ಶ್ರೀಮಂಗಲ, ಜ. 20: ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಅಕ್ರಮವಾಗಿ ಸರಕಾರದ ಜಾಗÀ ಒತ್ತುವರಿ ಮಾಡಿ ಕೊಂಡು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇದರ ತೆರವಿಗಾಗಿ ಮತ್ತು ಸರಕಾರಕ್ಕೆ ಸಂಪನ್ಮೂಲ ಕ್ರ್ರೊಢೀಕರಿಸುವ ನಿಟ್ಟಿನಲ್ಲಿ ಸರಕಾರಿ ಜಾಗ ಸಂರಕ್ಷಣಾ ಸಮಿತಿಯನ್ನು ರಚನೆ ಮಾಡಲಾಗಿದ್ದು, ಈ ಸಮಿತಿಯ ಅಧ್ಯಕ್ಷರನ್ನಾಗಿ ನೀಡಿರುವ ಜವಾಬ್ದಾರಿಯನ್ನು ಎಂತಹದೇ ಸವಾಲು ಬಂದರೂ ಯಶಸ್ವಿಯಾಗಿ ನಿಭಾಯಿಸುವುದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಮತ್ತು ಸರಕಾರದ ಜಾಗ ಸಂರಕ್ಷಣಾ ಸಮಿತಿಯ ನೂತನ ಅಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.

ಅವರು ಬಿರುನಾಣಿ ಯಲ್ಲಿ ಭಾನುವಾರ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ರಾಬಿನ್‍ದೇವಯ್ಯ ಮತ್ತು ವೀರಾಜಪೇಟೆ ಮಂಡಲ ಅಧ್ಯಕ್ಷ ಚಲನ್‍ಕುಮಾರ್ ಅವರುಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ಸರಕಾರದಲ್ಲಿ ಅಪ್ಪ ಮಕ್ಕಳು ರಾಜ್ಯ ಸರಕಾರದ ಖಜಾನೆಯನ್ನು ಲೂಟಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಆರ್ಥಿಕ ಕ್ರ್ರೊಢೀಕರಣ ಮಾಡಲು ಈ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದರು. ಕಳೆದ ಸರಕಾರ ಮಾಡಿದÀ ಆಶ್ರಯ ಮನೆ ಹಂಚಿಕೆಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಆಗಿದೆ. ಯಾರ್ಯಾರಿಗೋ ಮನೆಗಳನ್ನು ಮಾಡಿಕೊಟ್ಟಿದ್ದಾರೆ. ರಾಜ್ಯ ಹಾಗೂ ರಾಷ್ಟದಲ್ಲಿ ನಮ್ಮದೇ ಸರಕಾರ ಇರುವುದರಿಂದ ಜನರಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದೆ. ಜನರು ನಮ್ಮ ಆಡÀಳಿತದಿಂದ ಹೆಚ್ಚಿನದನ್ನು ನಿರೀಕ್ಷಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿಯೂ ಸರಕಾರಿ ಜಾಗ ಒತ್ತುವರಿಯಾಗಿದೆ. ಅನುಭವದಲ್ಲಿರುವ ಜಾಗ ಸೇರಿದಂತೆ ಗರಿಷ್ಠ 5 ಎಕರೆಯಷ್ಟು ಕೃಷಿ ಜಾಗ ಒತ್ತುವರಿ ಮಾಡಿಕೊಂಡವರಿಗೆ ಮಂಜೂರು ಮಾಡಲು ಅವಕಾಶವಿದೆ. ಅದು ಬಿಟ್ಟು ಹೆಚ್ಚಿನ ಜಾಗ ಮಾಡಿಕೊಂಡರೆ ಮಂಜೂರಾತಿ ಮಾಡುವುದು ಹೇಗೆ? ಉಳ್ಳವರು ಒತ್ತುವರಿ ಮಾಡಿಕೊಂಡರೆ ಸರಕಾರದ ಅಭಿವೃದ್ಧಿಗೆ ಕೆಲಸ ಹೇಗೆ ಮಾಡುವುದು ಎಂದು ಅವರು ಪ್ರಶ್ನಿಸಿದರು.

ಪರಿಸರವಾದಿಗಳು ಮತ್ತು ಅರಣ್ಯ ಇಲಾಖೆ ಸೇರಿಕೊಂಡು ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ತಡೆ ಮಾಡುತ್ತಿವೆ ಎಂದು ಕಿಡಿಕಾರಿದ ಅವರು; ಮಾಕುಟ್ಟ ಸೇತುವೆ ಕಾಮಗಾರಿಗೆ ಕೊಡಗಿನವರೇ ಆದ ಡಿ.ಎಫ್.ಓ ತಡೆಮಾಡುತ್ತಿದ್ದಾರೆ ಎಂದು ದೂರಿದರು.

ಸುಬ್ರಹ್ಮಣ್ಯ-ಬಿಸಿಲೆ, ಕೂಟಿಯಾಲ ರಸ್ತೆ ನಿರ್ಮಾಣಕ್ಕೆ ಉಂಟಾಗುವ ಅರಣ್ಯ ನಷ್ಟ ತುಂಬಿಸಿಕೊಡಲು ಪರ್ಯಾಯವಾಗಿ 12 ಎಕರೆ ಅರಣ್ಯ ಬೆಳೆಸುವ ಯೋಜನೆ ರೂಪಿಸಿದ್ದರೂ ಇದಕ್ಕೆ ಅರಣ್ಯ ಇಲಾಖೆ ಸಮ್ಮತಿ ನೀಡಿಲ್ಲ ಎಂದು ಕಿಡಿ ಕಾರಿದ ಅವರು; ಅರಣ್ಯ ಇಲಾಖೆ ಹಾಗೂ ಪರಿಸರವಾದಿಗಳಿಂದ ತಡೆಯಾಗಿರುವ ಎಲ್ಲಾ ಯೋಜನೆಗಳನ್ನು ನಮ್ಮ ಸರಕಾರದ ಅವಧಿ ಮುಗಿಯುವವರೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.