಿಯೇ ಮಾರುವುದು ಒಳ್ಳೆಯದು. ಉಳಿದ ಫಸಲನ್ನು ಜೂನ್ ತಿಂಗಳ ಅಂತ್ಯದೊಳಗಾಗಿ ಮಾರಿ, ಸರಾಸರಿ ಬೆಲೆಯನ್ನು ಪಡೆದುಕೊಳ್ಳ ಬಹುದು.
ಒಟ್ಟಿನಲ್ಲಿ, ಕಳೆದ ಸುಮಾರು ಮೂರು ದಶಕಗಳಿಂದಲೂ ಬೆಲೆಯೇರಿಕೆ ಯನ್ನು ಕಾಣದ ಕಾಫಿಫಸಲು, ಬೆಳೆಗಾರನನ್ನು ಹಿಂಡಿ,ಹಿಪ್ಪೆಯನ್ನಾಗಿಸಿದೆ. ಹೆಚ್ಚುತ್ತಿರುವ ಕಾರ್ಮಿಕರ ವೇತನ,ಕಾರ್ಮಿಕರ ಕೊರತೆ, ರಸಗೊಬ್ಬರಗಳ ಬೆಲೆಯ ಏರಿಕೆ,ಬೆರಿ ಬೋರರ್ ಹೊಡೆತ,ಮಳೆಯ ಅನಿಶ್ಚಿತತೆ, ಆನೆ, ಮಂಗಗಳು, ಕಾಡುಹಂದಿಗಳು ಇದೀಗ ಚಿರತೆಯ ದಾಳಿ ಹೀಗೆ ಕಾಫಿ ತೋಟದ ಮೇಲೆ ಆಗುತ್ತಿರುವ ಪ್ರಹಾರವು ಬೆಳೆಗಾರರನ್ನು ಕಂಗಾಲಾಗಿಸಿವೆ. ಆದರೂ, ಕಾಫಿಯ ಗುಣಮಟ್ಟವನ್ನು ಉಳಿಸಿಕೊಳ್ಳದಿದ್ದರೆ ಬೆಳೆಗಾರರು ಇನ್ನಷ್ಟೂ ಸೋಲಬಹುದು, ಪಾಯಿಂಟ್ಸ್ ಕಡಿಮೆಯಾಗಿ ಬೆಲೆಯು ಇನ್ನೂ ಇಳಿಮುಖಗೊಳ್ಳಬಹುದು. ಹಾಗಾಗಿ ಬೆಳೆಗಾರರು ಕಾಫಿಯನ್ನು ಕುಯ್ದು, ಒಣಗಿಸುವ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರನೇಕಾಗುತ್ತದೆ.
?ಕಿಗ್ಗಾಲು ಎಸ್ ಗಿರೀಶ್,
ಮೂರ್ನಾಡು