ಮಡಿಕೇರಿ, ಜ. 20: ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಕುರ್ಚಿ ಹಾಕಿ ಊಟಕ್ಕೆ ಕೂರಿಸಿಲ್ಲ ಎಂಬ ವಿಚಾರ ಹಾಗೂ ಈ ಕುರಿತಾಗಿ ಯುವಕನೊಬ್ಬನಿಗೆ ಅಧಿಕಾರಿಯಿಂದ ಕಿರುಕುಳ ಉಂಟಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾತುಕತೆಯ ಮೂಲಕ ಇತಿಶ್ರೀ ಹಾಡಲಾಗಿದೆ.
ಈ ಕುರಿತು ದೇವಸ್ಥಾನ ಸಮಿತಿ ಯಿಂದ ಪ್ರಕಟಣೆ ನೀಡಲಾಗಿದ್ದು; ಈ ಪ್ರಕರಣಕ್ಕೆ ಇಲ್ಲಿಗೆ ಇತಿಶ್ರೀ ಹಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಗೊಂದಲದ ವಿಚಾರ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಹಾಗೂ ಆಕ್ಷೇಪಕ್ಕೆ ಎಡೆಯಾಗಿತ್ತು. ಈ ಬಗ್ಗೆ ರೈತ ಮುಖಂಡರಾದ ಅಪ್ಪಚಂಗಡ ಮೋಟಯ್ಯ ಅವರ ಮೂಲಕ ಆಡಳಿತ ಮಂಡಳಿ ಹಾಗೂ ಪೊಲೀಸ್ ಅಧಿಕಾರಿ ಜತೆ ಪರಸ್ಪರ ಚರ್ಚಿಸಿದ್ದು; ಇದನ್ನು ಮುಕ್ತಾಯಗೊಳಿಸಲಾಗಿದೆ. ಧಾರ್ಮಿಕ ವಿಚಾರದಲ್ಲಿ ಭಿನ್ನಾಭಿಪ್ರಾಯ ಬದಿಗಿಟ್ಟು ಸಾಮೂಹಿಕವಾಗಿ ಒಮ್ಮತದಿಂದ ನಡೆಯಬೇಕಿದೆ. ಪರಸ್ಪರ ತಪ್ಪುಗ್ರಹಿಕೆಯಿಂದ ಈ ವಿಚಾರ ಜರುಗಿದ್ದು; ಸಂಬಂಧಿಸಿದ ಪೊಲೀಸ್ ಅಧಿಕಾರಿ ಕುಟ್ಟ ವೃತ್ತನಿರೀಕ್ಷಕ ಪರಶಿವಮೂರ್ತಿ ಹಾಗೂ ಕಿರುಕುಳ ಎದುರಿಸಿದ್ದರೆನ್ನಲಾದ ಯುವಕ, ಇವರಿಬ್ಬರ ಬಗ್ಗೆಯೂ ಸದಭಿಪ್ರಾಯ ವಿದೆ. sಯುವಕ ಎ.ಜಿ. ಮಂಜುನಾಥ್ ಹಲವಷ್ಟು ವರ್ಷಗಳಿಂದ ದೇಗುಲದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ತಿಳಿಸಿರುವ ಆಡಳಿತ ಮಂಡಳಿ ಇದನ್ನು ಸುಖಾಂತ್ಯಗೊಳಿಸಲು ತೀರ್ಮಾನಿಸಿದೆ. ಭಕ್ತಾದಿಗಳಿಗೆ ತೊಂದರೆಯಾಗಿದ್ದಲ್ಲಿ ಇದಕ್ಕೆ ವಿಷಾದ ವ್ಯಕ್ತಪಡಿಸಿ ವ್ಯವಸ್ಥೆ ಸರಿಪಡಿಸುವದಾಗಿಯೂ ಪ್ರಕಟಣೆ ಯಲ್ಲಿ ತಿಳಿಸಿದೆ.