ಭಾರತದಲ್ಲಿ ಚಳುವಳಿಗಳು ಕಂಡುಬರುವುದು ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ. ಅಂದು ಸಮಾಜದಲ್ಲಿ ಸೌಮ್ಯವಾದ ಮತ್ತು ತೀವ್ರವಾದ ಎಂಬ ಎರಡು ರೀತಿಯ ಹೋರಾಟಗಳು ಕಂಡುಬರುತ್ತಿತ್ತು. ಬಾಲ ಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಸುಭಾಷ್ ಚಂದ್ರ ಬೋಸ್ ಇವರುಗಳ ಸ್ವರಾಜ್ಯ ಜನ್ಮ ಸಿದ್ಧ ಹಕ್ಕು, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಸ್ವದೇಶಿ ಆಂದೋಲನ, ಉಪ್ಪಿನ ಸತ್ಯಾಗ್ರಹ, ಪಾನ ನಿರೋಧ, ದೇಶದಲ್ಲಿ ಸಂಚಲನ ಮೂಡಿಸಿತ್ತು. ಗಾಂಧೀಜಿಯವರ ಸ್ವದೇಶಿ ವಸ್ತುಗಳ ಬಳಕೆಗೆ ಕರೆ ನೀಡಿದ್ದಕ್ಕೆ ಸ್ಪಂದಿಸಿ ಲಕ್ಷಾಂತರ ಜನರು ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವದೇಶಿಯನ್ನು ಬಳಸಲು ಆರಂಭಿಸಿದರು. ಸಾವಿರಾರು ಮಂದಿ ಖಾದಿ ಬಟ್ಟೆಯನ್ನು ತಮ್ಮ ಜೀವಿತಾವಧಿಯವರೆಗೆ ಬಳಸುತ್ತಿದ್ದರು. ಪಾನ ನಿರೋಧ ಕರೆಗೆ ಓಗೊಟ್ಟು ಅನೇಕರು ಮದ್ಯ ಪಾನ ತ್ಯಜಿಸಿದರು. ದಂಡಿಯಾತ್ರೆ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕರಭಗ್ನ ಚಳುವಳಿ ಹೀಗೆ ಹಲವು ಚಳುವಳಿಗಳು ನಮ್ಮ ಸಮಾಜದಲ್ಲಿ ತಲ್ಲಣ ಉಂಟು ಮಾಡಿದವು. ರಾಜಾರಾಮ್ ಮೋಹನ್ ರಾಯರ ಸತಿ ಸಹಗಮನ ಪದ್ದತಿಯ ವಿರುದ್ಧ, ಬಾಲ್ಯ ವಿವಾಹದ ವಿರುದ್ಧ, ಡಾ|| ಅಂಬೇಡ್ಕರ್‍ರ ಅಸ್ಪøಶ್ಯತೆಯ ವಿರುದ್ಧದ ಹೋರಾಟಗಳು ಸಮಾಜದಲ್ಲಿ ಕ್ರಾಂತಿಯನ್ನುಂಟು ಮಾಡಿದವು.

ಈ ಮೇಲಿನ ಘಟನೆಗಳು ಸ್ವಾತಂತ್ರ್ಯ ಪೂರ್ವಾಧಾರಿತವಾಗಿದೆ. ಸ್ವಾತಂತ್ರ್ಯಾ ನಂತರವು ಇಂತಹ ಚಳುವಳಿಗಳು ಭಾರತದಲ್ಲಿ ಕಂಡುಬರುತ್ತದೆ. ವಿನೋದಾಬಾವೆರವರ ಭೂದಾನ ಚಳುವಳಿ, ಜಯಪ್ರಕಾಶ ನಾರಾಯಣ ರವರ ಜೆ.ಪಿ.ಚಳುವಳಿ ಸಮಾಜದಲ್ಲಿ ಸಂಚಲನ ಮೂಡಿಸಿತ್ತು. ಸಾಮಾಜಿಕ ವಾಗಿ ಬದಲಾವಣೆ ತಂದಿತ್ತು. ವಿನೋಬಾಭಾವೆಯವರ ಚಳುವಳಿಯಿಂದ ಪ್ರೇರಿತರಾಗಿ ಸಾವಿರಾರು ಜನರು ತಮ್ಮ ಹೆಚ್ಚುವರಿ ಭೂಮಿಯನ್ನು ದಾನ ಮಾಡಿದರು. ಅದೇ ರೀತಿ ಜಯಪ್ರಕಾಶ್ ರವರ ಜೆ.ಪಿ.ಚಳುವಳಿ ಸಮಾಜದಲ್ಲಿ ಮಹತ್ತರ ಬದಲಾವಣೆ ತಂದಿತು. ಶಾಂತವೇರಿ ಗೋಪಾಲಗೌಡರ ಪ್ರಭಾವ ದಿಂದ ಸಮಾಜದಲ್ಲಿ ಸಮಾಜವಾದದ ಚಿಂತನೆಗಳು ಆರಂಭವಾದವು.

ಇಂದು ಸಮಾಜದಲ್ಲಿ ಇಂತಹ ಕ್ರಾಂತಿಗಳು ಕಂಡುಬರುವುದಿಲ್ಲ. ಚಳುವಳಿಗಳು ರೂಪುಗೊಳ್ಳುವುದಿಲ್ಲ. ಸಮಾಜದಲ್ಲಿ ಕ್ರಾಂತಿ ಉಂಟು ಮಾಡುವ ನಾಯಕರುಗಳ ಕೊರತೆ ಎದ್ದು ಕಾಣುತ್ತದೆ. ಒಂದು ವೇಳೆ ಕೆಲವರು ಹೋರಾಟಕ್ಕಿಳಿದರೆ ಅವರಿಗೆ ಬೆಂಬಲ ಸಿಗುವುದಿಲ್ಲ. ಏಕೆಂದರೆ ಜನರು ಅವರವರ ದೈನಂದಿನ ಬದುಕಿಗೆ ಅವಶ್ಯಕತೆಗೆ ಅಂಟಿ ಹೋಗಿದ್ದಾರೆ. ಸಮಾಜವು ಕೂಡ ಹೋರಾಟಗಾರರನ್ನು ಸಮಾಜ ವಿರೋಧಿಗಳೆಂಬಂತೆ ಬಿಂಬಿಸುತ್ತಾರೆ. ಯಾವ ಸಮಾಜದಲ್ಲಿ ವಿದ್ಯಾವಂತರು ಬದಲಾವಣೆ ತರ ಬೇಕಿತ್ತೋ ಅವರು ಹೋರಾಟದಿಂದ ದೂರ ಉಳಿದಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಯಾವುದೋ ಒಂದು ಸಿದ್ಧಾಂತಕ್ಕೆ ಸೀಮಿತವಾಗಿಲ್ಲ. ಅಥವಾ ಒಂದು ಪಕ್ಷಕ್ಕೆ ಒಬ್ಬ ನಾಯಕನಿಗೆ ನಿಷ್ಠನಾಗಿರುವ ಕಾರ್ಯಕರ್ತರು ಕಾಣುವುದಿಲ್ಲ. ಇಂದು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವ ವೇದಿಕೆ ಯಾಗಿದೆಯೇ ಹೊರತು ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡುವ ವೇದಿಕೆಯಾಗಿಲ್ಲ ಎನ್ನಬಹುದು.

ಇತ್ತೀಚಿನ ದಿನಗಳಲ್ಲಿ ಭಾರತವು ಕಂಡ ಜನಪ್ರಿಯ ನಾಯಕರುಗಳಲ್ಲಿ ನರೇಂದ್ರ ಮೋದಿಯವರು ಒಬ್ಬರು. ಅವರಿಗೆ ಅಟಲ್ ಬಿಹಾರಿ ವಾಜಪೇಯಿಯವರಿಗೆ ಹೇಗೆ ಅಭಿಮಾನಿಗಳ ವೃಂದವಿತ್ತೋ, ಇವರಿಗೂ ಅದೇ ರೀತಿಯ ಅಭಿಮಾನಿ ವೃಂದವಿದೆ. ಆದರೆ ಅಂತಹ ನಾಯಕರ ಧ್ಯೇಯ ಉದ್ದೇಶಗಳು ಕೂಡ ಸಮಾಜದಲ್ಲಿ ಚಳುವಳಿಗಳಾಗಿ ಪರಿವರ್ತನೆಯಾಗುವು ದಿಲ್ಲ. ಇತ್ತೀಚಿನ ದಿನಗಳಲ್ಲಿ ನಾವು ನಾಯಕರುಗಳ ಮೇಲೆ ಇರುವ ಅಭಿಮಾನ ವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತೇವೆ ಹೊರತು ಅವರ ನಿಲುವುಗಳನ್ನು ಅವರ ಉದ್ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಮಹಾತ್ಮ ಗಾಂಧಿಯವರು ಕಂಡ “ಸ್ವಚ್ಛ ಭಾರತ” ಮತ್ತು “ಪ್ಲಾಸ್ಟಿಕ್ ಮುಕ್ತ ಭಾರತ” ಎಂಬ ಕನಸನ್ನು ನನಸು ಮಾಡಲು ಹೊರಟಿರುವ ಸನ್ಮಾನ್ಯ ಮೋದಿಯವರ ಅಭಿಯಾನವನ್ನು ಕೊನೇ ಪಕ್ಷ ಅವರ ಪಕ್ಷದ ಕಾರ್ಯಕರ್ತರು, ಅವರ ಅಭಿಮಾನಿಗಳು ಅದನ್ನು ಆಂದೋಲನವನ್ನಾಗಿ ಪರಿವರ್ತಿಸಿದರೆ ಅದನ್ನು ತಮ್ಮ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಭಾರತದ ನಗರಗಳು, ಬೀದಿಗಳು ಶೇ.90ರಷ್ಟು ತನ್ನಷ್ಟಕ್ಕೆ ತಾನೇ ಸ್ವಚ್ಛಗೊಳ್ಳುತ್ತಿದ್ದವು. ಇಂದು ಭಾರತದಲ್ಲಿ ನಾವು ನಮ್ಮ ನಾಯಕರನ್ನು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟೇ ಅವರ ಧ್ಯೇಯ ಗಳನ್ನು ಪ್ರೀತಿಸಬೇಕು. ಆಗ ನಾವು ಅವರಿಗೆ ತೋರುವ ನಿಜವಾದ ಗೌರವ.

ಈ ಮೇಲಿನ ಉಲ್ಲೇಖಗಳೇಂದರೆ ಇಂದು ಸಮಾಜದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಒಂದು ಬಹು ದೊಡ್ಡ ಚಳುವಳಿಯೇ, ಆರಂಭವಾಗಿದೆ. ಗ್ರಾಮ ಪಂಚಾಯಿತಿಯಿಂದ ಸಂಸತ್ತಿನ ವರೆಗೆ ಪ್ಲಾಸ್ಟಿಕ್ ನಿಷೇಧದ ಕೂಗು ಕೇಳಿ ಬಂತು. ಪ್ರತಿಜ್ಞಾ ವಿಧಿಗಳು, ಮೆರವಣಿಗೆಗಳು, ಜನಾಂದೋಲನಗಳು ನಡೆದವು. ಸಮಾಜವನ್ನು ಎಚ್ಚರಗೊಳಿಸಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಲಾಯಿತು. ಆದರೆ ಸಮಾಜ ಮಾತ್ರ ಎಚ್ಚರಗೊಳ್ಳಲಿಲ್ಲ. ಇಂದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸಿದಾಗ ಇದು ನಿಜವೆನಿಸುತ್ತದೆ. ಇದು ನಮ್ಮ ಪರಿಸರವನ್ನು ಉಳಿಸಲು ನೀಡಿದ ಕರೆ. ನಮ್ಮ ಮಕ್ಕಳನ್ನು ಭೂಮಂಡಲವನ್ನು ವಿಷಮುಕ್ತವಾಗಿಸುವ ಪ್ರಯತ್ನ. ಆದರೆ ಜನರು ಅದಕ್ಕೆ ಸ್ಪಂದಿಸಲೇ ಇಲ್ಲ.

ಸಣ್ಣ ಉದಾಹರಣೆ ಎಂದರೆ ನಾವು ನಮ್ಮ ನಿತ್ಯ ಜೀವನದಲ್ಲಿ ಬಟ್ಟೆಯ ಕೈಚೀಲವನ್ನು ಹಿಡಿಯದಷ್ಟು ಸೋಮಾರಿಯಾಗಿದ್ದೇವೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಲ್ಲಿ ಪ್ರವೀಣರು. ನಮ್ಮ ಕಾಂಪೌಂಡಿನಿಂದ, ನಮ್ಮ ಬೀದಿಯಿಂದ ಹೊರ ಹಾಕಿದರೆ ಸಾಕು ಎಂಬ ಧೋರಣೆಯವರು. ನಮ್ಮ ಜವಾಬ್ದಾರಿ ಕಳೆಯಿತು ಎಂಬ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ಇಂದು ನಾವು ನಮ್ಮ ಜೀವನದಲ್ಲಿ ನಮಗೆ ನಾವೇ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ ವಿಧಿಸಿ ಕೊಳ್ಳಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಮರುಬಳಕೆಯ ವಸ್ತುಗಳನ್ನು ಬಳಸಲು ಅಭ್ಯಾಸ ಮಾಡಬೇಕು. ಈ ಬಗ್ಗೆ ನಮ್ಮನ್ನು ನಾವೇ ಪ್ರಶ್ನಿಸಿಕೊಂಡು ಚಿಂತನೆ ನಡೆಸಬೇಕು. ಇಲ್ಲದಿದ್ದರೆ ನಮ್ಮ ನಾಶಕ್ಕೆ ಅದರೊಡನೆ ನಮ್ಮ ಮುಂದಿನ ಪೀಳಿಗೆಯ ನಾಶಕ್ಕೂ ನಾವೇ ಕಾರಣರಾಗುತ್ತೇವೆ.

?ಬಾಳೆಯಡ ಕಿಶನ್ ಪೂವಯ್ಯ

ವಕೀಲರು ಮತ್ತು ನೋಟರಿ, ಮಡಿಕೇರಿ.