ಶನಿವಾರಸಂತೆ, ಜ. 20: ಶನಿವಾರಸಂತೆ ಚಿನ್ನಳ್ಳಿ ರಸ್ತೆಯ ನಿವಾಸಿ ಟಿ.ಎಸ್. ಪುಟ್ಟರಾಜು ಅವರ ಮನೆಗೆ ಭಾನುವಾರ ನುಗ್ಗಿರುವ ಕಳ್ಳರು ಮಲಗುವ ಕೋಣೆಯ ಕಬೋರ್ಡ್ನಲ್ಲಿ ಇಟ್ಟಿದ್ದ ರೂ. 3 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ರೂ. 80 ಸಾವಿರ ನಗದನ್ನು ಕಳವು ಮಾಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಿನ್ನೆ ಬೆಳಿಗ್ಗೆ ಪುಟ್ಟರಾಜು ಅವರು ತಮ್ಮ ಪತ್ನಿ ಜಯಮ್ಮಳೊಂದಿಗೆ ಮನೆಯ ಮುಂಬಾಗಿಲಿಗೆ ಬೀಗ ಹಾಕಿ ಕೆಲಸ ನಿಮಿತ್ತ ಶನಿವಾರಸಂತೆಗೆ ತೆರಳಿ ರಾತ್ರಿ 8.30 ಗಂಟೆಗೆ ಪತ್ನಿ ಜಯಮ್ಮ, ಮಗ ಪವನ್ನೊಂದಿಗೆ ಮನೆಗೆ ಬಂದು ನೋಡಿದಾಗ ಮನೆಯ ಹಿಂಬಾಗಿಲು ತೆರೆದಿತ್ತು. ಯಾರೋ ಕಳ್ಳರು ಮನೆಯ ಮುಂಬಾಗಿಲಿನ ಬೀಗ ಮುರಿದು ಒಳ ನುಗ್ಗಿ ಮಲಗುವ ಕೋಣೆಯ ಕಬೋರ್ಡ್ನಲ್ಲಿ ಇಟ್ಟಿದ್ದ 30 ಗ್ರಾಂ ಚಿನ್ನದ ಸರ, 20 ಗ್ರಾಂನ ಮತ್ತ್ತೊಂದು ಸರ, 40 ಗ್ರಾಂ ತೂಕದ ಒಂದು ಜೊತೆ ಬಳೆ, 10 ಗ್ರಾಂ ತೂಕದ ಎರಡು ಜೊತೆ ಓಲೆ, 10 ಗ್ರಾಂ ತೂಕದ 3 ಉಂಗುರ, 10 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ 80 ಸಾವಿರ ಹಣವನ್ನು ಕಳವು ಮಾಡಿರುವುದು ಪತ್ತೆಯಾಗಿದೆ.ಈ ಬಗ್ಗೆ ಪುಟ್ಟರಾಜು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಶೈಲೇಂದ್ರಕುಮಾರ್, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಕೃಷ್ಣ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಮಡಿಕೇರಿಯ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲಿಸಿದೆ.